ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿಗೆ ಪುನರ್ಜನ್ಮ ನೀಡಿದ ಮೆಗ್ಗಾನ್‌ ವೈದ್ಯರು

Last Updated 19 ನವೆಂಬರ್ 2017, 7:03 IST
ಅಕ್ಷರ ಗಾತ್ರ

ಶಿವಮೊಗ್ಗ: ಅದೊಂದು ಬಡ ಕುಟುಂಬ. ಆ ಮನೆಯ ಮಗುವೊಂದು ಆಗಷ್ಟೇ ನಡೆದಾಡಲು ಕಲಿತಿತ್ತು. ನಿಷ್ಕಲ್ಮಶ ನಗು, ತೊದಲು ನುಡಿ, ಪುಟ್ಟ ಪುಟ್ಟ ಹೆಜ್ಜೆಯ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿತ್ತು. ಈ ಮಗು ಕೇವಲ ಮನೆಯವರಿಗೆ ಮಾತ್ರವಲ್ಲ, ಸುತ್ತಮುತ್ತಲಿನವರಿಗೂ ಅಚ್ಚು ಮೆಚ್ಚು. ಆದರೆ, ಶುಕ್ರವಾರ ಮಧ್ಯಾಹ್ನ ಆಸೆ ಪಟ್ಟು ತಿನ್ನಲು ಹೋದ ಸಪೋಟ ಹಣ್ಣಿನ ಬೀಜವೊಂದು ಮಗುವಿನ ಜೀವಕ್ಕೆ ಅಪಾಯ ತಂದೊಡ್ಡಿತ್ತು.

ಬೀಜ ನುಂಗಿದ ಮಗು ಕ್ಷಣ ಮಾತ್ರದಲ್ಲೇ ಅಳಲು ಪ್ರಾರಂಭಿಸಿತು. ಇದನ್ನು ಗಮನಿಸಿದ ಮನೆಯವರು ಬೀಜ ಹೊರತೆಗೆಯಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ದಿಕ್ಕು ತೋಚದಂತಾದರು. ಮಗುವಿನ ಅಳು ಒಂದೇ ಸಮನೆ ಹೆಚ್ಚಾಗುತ್ತಿತ್ತು. ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚಿದ್ದರಿಂದ ಪೋಷಕರ ಆತಂಕ ಇನ್ನಷ್ಟು ಹೆಚ್ಚಿತು. ಮಗುವಿನ ಉಸಿರಾಟಕ್ಕೂ ತೊಂದರೆಯಾಯಿತು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗುವನ್ನು ಹೆತ್ತವರು ದೂರದ ರಟ್ಟೀಹಳ್ಳಿಯಿಂದ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆತಂದರು.

ಮೊದಲೇ ರೋಗಿಗಳಿಂದ ತುಂಬಿ ತುಳುಕುತ್ತಿದ್ದ ಮೆಗ್ಗಾನ್‌ ಆಸ್ಪತ್ರೆಯನ್ನು ನೋಡಿ ದಿಗಿಲುಗೊಂಡರು. ಸಕಾಲಕ್ಕೆ ಮಗುವಿಗೆ ಚಿಕಿತ್ಸೆ ದೊರಕುವುದೇ ಎಂದು ಅನುಮಾನಪಟ್ಟರು. ಮಗುವನ್ನು ಉಳಿಸಿಕೊಡುವಂತೆ ವೈದ್ಯರ ಮುಂದೆ ಕಣ್ಣೀರಿಟ್ಟರು. ಕಾರ್ಯದೊತ್ತಡದ ನಡುವೆಯೂ ಆಸ್ಪತ್ರೆಯ ವೈದ್ಯರು ಮಾನವೀಯತೆ ಮೆರೆದರು.

ತಕ್ಷಣವೇ ಕಾರ್ಯಪ್ರವೃತ್ತರಾದ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಗಂಗಾಧರ್, ಐದಾರು ವೈದ್ಯರ ತಂಡ ಸಿದ್ಧ ಮಾಡಿಕೊಂಡು ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ಮೂವರು ಅರವಳಿಕೆ ತಜ್ಞರು, ಮೂವರು ತಜ್ಞ ವೈದ್ಯರು ಮತ್ತು ಸಿಬ್ಬಂದಿ ಮಗುವಿಗೆ ಯಾವುದೇ ತೊಂದರೆಯಾಗದಂತೆ ಚಿಕಿತ್ಸೆ ನಡೆಸಿ ಸಪೋಟ ಬೀಜವನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.

ಮಗುವಿನ ಗುಂಗಿನಲ್ಲಿಯೇ ಮುಳುಗಿದ್ದ ಮನೆಯವರು ವೈದ್ಯರು ಹೊರಬರುವುದನ್ನೇ ಕಾಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಪೋಷಕರ ಕಣ್ಣಲ್ಲಿ ಆನಂದಭಾಷ್ಪ ಜಿನುಗಿತು. ತಮ್ಮ ಮಗುವಿಗೆ ಪುನರ್ಜನ್ಮ ನೀಡಿದ ವೈದ್ಯರಲ್ಲೇ ನಿಜವಾದ ದೇವರನ್ನು ಕಂಡರು. ಸಂತೋಷಕುಮಾರ್‌ ಅವರ ಪುತ್ರಿ ಅನನ್ಯ ಈಗ ಆರೋಗ್ಯವಾಗಿದೆ. ಆಸ್ಪತ್ರೆಯಿಂದ ಶನಿವಾರ ಬಿಡುಗಡೆ ಹೊಂದಿ ಮನೆಗೆ ಹಿಂದಿರುಗಿದ್ದಾಳೆ. ಮನೆಯಲ್ಲಿ ಮತ್ತದೇ ಸಂತಸ ಹೊತ್ತು ತಂದಿದ್ದಾಳೆ.

ಚಿಕಿತ್ಸೆಗೆ ಕರೆತಂದಾಗ ಮಗುವಿನ ಸ್ಥಿತಿ ಗಂಭೀರವಾಗಿತ್ತು. ಉಸಿರಾಟಕ್ಕೆ ತೊಂದರೆಯಾಗಿದ್ದ ಬೀಜವನ್ನು ತಕ್ಷಣವೇ ಹೊರ ತೆಗೆಯದಿದ್ದರೆ ಜೀವಕ್ಕೆ ತೊಂದರೆಯಾಗುತ್ತಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ನಾವು ಚಿಕಿತ್ಸೆ ನೀಡಿ ಬೀಜ ಹೊರತೆಗೆಯುವಲ್ಲಿ ಯಶಸ್ವಿಯಾದೆವು. ಮಗುವಿನ ಜೀವ ಉಳಿಸಲು ಸಹಕರಿಸಿದ ನಮ್ಮ ವೈದ್ಯರ ಸಮಯಪ್ರಜ್ಞೆ ಮತ್ತು ಸೇವೆ ಶ್ಲಾಘನೀಯ.
ಡಾ.ಗಂಗಾಧರ್‌,
ಮಕ್ಕಳ ವಿಭಾಗದ ಮುಖ್ಯಸ್ಥ. ಮೆಗ್ಗಾನ್‌ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT