ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವತಂತ್ರಧರ್ಮದ ಕಾವು ಚುನಾವಣೆವರೆಗೆ

Last Updated 19 ನವೆಂಬರ್ 2017, 6:40 IST
ಅಕ್ಷರ ಗಾತ್ರ

ಕುಷ್ಟಗಿ: ’ಸಂವಿಧಾನದಲ್ಲಿ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ದೊರಕಿಸಿಕೊಡುವ ವಿಚಾರ ಸುಲಭದ ಮಾತಲ್ಲ ಎಂದು ಕಾನೂನು ತಜ್ಞರು, ನಿವೃತ್ತ ನ್ಯಾಯಾಧೀಶರು ಸ್ಪಷ್ಟ ಅಭಿಪ್ರಾಯ ನೀಡಿದ್ದಾರೆ. ಆದರೂ ಕೆಲವೇ ಜನ ಮಠಾಧೀಶರು, ರಾಜಕಾರಣಿಗಳು ಈ ವಿಚಾರದಲ್ಲಿ ನಡೆಸಿರುವ ಹೋರಾಟಕ್ಕೆ ಯಾರಿಂದಲೂ ಸಹಮತ ಸಿಗುವುದಿಲ್ಲ’ ಎಂದು ರಂಭಾಪುರಿ ಪೀಠದ ಪ್ರಸನ್ನ ರೇಣುಕ ಸ್ವಾಮೀಜಿ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೂ ಧರ್ಮ ಭಾರತೀಯ ಸಂಸ್ಕೃತಿಯಿಂದ ಹೊರತಾಗಿಲ್ಲ, ಒಂದೊಮ್ಮೆ ಪ್ರತ್ಯೇಕ ಧರ್ಮ ಮಾನ್ಯತೆ ದೊರೆತರೂ ಕೆಲ ಜಾತಿ ಸಮುದಾಯಗಳು ಪಡೆಯುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಕೆಲ ಸಮುದಾಯಗಳಲ್ಲಿ ಜಗಳ ಹಚ್ಚುವ ಮೂಲಕ ಮನಸ್ಸುಗಳನ್ನು ಛಿದ್ರಗೊಳಿಸುತ್ತಿರುವ ರಾಜಕಾರಣಿಗಳು ಮತ್ತು ಅಗ್ಗದ ಪ್ರಚಾರಕ್ಕಾಗಿ ಕೆಲ ಸ್ವಯಂ ಘೋಷಿತ ಮಠಾಧೀಶರಿಂದ ಸಮಾಜ ಹಾಳಾಗುತ್ತಿದೆ ಎಂದರು.

ಸುಳ್ಳುಪಟ್ಟಿ: ಲಿಂಗಾಯತ ಧರ್ಮದಲ್ಲಿರುವ ಉಪ ಪಂಗಡಗಳ ಬಗ್ಗೆ ಸುಳ್ಳು ಜಾಹೀರಾತು ನೀಡಲಾಗುತ್ತಿದೆ. ಎಲ್ಲ ಉಪ ಪಂಗಡಗಳು ಈಗಾಗಲೇ ಸರ್ಕಾರದ ಸೌಲಭ್ಯ ಪಡೆದು ದೂರ ಹೋಗಿರುವುದರಿಂದ ಪ್ರತ್ಯೇಕ ಧರ್ಮ ಸ್ಥಾಪಕರ ಹಿಂದೆ ಬರುವವರು ಯಾರೂ ಇಲ್ಲ. ಪಂಚಮಸಾಲಿ, ಬಣಜಿಗ, ನೊಣಬ, ಗಾಣಿಗ, ಸಾದರು ಈ ಕೆಲ ಪ್ರಮುಖ ಜಾತಿಗಳಲ್ಲೇ ಒಗ್ಗಟ್ಟು, ಸಹಮತ ಇಲ್ಲದಿರುವಾಗ 99 ಉಪ ಪಂಗಡಗಳಲ್ಲಿ ಒಮ್ಮತ ಮೂಡಲು ಸಾಧ್ಯವಿಲ್ಲ. ಮಠಾಧೀಶರು, ರಾಜಕಾರಣಿಗಳು ತಪ್ಪುಕಲ್ಪನೆ ಮೂಡಿಸಿ ಸಮಾಜದ ವಿಘಟನೆಗೆ ಅವಕಾಶ ಕಲ್ಪಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ ಎಂದರು.

ಚುನಾವಣೆ ಪ್ರೇರಿತ: ಚುನಾವಣೆ ಸಮೀಪಿಸಿರುವ ಕಾರಣಕ್ಕೆ ಸ್ವತಂತ್ರಧರ್ಮ ಮತ್ತು ರಾಜಕೀಯ ಪೋಷಿತ ಸಮಾವೇಶಗಳು ನಡೆಯುತ್ತಿವೆ. ಚುನಾವಣೆ ನಂತರ ತಣ್ಣಗಾಗುತ್ತದೆ. ಮುಂಚೂಣಿಯಲ್ಲಿರುವರು ಚುನಾವಣೆಯಲ್ಲಿ ಪೆಟ್ಟು ತಿನ್ನುವುದು ಖಚಿತ ಎಂದು ಸಚಿವರಾದ ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ ಅವರ ಹೆಸರು ಪ್ರಸ್ತಾಪಿಸದೆ ಸೂಚ್ಯವಾಗಿ ಹೇಳಿದರು.

ರಾಜಕಾರಣಿಗಳಿಗೆ ಮಾಡುವುದಕ್ಕೆ ಬೇಕಾದಷ್ಟು ಕೆಲಸಗಳಿವೆ ಅದನ್ನು ಬಿಟ್ಟು ಅನ್ಯ ವಿಚಾರಗಳಲ್ಲಿ ತಲೆಹಾಕದೆ ಧರ್ಮದ ಜವಾಬ್ದಾರಿಗಳನ್ನು ಧರ್ಮಪೀಠಗಳಿಗೆ ಬಿಡಬೇಕು ಎಂದರು.

ಗುರು ಅಲ್ಲ ಸುಧಾರಕ: ವಿಶ್ವಮಾನವ ವ್ಯಕ್ತಿತ್ವದ ಬಸವಣ್ಣ ಧರ್ಮ ಸುಧಾರಕರಾದರು. ಶೈವನಾದ ನಾನು ವೀರಶೈವನಾದೆ ಎಂದು ಹೇಳಿಕೊಂಡಿದ್ದಾರೆ ಹೊರತು ತಾನು ಗುರು, ಸ್ವಾಮಿ ಎಂದು ಹೇಳಿಕೊಂಡಿಲ್ಲ. ಆದರೆ, ಈಗ ಕೆಲವೇ ಜನ ಆವರು ಲಿಂಗಾಯತ ಧರ್ಮ ಸಂಸ್ಥಾಪಕ ಎಂಬ ತಪ್ಪುಕಲ್ಪನೆಯನ್ನು ಬಿತ್ತುವುದರ ಮೂಲಕ ಸಮಾಜದಲ್ಲಿ ಭಿನ್ನತೆ ಹುಟ್ಟುಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗದಗದಲ್ಲಿ ಸಮ್ಮೇಳನ: ವೀರಶೈವ ಲಿಂಗಾಯತ ಸ್ವತಂತ್ರ ಧರ್ಮದಲ್ಲಿನ ಸಂದೇಹಗಳನ್ನು ನಿವಾರಿಸಲು ಡಿ 24 ರಂದು ಗದುಗಿನಲ್ಲಿ ಜನಜಾಗೃತಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ.

ಪಂಚಪೀಠಗಳು, ವಿರಕ್ತ ಪೀಠಗಳ ಎಲ್ಲ ಗುರುಗಳು, ಮಠಾಧೀಶರು ಭಾಗವಹಿಸಲಿದ್ದಾರೆ. ಆದರೆ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ಹೊರತುಪಡಿಸಿ ಯಾವುದೇ ರಾಜಕಾರಣಿಗಳಿಗೆ ವೇದಿಕೆಯಲ್ಲಿ ಅವಕಾಶ ಇಲ್ಲ ಭಕ್ತರಾಗಿ ಬರಬಹುದು ಎಂದು ಸ್ವಾಮೀಜಿ ವಿವರಿಸಿದರು.

ಪಂಚಪೀಠಗಳ ಮೇಲಷ್ಟೇ ಏಕೆ ಕಣ್ಣು?: ಪಂಚಪೀಠಗಳು ಜಾತಿ ವರ್ಗೀಕರಣ ಮಾಡುವುದಿಲ್ಲ. ತಾರತಮ್ಯ ಇಲ್ಲದೆ ಸಹಭೋಜನ ನಡೆಯುತ್ತದೆ. ಪೀಠಗಳಿಗೆ ಬರುವವರ ಜಾತಿ ಕೇಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ರಂಭಾಪುರಿ ಶ್ರೀ, ಪಲ್ಲಕ್ಕಿಯಲ್ಲಿ ಗುರುವನ್ನು ಕೂರಿಸಬೇಕೆಂಬುದು ಭಕ್ತರ ಅಪೇಕ್ಷೆ ಹೊರತು ಅದರಲ್ಲಿ ಕುಳಿತುಕೊಳ್ಳುವಲ್ಲಿ ಅಹಂ ಭಾವ ಇಲ್ಲ. ಆದರೆ, ಹಿಂದೆ ಪಲ್ಲಕ್ಕಿಯಲ್ಲಿ ಕುಳಿತವರೇ ಈಗ ಟೀಕೆ ಮಾಡುತ್ತಿದ್ದಾರೆ ಎಂದರು.

* * 

ನಾಸ್ತಿಕರಾದ ಸಚಿವ ಬಸವರಾಜ ರಾಯರೆಡ್ಡಿ, ಚಂಪಾ ಅಂಥವರಿಗೆ ಧರ್ಮದ ಪರಿಕಲ್ಪನೆ ಅರಿವಿಗೆ ಬರುವುದಿಲ್ಲ.
ರಂಭಾಪುರಿ ಶ್ರೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT