ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಸಪುರ ರಾಷ್ಟ್ರೀಯ ಉತ್ಸವಕ್ಕೆ ‘ಗ್ರಹಣ’

Last Updated 19 ನವೆಂಬರ್ 2017, 7:27 IST
ಅಕ್ಷರ ಗಾತ್ರ

ವಿಜಯಪುರ: ತೊಂಬತ್ತರ ದಶಕದಲ್ಲಿ ವಿದೇಶಿ ಪ್ರವಾಸಿಗರನ್ನೂ ಸೂಜಿಗಲ್ಲಿನಂತೆ ಆಕರ್ಷಿಸಿದ್ದ, ವಿಜಯಪುರದ ನವರಸಪುರ ರಾಷ್ಟ್ರೀಯ ಉತ್ಸವಕ್ಕೆ ಇದೀಗ ‘ಗ್ರಹಣ’ ಬಡಿದಿದೆ. ಅನುದಾನ ಲಭ್ಯವಿದ್ದರೂ, ಸಕಾಲಕ್ಕೆ ಉತ್ಸವ ಆಯೋಜಿಸದೇ ಇರುವುದು ಕಲಾ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ.

ರಾಜ್ಯದ ವಿವಿಧೆಡೆ ಪ್ರತಿ ವರ್ಷ ನಿಗದಿತ ದಿನಗಳಲ್ಲಿ ನಡೆಯುವ ಉತ್ಸವಗಳಂತೆ, ವಿಜಯಪುರದ ನವರಸಪುರ ರಾಷ್ಟ್ರೀಯ ಉತ್ಸವವನ್ನೂ ನಡೆಸಬೇಕು ಎಂಬ ಜಿಲ್ಲೆಯ ಜನರ ಕೂಗು ಅರಣ್ಯರೋದನವಾಗಿದೆ.

ಸ್ಪಂದನೆ ಇಲ್ಲ: ‘ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಆರಂಭಗೊಂಡ ನವರಸಪುರ ರಾಷ್ಟ್ರೀಯ ಉತ್ಸವ ಪ್ರತಿ ವರ್ಷ ಆಯೋಜನೆಗೊಳ್ಳುತ್ತಿಲ್ಲ. ಈ ಸಂಬಂಧ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಜಿಲ್ಲಾ ಉಸ್ತುವಾರಿ ಸಚಿವರತ್ತ ಬೊಟ್ಟು ಮಾಡುತ್ತಾರೆ. ಸೂಕ್ತ ಸ್ಪಂದನೆ ಸಿಗುತ್ತಿಲ್ಲ’ ಎಂದು ವಿಜಯಪುರ ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ದೂರಿದರು.

‘ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ ಇದೆ. ಸದಾ ರಾಜಕೀಯ ಚಟುವಟಿಕೆಗಳಲ್ಲೇ ತಲ್ಲೀನರಾಗಿರುತ್ತಾರೆ. ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡಿ ತಮ್ಮ ಜನ್ಮದಿನ ಆಚರಿಸಿಕೊಳ್ಳುವ ನೇತಾರರಿಗೆ ಜಿಲ್ಲೆಯ ಸಂಸ್ಕೃತಿ– ಕಲೆ ಬಿಂಬಿಸುವ ಉತ್ಸವ ಆಚರಿಸಲು ಪುರುಸೊತ್ತಿಲ್ಲದಾಗಿದೆ.

ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಹಂಪಿ ಉತ್ಸವ, ಪಟ್ಟದಕಲ್ಲು ಉತ್ಸವ, ರನ್ನ ಉತ್ಸವ, ಕಿತ್ತೂರು ಉತ್ಸವ ಸೇರಿದಂತೆ ರಾಜ್ಯದ ವಿವಿಧೆಡೆ ಆಯಾ ಜಿಲ್ಲೆಯ ಕಲಾ ಶ್ರೀಮಂತಿಕೆ ಪ್ರತಿಬಿಂಬಿಸುವ ಉತ್ಸವಗಳನ್ನು, ರಾಜ್ಯ ಸರ್ಕಾರ– ಜಿಲ್ಲಾಡಳಿತದ ಸಹಯೋಗದಿಂದ ಮೂರು ದಿನ ಅದ್ಧೂರಿಯಾಗಿಯೇ ಆಚರಿಸಲಾಗುತ್ತಿದೆ. ನಮ್ಮ ದುರ್ದೈವ; 2015ರ ಫೆಬ್ರುವರಿ ಅಂತ್ಯದಲ್ಲಿ ನಡೆದ ಉತ್ಸವವೇ ಕೊನೆಯದು. ಇದಾಗಿ ಮೂರು ವರ್ಷ ಮುಗಿಯುತ್ತ ಬಂದರೂ ಪೂರ್ವ ಸಿದ್ಧತೆಯೇ ನಡೆದಿಲ್ಲ. ‘ಬರ’ದ ನೆಪವೊಡ್ಡಿ ಮುಂದೂಡುವುದೇ ಆಗಿದೆ’ ಎಂದು ಸಬರದ ಅಸಮಾಧಾನ ವ್ಯಕ್ತಪಡಿಸಿದರು.

ಉತ್ಸವದ ಹಿನ್ನೆಲೆ: ನೃತ್ಯಪಟು, ದಿವಂಗತ ಮಾಯಾರಾವ್‌ ಸಂಗೀತ ಅಕಾಡೆಮಿ ಅಧ್ಯಕ್ಷರಾಗಿದ್ದ ಸಂದರ್ಭ ಅವಿಭಜಿತ ಜಿಲ್ಲೆಯ ಪಟ್ಟದಕಲ್ಲಿನಲ್ಲಿ 1989ರಲ್ಲಿ ಪ್ರಥಮ ಬಾರಿಗೆ ನೃತ್ಯೋತ್ಸವ ಆಯೋಜಿಸಿದ್ದರು. ಆಗ ಪ್ರಕಟಿಸಿದಂತೆ, 1990ರಲ್ಲಿ ವಿಜಯಪುರದಲ್ಲಿ ಮೊದಲ ಬಾರಿಗೆ ನವರಸಪುರ ಸಂಗೀತೋತ್ಸವ ನಡೆಯಿತು. ನಂತರ 1991ರ ಜನವರಿಯಲ್ಲಿ ಪ್ರವಾಸಿ ವರ್ಷಾಚರಣೆ ಅಂಗವಾಗಿ ಉತ್ಸವ ಆಯೋಜಿಸಲಾಗಿತ್ತು. 27 ವರ್ಷಗಳಲ್ಲಿ ಇದುವರೆಗೂ 13 ಬಾರಿ ಮಾತ್ರ ನವರಸಪುರ ರಾಷ್ಟ್ರೀಯ ಉತ್ಸವ ನಡೆದಿದ್ದು, ಉಳಿದ 13 ವರ್ಷ ವಿವಿಧ ಕಾರಣಗಳಿಂದ ನಡೆದಿಲ್ಲ. 14ನೇ ಉತ್ಸವ ಇದೇ ತಿಂಗಳಲ್ಲಿ ನಡೆಯಬೇಕಾಗಿತ್ತಾದರೂ, ‘ಬರ’ ಸೇರಿದಂತೆ ವಿವಿಧ ಕಾರಣಗಳಿಂದ ಮುಂದೂಡಲಾಗಿತ್ತು.

ಖಾತೆಯಲ್ಲಿ ₹ 90 ಲಕ್ಷ
ನವರಸಪುರ ರಾಷ್ಟ್ರೀಯ ಉತ್ಸವಕ್ಕೆ ರಾಜ್ಯ ಸರ್ಕಾರ ಪ್ರತಿ ವರ್ಷ ₹30 ಲಕ್ಷ ಅನುದಾನ ಬಿಡುಗಡೆ ಮಾಡುತ್ತದೆ. ಕಳೆದ ಮೂರು ವರ್ಷಗಳ ₹ 90 ಲಕ್ಷ ಅನುದಾನ ಜಿಲ್ಲಾಡಳಿತದ ಖಾತೆಯಲ್ಲಿದೆ ಎಂಬುದನ್ನು ಮೂಲಗಳು ಖಚಿತಪಡಿಸಿವೆ.

* * 

ಉತ್ಸವಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಸಿದ್ಧತೆ ನಡೆದಿಲ್ಲ. ಚರ್ಚೆ ನಡೆದಿದೆ ಅಷ್ಟೆ. ಈ ಆರ್ಥಿಕ ವರ್ಷದಲ್ಲೇ ಉತ್ಸವ ನಡೆಯುವುದು ಖಚಿತ
ಮಹೇಶ ಪೋದ್ದಾರ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT