ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಬ್ಬನಿ’ ಹೊಳಪಲ್ಲಿ ನಿರೀಕ್ಷಾ ನಿರೀಕ್ಷೆ...

Last Updated 19 ನವೆಂಬರ್ 2017, 12:02 IST
ಅಕ್ಷರ ಗಾತ್ರ

ಬಹುತಾರಾಗಣದ ಸಿನಿಮಾವೊಂದರ ಮೂಲಕ ಚಂದನವನ ಪ್ರವೇಶಿಸಿರುವ ನಿರೀಕ್ಷಾ ಆಳ್ವ, ತುಳುನಾಡಿನ ಹೆಣ್ಣು ಮಗಳು. 2015ರಲ್ಲಿ ಮಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ‘ಮಿಸ್‌ ಬಂಟ್ಸ್‌ ಮಂಗಳೂರು’ ಕಿರೀಟವನ್ನು ಮುಡಿಗೇರಿಸಿಕೊಂಡ ಚೆಲುವೆ. ಚಿಕ್ಕಂದಿನಿಂದಲೂ ನೃತ್ಯದ ಬಗ್ಗೆ ಅಪಾರ ಒಲವು ಬೆಳೆಸಿಕೊಂಡಿದ್ದ ನಿರೀಕ್ಷಾ ಚಿತ್ರರಂಗ ಪ್ರವೇಶಿಸಿದ್ದು ಅನಿರೀಕ್ಷಿತ. ಇದೇ 24ರಂದು ತೆರೆಕಾಣಲಿರುವ, ‘ಹನಿ ಹನಿ ಇಬ್ಬನಿ’ ಬಗ್ಗೆ ಅವರಿಗೆ ನಿರೀಕ್ಷಾಗೆ ಅಪಾರ ನಿರೀಕ್ಷೆ ಇದೆ.

ಭರತನಾಟ್ಯವನ್ನು ಶಾಸ್ತ್ರೀಯವಾಗಿ ಕಲಿತಿರುವ ನಿರೀಕ್ಷಾ, ಉಳಿದ ನೃತ್ಯಪ್ರಕಾರಗಳನ್ನು ಸ್ವಯಂ ಆಸಕ್ತಿಯಿಂದಲೇ ಕಲಿತವರು. ಓದಿನ ಜತೆಗೆ ನೃತ್ಯಪ್ರೀತಿಯನ್ನು ಪೋಷಿಸಿಕೊಂಡು ಬಂದ ಇವರು ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ‘ಡಾನ್ಸ್‌ ಡಾನ್ಸ್‌’ ರಿಯಾಲಿಟಿ ಶೋ ಮೂಲಕ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡರು.

‘ನೃತ್ಯವೇ ನನ್ನ ಉಸಿರು. ಅದರಲ್ಲೇ ದೊಡ್ಡಮಟ್ಟದ ಸಾಧನೆ ಮಾಡಬೇಕು ಅಂದುಕೊಂಡಿದ್ದ ನನಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಇದಕ್ಕೆ ಕಾರಣವಾಗಿದ್ದು ರಿಯಾಲಿಟಿ ಶೋ. ‘ಹನಿ ಹನಿ ಇಬ್ಬನಿ’ ಚಿತ್ರದ ನಾಯಕ ಅಜಿತ್‌ ಜಯರಾಜ್‌ ಅವರ ಮೂಲಕ ರಘು ಅವರ ಪರಿಚಯ ಆಯ್ತು. ಅವರಿಂದಾಗಿಯೇ ನಾನು ಈ ಚಿತ್ರದಲ್ಲಿ ಬಣ್ಣ ಹಚ್ಚಿದೆ’ ಎನ್ನುತ್ತಾರೆ ನಿರೀಕ್ಷಾ.

‘ಹನಿ ಹನಿ ಇಬ್ಬನಿ’ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮುನ್ನ ಸಾಕಷ್ಟು ಅವಕಾಶಗಳು ಬಂದಿದ್ದವು ಎನ್ನುವ ನಿರೀಕ್ಷಾ, ನಟಿಸುವುದು ತುಂಬ ಕಷ್ಟ ಎಂಬ ಭಾವನೆಯಿಂದಲೇ ಆ ಎಲ್ಲ ಆಫರ್‌ಗಳನ್ನೂ ತಿರಸ್ಕರಿಸಿದ್ದರಂತೆ.

‘ಡಾನ್ಸ್‌ ಮಾಡುವುದು ಸುಲಭ; ನಟಿಸುವುದು ಕಷ್ಟ ಎಂಬ ವಿಚಾರ ನನ್ನ ತಲೆಯಲ್ಲಿ ಮೊದಲಿನಿಂದಲೂ ಕುಳಿತುಕೊಂಡು ಬಿಟ್ಟಿತ್ತು. ನನ್ನ ಮೇಲೇ ನನಗೆ ನಂಬಿಕೆ ಇರಲಿಲ್ಲ. ಒಂದು ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬಲ್ಲೇ ಎಂಬ ಆತ್ಮವಿಶ್ವಾಸ ಇರಲಿಲ್ಲ. ಈ ಕಾರಣಕ್ಕಾಗಿಯೇ ಬಂದ ಅವಕಾಶಗಳನ್ನೆಲ್ಲಾ ತಿರಸ್ಕರಿಸಿದೆ’ ಎನ್ನುತ್ತಾರೆ.

‘ನಟನೆಗೆ ಸಂಬಂಧಿಸಿದಂತೆ ಸಾಕಷ್ಟು ಪಾಠಗಳು ಹಾಗೂ ಚೆಂದದ ನೆನಪುಗಳನ್ನು ಕಟ್ಟಿಕೊಟ್ಟಿದೆ ಹನಿ ಹನಿ ಇಬ್ಬನಿ’ ಎಂದು ನೆನಪಿಸಿಕೊಳ್ಳುತ್ತಾರೆ.

‘...ಇಬ್ಬನಿ’ ಚಿತ್ರದಲ್ಲಿ ನಿರೀಕ್ಷಾ ಅವರು ಸಾಗರಿ ಎಂಬ ಡಾಕ್ಟರ್ ಪಾತ್ರ ನಿರ್ವಹಿಸಿದ್ದಾರೆ. ವೃತ್ತಿಯಿಂದ ವೈದ್ಯೆಯಾದರೂ ಆಕೆ ಸೂಕ್ಷ್ಮ ಮನಸ್ಸಿನ ಹೆಣ್ಣುಮಗಳು. ಒಂದರ್ಥದಲ್ಲಿ ಸಾಗರಿ ಭಾವನೆಗಳ ಖಜಾನೆ. ಪ್ರೊಫೆಷನ್ ಮತ್ತು ಎಮೋಷನ್ಸ್‌ ಈ ಎರಡು ಗುಣಗಳಲ್ಲಿ ಅದ್ದಿ ತೆಗೆದಂತಹ ಪಾತ್ರ ಸಾಗರಿಯದ್ದು ಎನ್ನುವ ನಿರೀಕ್ಷಾ ಈ ಪಾತ್ರಕ್ಕಾಗಿ ಹೆಚ್ಚಿನ ತಯಾರಿ ಏನೂ ಮಾಡಿಕೊಂಡಿರಲಿಲ್ಲವಂತೆ.

ಸಿನಿಮಾ ಒಪ್ಪಿಕೊಂಡ ನಂತರವೂ ಅಭಿನಯ ತರಗತಿಗೆ ಸೇರುವ ಅವಕಾಶ ಬೀಳಲಿಲ್ಲ. ಏಕೆಂದರೆ, ನಿರ್ದೇಶಕರಿಂದ ಹಿಡಿದು ಸಹನಟರವರೆಗೆ ಎಲ್ಲರೂ ನನಗೆ ನಟನೆಯ ಪಾಠ ಹೇಳಿಕೊಟ್ಟರು. ಹೇಗೆ ನಟಿಸಬೇಕು ಎಂಬುದನ್ನು ತುಂಬ ಅಚ್ಚುಕಟ್ಟಾಗಿ ತಿಳಿಸುತ್ತಿದ್ದರು. ಹಿರಿಯ ಕಲಾವಿದರೂ ಅಷ್ಟೇ, ಸ್ಫೂರ್ತಿ ತುಂಬುತ್ತಿದ್ದರು. ಆಮೇಲೆ, ಒಂದು ಶಾಟ್‌ ಮುಗಿಸಿದ ನಂತರ ನಾನೇ ಕುಳಿತುಕೊಂಡು ಅದನ್ನು ಮತ್ತಷ್ಟು ಉತ್ತಮವಾಗಿ ಯಾವ ರೀತಿ ಮಾಡಬಹುದಿತ್ತು ಎಂಬುದರ ಬಗ್ಗೆ ಆಲೋಚಿಸುತ್ತಿದ್ದೆ. ಈ ಕ್ರಮ ಮುಂದಿನ ಶಾಟ್‌ಗೆ ಮತ್ತಷ್ಟು ಉತ್ಸಾಹದಿಂದ ಅಣಿಯಾಗಲು ನೆರವಾಗುತ್ತಿತ್ತು’ ಎನ್ನುತ್ತಾರೆ ಅವರು.

ಹೊಸಬರ ಸಿನಿಮಾವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೋ ಎಂಬ ಭಯವೂ ಅವರಿಗಿದೆ.

‘ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಹಾಗಾಗಿ, ನಿರೀಕ್ಷೆಗಳೂ ಜೋರಾಗಿವೆ. ಚಿತ್ರವನ್ನು ನೋಡಲು ಪ್ರೇಕ್ಷಕರಿಗೆ ಸಾಕಷ್ಟು ಕಾರಣಗಳಿವೆ. ಚಿತ್ರದ ಗೀತೆಗಳು ಈಗಾಗಲೇ ಜನರ ಮನಗೆದ್ದಿವೆ. ಈ ಸಿನಿಮಾದಲ್ಲಿ ಪ್ರೀತಿ ಹಾಗೂ ಸ್ನೇಹದ ಬಾಂಧವ್ಯವನ್ನು ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಹೊಸಬರ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಎಂಬ ಭಯವಂತೂ ಇದ್ದೇ ಇದೆ’ ಎನ್ನುತ್ತಾರೆ ಅವರು.

‘ಹನಿ ಹನಿ ಇಬ್ಬನಿ’ ಚಿತ್ರದ ನಿರ್ದೇಶಕರು ಮದ್ದೂರು ಶಿವು. ಅಜಿತ್ ಜಯರಾಜ್ ಮತ್ತು ಮನೋಜ್ ಚಿತ್ರದ ನಾಯಕರು. ನಿರೀಕ್ಷಾ ಆಳ್ವ ಮತ್ತು ದೀಪ್ತಿ ಚಿತ್ರದ ನಾಯಕನಟಿಯರು.

ದಿನಕ್ಕೆ ನಾಲ್ಕೈದು ಗಂಟೆ ನೃತ್ಯಾಭ್ಯಾಸ ಮಾಡುವ ನಿರೀಕ್ಷಾ ಜೀವಮಾನದಲ್ಲೇ ಫಿಟ್‌ನೆಸ್‌ ಹಾಗು ಡಯೆಟ್‌ ಬಗ್ಗೆ ತಲೆಕೆಡಿಸಿಕೊಂಡವರಲ್ಲವಂತೆ.

‘ನಾನೊಬ್ಬಳು ತಿಂಡಿಪೋತಿ. ಪ್ರತಿ ಗಂಟೆಗೊಮ್ಮೆ ಏನಾದರೂ ತಿನ್ನುತ್ತಿರುತ್ತೇನೆ. ಜಂಕ್‌ಫುಡ್‌, ಸೀಫುಡ್‌ ಅಂದರೆ ಅಚ್ಚುಮೆಚ್ಚು’ ಎಂದು ಸಂಕೋಚವಿಲ್ಲದೆ ನುಡಿಯುತ್ತಾರೆ.

‘... ಇಬ್ಬನಿ’ ತೆರೆಕಾಣುವುದಕ್ಕೂ ಮುನ್ನ ಯಾವುದೇ ಸಿನಿಮಾ ಒಪ್ಪಿಕೊಳ್ಳಬಾರದು ಎಂದು ನಿರ್ಧರಿಸಿರುವ ನಿರೀಕ್ಷಾಗೆ ಈಗಾಗಲೆ ಅನೇಕ ಅವಕಾಶಗಳು ಸಿಗುತ್ತಿವೆಯಂತೆ.

‘ನನ್ನ ಮೊದಲ ಚಿತ್ರ ಬಿಡುಗಡೆ ಆಗಬೇಕು. ನನ್ನ ನಟನೆ ಕುರಿತು ಪ್ರೇಕ್ಷಕರು ಮತ್ತು ವಿಮರ್ಶಕರು ಏನೆನ್ನುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು. ಆಮೇಲಷ್ಟೇ ಮತ್ತೊಂದು ಸಿನಿಮಾ ಒಪ್ಪಿಕೊಳ್ಳಬೇಕು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT