ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡ ಹೆಂಚಿನ ಮನೆಗಳ ಸೊಬಗು

Last Updated 19 ನವೆಂಬರ್ 2017, 8:44 IST
ಅಕ್ಷರ ಗಾತ್ರ

ಹುಲಿಯೂರುದುರ್ಗದ ಸುತ್ತಲಿನ ಅನೇಕ ಹಳ್ಳಿಗಳಲ್ಲಿ ಈಗಲೂ ಕಾಣಸಿಗುವ ಹಳೆಯ ಮನೆಗಳು ಗಮನ ಸೆಳೆಯುತ್ತವೆ. 60ರ ದಶಕದ ಮೊದಲಿನ ಬಹುತೇಕ ಮನೆಗಳು ಕೈ ಹೆಂಚಿನ ಮನೆಗಳೇ ಆಗಿದ್ದವು.

ಗೋಡೆಗಳಿಗೆ ಕಳಿತ ಸಿದ್ದೆಮಣ್ಣನ್ನೂ ಚಾವಣಿಗೆ ಬೆಟ್ಟದ ಲಾಲೆ ಹುಲ್ಲು ಬಳಸಿ ಕಟ್ಟಿದ ಅವು ಸರಳ ನಿರ್ಮಾಣದ ಮನೆಗಳಾಗಿದ್ದವು. ಆಗಿನ ಮೇಲ್‌ಸ್ತರದ ಮನೆಗಳೆಂದರೆ ನಾಡ ಹೆಂಚಿನ ತೊಟ್ಟಿ ಮನೆಗಳು. ಕಾಲಾಂತರದಲ್ಲಿ ಮಾಳಿಗೆ ಮನೆಗಳನ್ನು ಮಂಗಳೂರು ಹೆಂಚಿನ ಮನೆಗಳೂ, ಆಸ್ಬೆಸ್ಟಸ್ ಶೀಟಿನ ಮನೆಗಳೂ ಸ್ಥಳಾಂತರಿಸಿದವು. ಈಗಂತೂ ಕಾಂಕ್ರೀಟ್ ಮನೆಗಳದ್ದೇ ದರಬಾರು.

ಆಧುನಿಕ ಪ್ರಜ್ಞೆಯಲ್ಲಿ ಕುಂಬಾರ ಹೆಂಚಿನ ಮನೆಗಳಿಗೆ ಜಾಗ ಇಲ್ಲದಿದ್ದರೂ ಈಗಲೂ ಅಲ್ಲಲ್ಲಿ ಕಾಣಸಿಗುತ್ತವೆ. ಕೆಲವು ಕುಟುಂಬಗಳು ತಾವು ನಿರ್ವಹಿಸಿಕೊಂಡು ಬಂದಿರುವ ಮಣ್ಣಿನ ಗೋಡೆಯ ಕುಂಬಾರ ಹೆಂಚಿನ ಮನೆಗಳು ಅವರ ಪಿತ್ರಾರ್ಜಿತ ಆಸ್ತಿಯಾಗಿ ಉಳಿದುಬಂದಿವೆ.

ಕುಣಿಗಲ್ ತಾಲ್ಲೂಕಿನ ಎಲೆಕಡಕಲು, ಹಿತ್ತಲಪುರ, ನಿಡಸಾಲೆ, ಕೆಬ್ಬಳ್ಳಿ, ಚಲಮಸಂದ್ರ, ಹುನಗನಹಳ್ಳಿ, ಮಲ್ಲನಾಯಕನಹಳ್ಳಿ, ಛತ್ರಲಿಂಗನದೊಡ್ಡಿ, ಸಿದ್ದೇಗೌಡನದೊಡ್ಡಿ, ಕಾಮಿದೊಡ್ಡಿ ಹಾಗೂ ಮದ್ದೂರು ತಾಲ್ಲೂಕಿನ ದುಂಡನಹಳ್ಳಿ, ಚನ್ನಪಟ್ಟಣ ತಾಲ್ಲೂಕು, ಹಳೇ ಮೈಸೂರು ಭಾಗದ ಅನೇಕ ಹಳ್ಳಿಗಳಲ್ಲಿ ಇಂತಹ ಕಪ್ಪು ಬಣ್ಣದ ಹೊಗೆ ಹಿಡಿದ ಕುಂಬಾರ ಹೆಂಚಿನ ಚಾವಣಿಯ ಮನೆಗಳು ಕಂಡುಬರುತ್ತವೆ.

ಗೋಡೆಗಳ ಮೇಲೆ ಹರಡಿರುವ ತೊಲೆಗಳ ಮೇಲೆ ಇಳಿಜಾರು ಚಾವಣಿಗೆ ಪೂರಕವಾಗುವಂತೆ ವಿವಿಧ ಎತ್ತರದ ಗುಜ್ಜುಗಳನ್ನು ಜೋಡಿಸಿ ಅವುಗಳ ಮೇಲೆ ತೀರುಗಳನ್ನು ಅಳವಡಿಸಲಾಗಿದೆ. ಸಾರ್ವೇ ಹುರಿಗಳಿಂದ ಬಿಗಿದಿರುವ ಚಿಟ್ಟು ಬಿದಿರುಗಳ ಮೇಲೆ ನಾಡ ಹೆಂಚುಗಳು ಹೊದಿಸಲ್ಪಟ್ಟಿವೆ.

ಸಿಲಿಂಡರಿನಾಕಾರದ ಉದ್ದ ಸೀಳಿಕೆಯ ಮಣ್ಣಿನ ಸುಟ್ಟ ಅರ್ಧ ಹೆಂಚುಗಳೇ ನಾಡ ಹೆಂಚುಗಳು. ಮೇಲ್ಮುಖವಾಗಿ ಜೋಡಿಸಿದ ಹೆಂಚುಗಳ ಒಂದು ಸಾಲಿನ ಉದ್ದಕ್ಕೂ ಅವುಗಳ ಒಂದು ಅಂಚಿಗೆ ಹೊಂದಿಕೊಂಡಂತೆ ಬೋರಲಾಗಿ ಉಬ್ಬು ಮೇಲ್ಮುಖವಾಗಿರುವಂತೆ ಇನ್ನೊಂದು ಸಾಲಿನ ಹೆಂಚುಗಳು ಜೋಡಿಸಲ್ಪಟ್ಟಿರುತ್ತವೆ. ನಡುವಿನ ಒಳಾಯದಲ್ಲಿ ಮಳೆಯ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿರುವುದು ಹಿಂದಿನವರ ಕೈಕಸುಬಿನ ನೈಪುಣ್ಯತೆಯನ್ನು ಸಾಕ್ಷೀಕರಿಸುತ್ತವೆ.

ಬೇಸಿಗೆಯಲ್ಲಿ ತಣ್ಣನೆಯ ನಿರಾಳ ಅನುಭವ ನೀಡುವುದು ಈ ಮನೆಗಳ ವೈಶಿಷ್ಟ್ಯ. ಬಾಗಿಲ ಮೇಲಿನ ತೊಲೆಕಣ್ಣು (ತೆರವು) ಮೂಲಕ ಗಾಳಿ ಬೆಳಕು ಸರಾಗವಾಗಿ ಹರಿದು ಬರುವಂತೆ ನಿರ್ಮಿಸಲಾಗಿದೆ. ಚಾವಣಿಯ ತೊಲೆ ತೀರು ರೀಪರ್‌ಗಳಿಗೆ ಗೆದ್ದಲು ಹತ್ತದಂತೆ ಕ್ರಮ ವಹಿಸಲಾಗಿದೆ. ತೊಲೆಗಳ ನಡುವೆ ತೆರೆದುಕೊಂಡಿರುವ ಸಂದುಗಳ ಮೂಲಕವೂ ಗಾಳಿ ಸಮೃದ್ಧವಾಗಿ ಹರಿದು ಬರುವುದರಿಂದ ಒಟ್ಟಾರೆ ಮನೆಯ ವಾತಾವರಣ ಯಾವಾಗಲೂ ತಂಪಾಗಿರುತ್ತದೆ ಎಂದು ಅಂತಹ ಮನೆಯಲ್ಲಿ ಈಗಲೂ ವಾಸಿಸುತ್ತಿರುವ ನಿಡಸಾಲೆ ಕೃಪೇಶ್ ಕುಮಾರ್ ಅಭಿಪ್ರಾಯಪಡುತ್ತಾರೆ.

* * 

ಆಧುನಿಕವಾಗಿ ನವೀಕರಿಸಿದರೂ ಕೈ ಹೆಂಚಿನ ತೊಟ್ಟಿಯ ಮಧ್ಯಭಾಗದ ಚಾವಣಿಯನ್ನು ಹಾಗೆಯೇ ಉಳಿಸಿಕೊಂಡಿದ್ದೇವೆ.
ಎಚ್.ಎನ್.ನಾರಾಯಣ,
ಅರಮನೆ ಹೊನ್ನಮಾಚನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT