ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಇಡಿ ಪದವೀಧರ ಈಗ ಹೆಮ್ಮೆಯ ರೈತ!

Last Updated 19 ನವೆಂಬರ್ 2017, 8:43 IST
ಅಕ್ಷರ ಗಾತ್ರ

ಕಾಳಗಿ: ಡಿ.ಇಡಿ ಅಥವಾ ಬಿ.ಇಡಿ ಕೋರ್ಸ್‌ ಪೂರ್ಣಗೊಳಿಸಿದವರು ಸಾಮಾನ್ಯವಾಗಿ ಶಿಕ್ಷಕ ವೃತ್ತಿ ಅಥವಾ ಸರ್ಕಾರಿ ನೌಕರಿ ಆಯ್ದುಕೊಳ್ಳುತ್ತಾರೆ. ಆದರೆ, ಕಾಳಗಿಯ ಬಿಇಡಿ ಪದವಿಧರ ಪ್ರಭು ಡೋಂಗರೆ ಶಿಕ್ಷಕರಾಗುವ ಬದಲು ರೈತರಾಗಿದ್ದಾರೆ. ಶಿಕ್ಷಕ ವೃತ್ತಿಗಿಂತ ರೈತನ ಕಾರ್ಯವೇ ಅವರಿಗೆ ಹೆಚ್ಚು ತೃಪ್ತಿ ತಂದಿದೆ. ಜೊತೆಗೆ ಹೆಚ್ಚಿನ ಆದಾಯವೂ ಗಳಿಸುತ್ತಿದ್ದಾರೆ.

ಚಿಕ್ಕಂದಿನಲ್ಲಿ ತಂದೆಯನ್ನು ಕಳೆದುಕೊಂಡು ತಾಯಿ ಆಸರೆಯಲ್ಲಿ ಬೆಳೆದ ಪ್ರಭು ಶಿಕ್ಷಕನಾಗುವ ಹಂಬಲದಿಂದ ಬಿ.ಇಡಿ ಪದವಿ ಗಳಿಸಿದರು. ಆದರೆ ಮನದ ಇಚ್ಛೆಯಂತೆ ನೇಗಿಲು ಹಿಡಿದು ರೈತರಾಗಲು ಇಷ್ಟಪಟ್ಟರು.

ಕೋಡ್ಲಿ ರಸ್ತೆ ಬದಿಯ ತಮ್ಮ ಸ್ವಂತ 14ಎಕರೆ ಜಮೀನಿನಲ್ಲಿ ಕೆಲ ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ತೆರೆದ ಬಾವಿಯ ನೀರು ಪಡೆಯಲು ಜನರೇಟರ್ ಎಂಜಿನ್ ಖರೀದಿಸಿ ಒಂದು ಎಕರೆಯಲ್ಲಿ ಅಧಿಕ ಇಳುವರಿಯ ಈರುಳ್ಳಿ ಬೆಳೆದು ಉತ್ತಮ ಆದಾಯ ಗಳಿಸಿದ್ದಾರೆ. ನೀರು ಸಾಲದಕ್ಕೆ ಹೊಸ ಕೊಳವೆ ಬಾವಿಯೊಂದನ್ನು ಕೊರೆಸಿದ್ದಾರೆ.

‘5 ವರ್ಷದಿಂದ 2 ಎಕರೆಯಲ್ಲಿ ಬಾಳೆ ಬೆಳೆಯುತ್ತಿದ್ದೇನೆ. ಬಾಳೆಹಣ್ಣಿನ ಮಾರಾಟದಿಂದ ಕಳೆದ ವರ್ಷ ₹ 3ಲಕ್ಷ ಆದಾಯ ಬಂತು. 3 ಎಕರೆಯಲ್ಲಿ ದ್ರಾಕ್ಷಿ ಕೂಡ ಬೆಳೆಯುತ್ತಿದ್ದೇನೆ. ಕಳೆದ ವರ್ಷ 2 ಕ್ವಿಂಟಲ್‌ನಷ್ಟು ಉತ್ತಮ ಬೆಳೆ ಬಂತು’ ಎಂದು ಪ್ರಭು ತಿಳಿಸಿದರು.

‘ಉದ್ಯೋಗ ಖಾತ್ರಿ ಯೋಜನೆಯಡಿ 2 ಎಕರೆ ನಿಂಬೆ, 2 ಎಕರೆ ನುಗ್ಗೆ ಬೆಳೆದಿದ್ದೇನೆ. ಕೃಷಿ ಭಾಗ್ಯ ಯೋಜನೆಯಡಿ ಅರ್ಧ ಎಕರೆಯಲ್ಲಿ ಗ್ರೀನ್ ಹೌಸ್‌ ನಿರ್ಮಿಸಿ ಆರಂಭದಲ್ಲಿ ಹೀರೆಕಾಯಿ ಬೆಳೆದು ಉತ್ತಮ ಲಾಭ ಬಂದಿದೆ. ಈಗ ಅದರಲ್ಲಿ ಡಬ್ಬು ಮೆಣಸಿನಕಾಯಿ ಬೆಳೆಯುತ್ತಿದ್ದು ಕಾಯಿ ಮಾರಾಟಕ್ಕೆ ಬಂದಿದೆ’ ಎಂದು ತಿಳಿಸಿದರು.

‘ರಾಷ್ಟ್ರೀಯ ತೋಟಗಾರಿಕಾ ಮಿಷನ್ ಬಾಳೆ ಬೆಳೆಗೆ ₹ 18 ಸಾವಿರ ಪ್ರೋತ್ಸಾಹಧನ ನೀಡಿದೆ. ಶಹಾಪುರ ಭೀಮರಾಯ ಗುಡಿ ಕೃಷಿ ಮಹಾವಿದ್ಯಾಲಯವು ವಿವಿಧ ಹಣ್ಣಿನ ಸಸಿಗಳನ್ನು ಕೊಟ್ಟಿದೆ. ಕಿಟ್‌ಸರ್ಡ್ ಸಂಸ್ಥೆಯು ಕುರಿ ಸಾಕಾಣಿಕೆ ಕುರಿತು ತರಬೇತಿ ನೀಡಿದೆ. ಹೊಲದಲ್ಲಿ ಮಾವು, ಜಾಪಳ, ಕರಿಬೇವು, ತೆಂಗು, ಅಂಜುರು ಸೇರಿದಂತೆ 170 ಗಿಡಗಳು ಬೆಳೆಯುತ್ತಿವೆ. ನಿಂಬೆ ಬೆಳೆಯ ಮಧ್ಯೆ ಜಿಆರ್‌ಜಿ 811 ತಳಿಯ ತೊಗರಿ ಬೆಳೆಯುತ್ತಿದ್ದೇನೆ. ಹೊಲದ ತುಂಬೆಲ್ಲ ಹನಿ ನೀರಾವರಿ ಅಳವಡಿಸಲಾಗಿದೆ’ ಎಂದು ವಿವರಿಸಿದರು.

‘ಹೊಲದಲ್ಲಿ ಕೆಲಸ ಮಾಡಲು ಕೂಲಿಕಾರ್ಮಿಕರ ಬರ ಇದೆ. ಆದ್ದರಿಂದ ಕುಟುಂಬ ಸದಸ್ಯರು ಜೊತೆಗೂಡಿ ಇಲ್ಲಿ ಕೆಲಸ ಮಾಡುತ್ತಿದ್ದೇವೆ. ಹೊಲದಲ್ಲಿ ಮನೆ ಕಟ್ಟಿಸಿದ್ದೇವೆ. ಕೃಷಿ ಜತೆಗೆ ಕುರಿ ಸಾಕಾಣಿಕೆ, ಹೈನುಗಾರಿಕೆ ಚಟುವಟಿಕೆಯಲ್ಲಿ ತೊಡಗುವ ಉದ್ದೇಶವಿದೆ. ಸಾವಯವ ಕೃಷಿ ಬಗ್ಗೆಯೂ ಆಸಕ್ತಿಯಿದೆ’ ಎಂದು ತಿಳಿಸಿದರು.

* * 

ಶಿಕ್ಷಕನಾಗುವ ಬಯಕೆ ಇತ್ತು. ಆದರೆ ಕೃಷಿ ಕ್ಷೇತ್ರದ ಕೆಲಸವೇ ಹೆಚ್ಚು ತೃಪ್ತಿದಾಯಕ ಅನ್ನಿಸಿತು. ಕುರಿ ಸಾಕಾಣಿಕೆ, ಹೈನುಗಾರಿಕೆ ಕೈಗೊಳ್ಳುವ ಉದ್ದೇಶವಿದೆ.
 ಪ್ರಭು ಡೋಂಗರೆ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT