ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಂಚಾಯಿತಿಗೊಂದು ನಮ್ಮೂರ ಮಾದರಿ ಶಾಲೆ’

Last Updated 19 ನವೆಂಬರ್ 2017, 6:50 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಈಗಾಗಲೇ ತಾಲ್ಲೂಕಿಗೊಂದು ಶಾಸಕರ ಮಾದರಿ ಶಾಲೆಯಂತೆ ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ನಮ್ಮೂರ ಮಾದರಿ ಶಾಲೆ’ ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಹೇಳಿದರು.

ಶನಿವಾರ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಸರ್ಕಾರಗಳು ಶೈಕ್ಷಣಿಕ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರೂ ನಿರೀಕ್ಷಿತ ಫಲಿತಾಂಶ ಬರುತ್ತಿಲ್ಲ. ಹಾಗಾಗಿ ಸರ್ಕಾರದ ಯೋಜನೆಗಳ ಜತೆಗೆ ಶಿಕ್ಷಕ ಸಮೂಹ ವೈಯಕ್ತಿಕ ಕಾಳಜಿ ವಹಿಸಿದರೆ ಮಾತ್ರ ಸರ್ಕಾರಿ ಶಾಲೆಗಳ ಸಬಲೀಕರಣ ಸಾಧ್ಯ’ ಎಂದು ಹೇಳಿದರು.

‘ಈಗಾಗಲೆ 19ಸಾವಿರ ಶಿಕ್ಷಕರಿಗೆ ಬಡ್ತಿ ನೀಡಲಾಗಿದೆ. 60 ಮಕ್ಕಳಿರುವ ಶಾಲೆಗೂ ಮುಖ್ಯಶಿಕ್ಷಕರ ನಿಯೋಜನೆ ಮಾಡಲು ಸರ್ಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ 14 ಸಾವಿರ ಶಿಕ್ಷಕರನ್ನು ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡಲು ಸಿದ್ಧತೆ ಮಾಡಲಾಗಿದೆ. ಕೇವಲ ಬಡ್ತಿ ಹೊಂದುವುದರಿಂದ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಿಲ್ಲ. ತಾವುಗಳು ಆ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಹೈದರಬಾದ್‌ ಕರ್ನಾಟಕದಲ್ಲಿ 4,751 ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ರಾಯಚೂರು ಜಿಲ್ಲೆಯೊಂದರಲ್ಲಿ 1,441 ಶಿಕ್ಷಕ ಹುದ್ದೆ ಖಾಲಿ ಇವೆ. ಅತಿಥಿ ಶಿಕ್ಷಕರನ್ನು ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹೊಸ ನೇಮಕಾತಿಯಲ್ಲಿ ಹೈದರಬಾದ್‌ ಕರ್ನಾಟಕ ಪ್ರದೇಶಕ್ಕೆ ಆದ್ಯತೆ ನೀಡಲಾಗುವುದು. ಶಿಕ್ಷಣ ಇಲಾಖೆಯಿಂದ ರಾಯಚೂರು ಜಿಲ್ಲೆಗೆ ₹ 3.19 ಕೋಟಿ ಅನುದಾನ ನೀಡಿ ಶಾಲಾ ಕಟ್ಟಡಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

ರಾಯಚೂರು ಸಂಸದ ಬಿ.ವಿ. ನಾಯಕ, ಶಾಸಕ ಮಾನಪ್ಪ ವಜ್ಜಲ ಮಾತನಾಡಿ, ‘ಪ್ರಾಥಮಿಕ ಶಾಲಾ ಮುಖ್ಯ ಗುರುಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಿಕ್ಷಣ ಸಚಿವರು ಸ್ಪಂದಿಸುವ ಭರವಸೆ ನೀಡಿದ್ದಾರೆ. ಶೈಕ್ಷಣಿಕ ವಲಯದಲ್ಲಿ ಸರ್ಕಾರ ಜಾರಿಗೆ ತರುತ್ತಿರುವ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಮುಂದಾಗಬೇಕು’ ಎಂದು ಮನವಿ ಮಾಡಿದರು.

ಸಾಧಕರಿಗೆ ಸನ್ಮಾನ: ನಿವೃತ್ತಿ ಹೊಂದಿದ ಮಾನ್ವಿ, ಲಿಂಗಸುಗೂರು, ಸಿಂಧನೂರು ದೇವದುರ್ಗ, ರಾಯಚೂರು ತಾಲ್ಲೂಕುಗಳ ಶಿಕ್ಷಕರಿಗೆ, ಶಿಕ್ಷಣ ಸೇವೆ ಮೂಲಕ ಗುರುತಿಸಿಕೊಂಡ ಸಮಾಜ ಸುಧಾರಕರಿಗೆ ಹಾಗೂ ವಿವಿಧ ರಂಗದಲ್ಲಿ ಪ್ರತಿಭೆ ಮೆರೆದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಮುಖ್ಯಗುರುಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಮರಪ್ಪ ಸಾಲಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಗುರುಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ. ಕೃಷ್ಣಪ್ಪ ಮಾತನಾಡಿದರು.

ಪುರಸಭೆ ಅಧ್ಯಕ್ಷ ಖಾದರಪಾಷ, ವಿವಿಧ ಶಿಕ್ಷಕರ ಸಂಘದ ಘಟಕಗಳ ಪದಾಧಿಕಾರಿಗಳಾದ ಸೈಯದ್‌ಸುರಜ್‌, ಜಿ. ತಿಮ್ಮಣ್ಣ, ವೀರಭದ್ರಪ್ಪ, ವಿ. ಬಸವರಾಜ, ಹನುಮಂತಪ್ಪ ತಿಪ್ಪಲದಿನ್ನಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಭೀಮಣ್ಣ ನಾಯಕ, ಬಸವರಾಜ ಕರಡಿ, ಅನಂತರಾವ್‌ ದೇಸಾಯಿ, ಭೀಮರೆಡ್ಡಿ ಪಾಟೀಲ, ಸಿದ್ರಾಮ ಯಾದವ, ಹಾಜಿಮಲಂಗಬಾಬಾ, ಎಚ್‌. ಕೊಟ್ರೆಪ್ಪ, ಹುಸೇನಬಾಷ, ರಮೇಶ ಅಗ್ನಿ, ಮೂಕಪ್ಪ ಕಟ್ಟಿಮನಿ, ಶ್ರೀಶೈಲಗೌಡ ಮಾನ್ವಿ, ಚಿದಾನಂದಪ್ಪ, ಜಯಪ್ರಕಾಶ, ಶಂಕರ ಕುರ್ಡಿ ಇದ್ದರು.

ಸಚಿವರಿಗಾಗಿ ಕಾಯ್ದು ಸುಸ್ತಾದ ಶಿಕ್ಷಕರು
ಲಿಂಗಸುಗೂರು: ರಾಯಚೂರು ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಮುಖ್ಯಗುರುಗಳ ಶೈಕ್ಷಣಿಕ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಶನಿವಾರ ಬೆಳಿಗ್ಗೆ 11ಗಂಟೆಗೆ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಹಾಗಾಗಿ ಬೆಳಿಗ್ಗೆ 10 ಗಂಟೆಯಿಂದಲೇ ರಾಯಚೂರು, ಮಾನ್ವಿ, ದೇವದುರ್ಗ, ಸಿಂಧನೂರು, ಲಿಂಗಸುಗೂರು ತಾಲ್ಲೂಕುಗಳಿಂದ ನೂರಾರು ಸಂಖ್ಯೆಯಲ್ಲಿ ಮುಖ್ಯ ಶಿಕ್ಷಕರು ಬಂದಿದ್ದರು.

ಸಚಿವರ ಪ್ರವಾಸ ಕಾರ್ಯಕ್ರಮ ದಿಢೀರ್‌ ಬದಲಾವಣೆಗೊಂಡ ವಿಷಯ ತಿಳಿಯದೆ ಸಂಘಟಕರು, ಮುಖ್ಯಶಿಕ್ಷಕರು ಸಂಜೆವರೆಗೆ ಕಾದು ಸುಸ್ತಾದರು. ಬದಲಾದ ಪ್ರವಾಸ ಕಾರ್ಯಕ್ರಮ ಪಟ್ಟಿಯಂತೆ 3 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಬೇಕಿತ್ತು.ಆದರೆ ಸಚಿವರು ಸಂಜೆ 4.45ಕ್ಕೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT