ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತಕ್ಕೆ ಸೈನಿಕ ಹುಳು ಬಾಧೆ: ಆತಂಕ

Last Updated 19 ನವೆಂಬರ್ 2017, 7:00 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ಸೈನಿಕ ಹುಳು ಬಾಧೆ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸ್ಥಳಕ್ಕೆ ಬಂದು ಪರಿಶೀಲಿಸದೇ ಇರುವುದನ್ನು ಖಂಡಿಸಿ ಸಮೀಪದ ಅಗಸನಹಳ್ಳಿ ಗ್ರಾಮದಲ್ಲಿ ರೈತರು ಶನಿವಾರ ಭತ್ತದ ತೆನೆಗಳನ್ನು ಕಿತ್ತುಹಾಕಿ ಪ್ರತಿಭಟಿಸಿದರು. ಭತ್ತದ ಪೈರು ಕಟಾವಿಗೆ ಬಂದಿದೆ. ಸೈನಿಕ ಹುಳು ತೆನೆಯನ್ನು ಕತ್ತರಿಸುತ್ತಿದ್ದರೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.

ರೈತ ರಂಗನಾಥಯ್ಯ ಮಾತನಾಡಿ, ‘ಸೈನಿಕ ಹುಳು ಭತ್ತದ ಕಾಂಡ, ಎಲೆಯ ಭಾಗವನ್ನು ಹಾಳು ಮಾಡದೇ ನೇರವಾಗಿ ತೆನೆಯನ್ನು ಮಾತ್ರ ತುಂಡರಿಸುತ್ತಿದೆ. ಈ ಹಿಂದೆ ಮೋಡ ಬಿತ್ತನೆ ಮಾಡಿದಾಗ ಅಡಿಕೆ ಹಾಗೂ ಕಬ್ಬು ಬೆಳೆಗಳಿಗೆ ನುಸಿ ರೋಗ ಬಂದಿತ್ತು. ಈ ಬಾರಿ ಅದೇ ಕಾರಣಕ್ಕೆ ಭತ್ತಕ್ಕೆ ಸೈನಿಕ ಹುಳು ಬಂದಿರಬಹುದು’ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

‘ಈ ಬಾರಿ ಸರಿಯಾಗಿ ಮಳೆಯಾಗದೇ ಹಾಗೂ ಮಳೆಗಾಲದಲ್ಲಿ ಭದ್ರಾ ಡ್ಯಾಂನಿಂದ ನಾಲೆಗಳಿಗೆ ನೀರು ಸ್ಥಗಿತಗೊಳಿಸಿದ್ದರೂ ಸಾಲ ಪಡೆದು ಕಷ್ಟಪಟ್ಟು ಭತ್ತದ ನಾಟಿ
ಮಾಡಿದ್ದೆವು. ಫಸಲು ಕೈಗೆ ಬರುವ ವೇಳೆಗೆ ಸೈನಿಕ ಹುಳು ಬೆಳೆ ಹಾಳು ಮಾಡುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ವೈ.ಮಂಜುನಾಥ ಮಾತನಾಡಿ, ‘ಈ ರೋಗ ತಾಲ್ಲೂಕಿನಾದ್ಯಾಂತ ಹರಡಿಕೊಂಡಿದೆ. ಎರಡು ದಿನಕ್ಕೊಮ್ಮೆ ಕೀಟನಾಶಕ ಸಿಂಪಡಣೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಸೈನಿಕ ಹುಳು ದಿನಕ್ಕೆ ಸುಮಾರು 10ರಿಂದ 15 ಎಕರೆ ಪೈರನ್ನು ನಾಶಪಡಿಸುತ್ತಿದೆ.

ಭತ್ತ ಕಟಾವಿಗೆ ಇನ್ನೂ 15 ದಿನಗಳು ಬೇಕಾಗಿದೆ. ಇದೇ ರೀತಿ ಮುಂದುವರಿದರೆ ರೈತರು ಭತ್ತದ ಬದಲು ಕೇವಲ ಒಣ ಹುಲ್ಲನ್ನು ಮನೆಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಕೂಡಲೇ ಕೃಷಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಿ ಪರಿಹಾರ ಕೊಡಿಸಬೇಕು’ ಎಂದು ಒತ್ತಾಯಿಸಿದರು. ರೈತರಾದ ಕೃಷ್ಣಪ್ಪ, ರಂಗಪ್ಪ, ನವೀನ, ಕಿರಣಗೌಡ, ಬಾಬುರಾವ್, ರಾಕೇಶ್, ಪರಮೇಶ, ಈಶ್ವರ, ದ್ವಾರಕೇಶಯ್ಯ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT