ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿಗೆ ಕಾರ್ಖಾನೆ ತ್ಯಾಜ್ಯದ ಪುಡಿ ಬಳಕೆ

Last Updated 19 ನವೆಂಬರ್ 2017, 7:08 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನಲ್ಲಿ ಸರ್ಕಾರಿ ಕಟ್ಟಡಗಳ ಕಾಮಗಾರಿಗೆ ಎಂ ಸ್ಯಾಂಡ್‌ ಬದಲು ಕಾರ್ಖಾನೆಯಲ್ಲಿ ಬಳಸಿ ಬಿಸಾಕಲಾದ ತ್ಯಾಜ್ಯದ ಪುಡಿಯನ್ನು ಉಪಯೋಗಿಸಲಾಗುತ್ತಿದೆಯೇ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿಸಿದೆ.

ಈಚೆಗೆ ತಾಲ್ಲೂಕಿನ ಕೆಳದಿ–ಬಂದಗದ್ದೆ ಗ್ರಾಮದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಕಾಮಗಾರಿಗೆ ಎಂ ಸ್ಯಾಂಡ್‌ ಹೆಸರಿನಲ್ಲಿ ಭದ್ರಾವತಿಯ ವಿಐಎಸ್ಎಲ್‌ ಕಾರ್ಖಾನೆಯಲ್ಲಿ ಉತ್ಪಾದನೆಯ ನಂತರ ಹೊರಬರುವ ‘ಬಿಎಫ್‌ ಲಾಗ್‌’ ಎನ್ನುವ ತ್ಯಾಜ್ಯವನ್ನು ಬಳಸಲಾಗುತ್ತಿದೆ ಎಂಬ ದೂರು ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಕಾರ್ಯನಿರ್ವಹಣಾಧಿಕಾರಿ ಡಾ.ಎಸ್‌.ಕಲ್ಲಪ್ಪ, ಜಿಲ್ಲಾ ಪಂಚಾಯ್ತಿ ಎಂಜಿನಿಯರ್‌ ವೆಂಕಟೇಶ್‌ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದರು.

ಈ ಸಂದರ್ಭದಲ್ಲಿ ಶಿಕ್ಷಕರಿಗಾಗಿ ನಿರ್ಮಿಸುತ್ತಿರುವ ವಸತಿ ಸಮುಚ್ಚಯದ ಕಟ್ಟಡಕ್ಕೆ ಬಳಕೆಯಾಗುತ್ತಿರುವುದು ಎಂ ಸ್ಯಾಂಡ್‌ ಅಲ್ಲ. ಕಾರ್ಖಾನೆ ತ್ಯಾಜ್ಯದ ಪುಡಿ ಎನ್ನುವುದು ಖಚಿತವಾಗಿತ್ತು. ಅಧಿಕಾರಿಗಳು ಸ್ಥಳದಲ್ಲಿದ್ದ ತ್ಯಾಜ್ಯದ ಪುಡಿಯ ಮಾದರಿಯನ್ನು ಸಂಗ್ರಹಿಸಿ ಅದರ ಗುಣಮಟ್ಟ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಇನ್ನೂ ಬಂದಿಲ್ಲ.

ಅಧಿಕಾರಿಗಳು, ಜನಪ್ರತಿನಿಧಿಗಳು ಕೆಳದಿ–ಬಂದಗದ್ದೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ಥಳದಲ್ಲಿ ಎಂ.ಸ್ಯಾಂಡ್‌ ಹೆಸರಿನಲ್ಲಿ ಸಂಗ್ರಹಿಸಿಡಲಾಗಿದ್ದ ತ್ಯಾಜ್ಯದ ಪುಡಿಯನ್ನು ಯಾವುದೇ ಕಾರಣಕ್ಕೂ ಸ್ಥಳದಿಂದ ಹೊರಕ್ಕೆ ಸಾಗಿಸದಂತೆ ನೋಡಿಕೊಳ್ಳುವಂತೆ ಶಾಲೆಯ ಮುಖ್ಯಸ್ಥರಿಗೆ ಸಂಬಂಧಪಟ್ಟ ಗುತ್ತಿಗೆದಾರರು ಸೂಚನೆ ನೀಡಿದ್ದರು. ಆದರೆ, ಈ ಸೂಚನೆಯನ್ನು ಧಿಕ್ಕರಿಸಿ ಗುತ್ತಿಗೆದಾರರು ತಾವು ಸಂಗ್ರಹಿಸಿದ್ದ ಪುಡಿಯನ್ನು ಬೇರೆ ಸ್ಥಳಕ್ಕೆ ಸಾಗಿಸಿರುವ ಅಂಶ ಮರುದಿನ ಮತ್ತೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ತಿಳಿದುಬಂದಿತ್ತು.

ಇದರಿಂದಾಗಿ ತಾಲ್ಲೂಕಿನಲ್ಲಿ ಸರ್ಕಾರಿ ಕಟ್ಟಡಗಳ ನಿರ್ಮಾಣ ಕಾಮಗಾರಿಯ ಗುತ್ತಿಗೆ ಹಿಡಿದವರು ಮರಳಿನ ಅಭಾವದ ನೆಪ ಹೇಳಿಕೊಂಡು ಎಂ ಸ್ಯಾಂಡ್‌ ಹೆಸರಿನಲ್ಲಿ ಕಾರ್ಖಾನೆಯ ತ್ಯಾಜ್ಯದ ಪುಡಿಯನ್ನು ಬಳಸುವ ಮಾರ್ಗ ಹಿಡಿದಿದ್ದಾರೆಯೆ ಎಂಬ ಅನುಮಾನ ಬಲವಾಗಿದೆ.

ಎಂ ಸ್ಯಾಂಡ್‌ನ ಬೆಲೆ ಒಂದು ಟನ್‌ಗೆ ₹ 1,150 ಇದ್ದರೆ, ಬಿಎಫ್‌ ಲಾಗ್‌ ಎಂದು ಕರೆಯಲ್ಪಡುವ ಕಾರ್ಖಾನೆಯ ತ್ಯಾಜ್ಯದ ಬೆಲೆ ₹ 625 ಇದೆ.
ಹೀಗಾಗಿ, ಗುತ್ತಿಗೆದಾರರು ಎಂ.ಸ್ಯಾಂಡ್‌ ಬದಲು ತ್ಯಾಜ್ಯ ಬಳಸುತ್ತಿದ್ದಾರೆ ಎನ್ನಲಾಗುತ್ತಿದೆ.

ಕೆಳದಿ–ಬಂದಗದ್ದೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ನಂತರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಸ್ವತಃ ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆಗೆ ತೆರಳಿ ಅಲ್ಲಿನ ಬಿಎಫ್‌ ಲಾಗ್ ಎಂದು ಕರೆಯುವ ತ್ಯಾಜ್ಯದ ಪುಡಿಯ ಸಂಗ್ರಹವನ್ನು ನೋಡಿಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಟ್ಟಡ ನಿರ್ಮಾಣ ಗುತ್ತಿಗೆದಾರರು ಅಪಾರ ಪ್ರಮಾಣದಲ್ಲಿ ಈ ತ್ಯಾಜ್ಯದ ಪುಡಿಯನ್ನು ಕೊಂಡೊಯ್ಯುತ್ತಿರುವ ಬಗ್ಗೆ ಕಾರ್ಖಾನೆಯವರು ಮಲ್ಲಿಕಾರ್ಜುನ ಹಕ್ರೆ ಅವರಿಗೆ ಮಾಹಿತಿ ನೀಡಿದ್ದಾರೆ. ಕಾರ್ಖಾನೆ ತ್ಯಾಜ್ಯದ ಪುಡಿ ಬಳಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕವುಂಟಾಗಿದೆ.

* * 

ಕೆಳದಿ–ಬಂದಗದ್ದೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಕಾರ್ಖಾನೆಯ ತ್ಯಾಜ್ಯ ಬಳಸುತ್ತಿರುವುದು ಮೇಲ್ನೋಟಕ್ಕೆ ಎದ್ದುಕಾಣುತ್ತಿದೆ.
ಮಲ್ಲಿಕಾರ್ಜುನ ಹಕ್ರೆ,
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT