ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಿಲುಧಾಮ ಸ್ಥಾಪನೆಗೆ ಪ್ರಸ್ತಾವ

Last Updated 19 ನವೆಂಬರ್ 2017, 4:39 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಈ ಭಾಗದಲ್ಲಿ ನವಿಲುಗಳು ಅಧಿಕವಾಗಿರುವುದರಿಂದ ಅವುಗಳ ಸಂರಕ್ಷಣೆಗಾಗಿ ಇಲ್ಲಿ ‘ನವಿಲುಧಾಮ’ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ತಿಳಿಸಿದರು. ಇಲ್ಲಿನ ಕೌಡಿಯಾಳ ಧರಿ ಹತ್ತಿರದಲ್ಲಿ ಶನಿವಾರ ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಉದ್ಯಾನಕ್ಕಾಗಿ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ₹1.20 ಕೋಟಿ ಒದಗಿಸಲಾಗುತ್ತದೆ. ಆವರಣ ಗೋಡೆ, ಈಜುಕೊಳ, ಮಕ್ಕಳ ಆಟದ ಮೈದಾನದ ವ್ಯವಸ್ಥೆ ಕಲ್ಪಿಸಿ ಗಿಡಗಳನ್ನು ನೆಡಲಾಗುತ್ತದೆ. ಎಲ್ಲೆಡೆ ವಾಯು ಮಾಲಿನ್ಯ ಆಗುತ್ತಿರುವ ಕಾರಣ ಇಂಥ ಉದ್ಯಾನಗಳು ನಿರ್ಮಿಸುವುದು ಮತ್ತು ಮನೆ, ಅಂಗಡಿಗಳ ಅಕ್ಕಪಕ್ಕದಲ್ಲಿ ಗಿಡಗಳನ್ನು ನೆಡುವುದು ಅತ್ಯಂತ ಅವಶ್ಯಕವಾಗಿದೆ’ ಎಂದರು.

‘ಉದ್ಯಾನದಲ್ಲಿನ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಇಲಾಖೆಯವರು ಕಾಳಜಿವಹಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ತಾಲ್ಲೂಕಿನ ಎಲ್ಲ ರಸ್ತೆಗಳ ಪಕ್ಕದಲ್ಲಿ ಗಿಡಗಳನ್ನು ನೆಡಲು ಯೋಜಿಸಲಾಗಿದೆ. ಮರಗಳನ್ನು ಬೆಳೆಸಲು ಸಾರ್ವಜನಿಕರು ಸಹಕರಿಸಬೇಕು’ ಎಂದು ವಿನಂತಿಸಿದರು.

ಪರಿಸರ ವಾಹಿನಿ ಜಿಲ್ಲಾ ಸಂಚಾಲಕ ಶೈಲೇಂದ್ರ ಕಾವಡಿ ಮಾತನಾಡಿ, ‘ಗಿಡಗಳಿದ್ದರೆ ಮಾತ್ರ ಮಳೆ ಸಮರ್ಪಕವಾಗಿ ಸುರಿಯುತ್ತದೆ. ಆಮ್ಲಜನಕ ದೊರೆತು ಎಲ್ಲರ ಆರೋಗ್ಯ ಉತ್ತಮವಾಗಿರುತ್ತದೆ’ ಎಂದರು.

ವಲಯ ಅರಣ್ಯಾಧಿಕಾರಿ ಮಹ್ಮದ್ ಅಲಿಯೊದ್ದೀನ್ ಮಾತನಾಡಿ, ‘ಉದ್ಯಾನದ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ಮಕ್ಕಳ ಆಟಿಕೆ ಸಾಮಗ್ರಿ ಮತ್ತು ವ್ಯಾಯಾಮದ ವ್ಯವಸ್ಥೆಯನ್ನು ಕೂಡ ಇಲ್ಲಿ ಕಲ್ಪಿಸಲಾಗುತ್ತದೆ’ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಅಜರಅಲಿ ನವರಂಗ, ತಹಶೀಲ್ದಾರ್ ಜಗನ್ನಾಥರೆಡ್ಡಿ, ಎ.ಎಂ.ಚಿಕ್ಕಮಠ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಶಬ್ಬೀರಪಾಶಾ ಮುಜಾವರ್, ಕೇಶಪ್ಪ ಬಿರಾದಾರ, ದಿಲೀಪಗಿರಿ ಗೋಸಾಯಿ, ಪುಷ್ಪರಾಜ ಹಾರಕೂಡೆ, ಸಂಜೀವ ಗಾಯಕವಾಡ, ಸಂಗಮೇಶ ಬಿರಾದಾರ, ನವನಾಥ, ಸಂಜೀವಕುಮಾರ, ವಲಯ ಉಪ ಅರಣ್ಯಾಧಿಕಾರಿಗಳಾದ ಮಹಿಬೂಬ್ ಸಾಬ್, ಪವನಕುಮಾರ, ಶಿವಾನಂದ, ವೀರಭದ್ರ, ದಯಾನಂದ, ಪ್ರಶಾಂತ, ಗುರುಪಾದಯ್ಯ ಸ್ವಾಮಿ ಇದ್ದರು.

* * 

ಸುತ್ತ 372 ಎಕರೆ ಅರಣ್ಯವಿದ್ದು ಸುಂದರ ಪರಿಸರದಲ್ಲಿ ಉದ್ಯಾನ ನಿರ್ಮಿಸಲಾಗುತ್ತಿದೆ. ಈಜುಕೊಳ ಹಾಗೂ ಇತರೆ ಸೌಲಭ್ಯ ಕಲ್ಪಿಸಲಾಗುತ್ತದೆ.
ಮಹ್ಮದ್ ಅಲಿಯೊದ್ದೀನ್
ವಲಯ ಅರಣ್ಯ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT