ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನಿಂಗ್ಸ್‌ ಮುನ್ನಡೆಗಾಗಿ ಹೋರಾಟ

ರೋನಿತ್ ಮೋರೆಗೆ ಎರಡು ವಿಕೆಟ್; ಉಮಂಗ್ ಶರ್ಮಾ, ರಿಂಕು ಸಿಂಗ್ ಬ್ಯಾಟಿಂಗ್ ಮಿಂಚು: ಪಂದ್ಯ ಡ್ರಾ ಆಗುವ ಸಾಧ್ಯತೆ ಹೆಚ್ಚು
Last Updated 19 ನವೆಂಬರ್ 2017, 20:20 IST
ಅಕ್ಷರ ಗಾತ್ರ

ಕಾನ್ಪುರ: ಪಂದ್ಯದ ಮೊದಲೆರಡು ದಿನ ಬ್ಯಾಟಿಂಗ್‌ನಲ್ಲಿ ವಿಜೃಂಭಿಸಿದ್ದ ಕರ್ನಾಟಕ ತಂಡದ ಗೆಲುವಿನ ಯೋಜನೆಗೆ ಭಾನುವಾರ ಉತ್ತರಪ್ರದೇಶ ತಂಡದ ಉಮಂಗ್ ಶರ್ಮಾ ಮತ್ತು ರಿಂಕು ಸಿಂಗ್ ಅಡ್ಡಿಯಾದರು. ಇದರಿಂದಾಗಿ ವಿನಯ್‌ ಕುಮಾರ್ ಬಳಗವು ಮೊದಲ ಇನಿಂಗ್ಸ್‌ ಮುನ್ನಡೆಗಾಗಿ ಹೋರಾಟ ನಡೆಸಬೇಕಾಗಿದೆ.

ಇಲ್ಲಿಯ ಗ್ರೀನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ  ಶನಿವಾರ ಸಂಜೆ 7 ವಿಕೆಟ್‌ಗಳಿಗೆ 642 ರನ್‌ ಗಳಿಸಿದ್ದ ತಂಡವು ಡಿಕ್ಲೆರ್ ನೀಡಿರಲಿಲ್ಲ. ಮೂರನೇ ದಿನವೂ ಬ್ಯಾಟಿಂಗ್ ಮುಂದುವರಿಸಿತು. ತಂಡದ ಮೊತ್ತವು 655 ರನ್ ಆಗುವಷ್ಟರಲ್ಲಿ ಉಳಿದ ಮೂರು ವಿಕೆಟ್‌ಗಳನ್ನು ಇಮ್ತಿಯಾಜ್ ಅಹಮದ್ (110ಕ್ಕೆ6) ಕಬಳಿಸಿದರು.

ನಂತರ ಬ್ಯಾಟಿಂಗ್ ಆರಂಭಿಸಿದ ಆತಿಥೇಯರನ್ನು ಬೇಗನೆ ಕಟ್ಟಿಹಾಕಿ ಜಯದತ್ತ ಸಾಗುವ ವಿನಯ್ ಬಳಗದ ಲೆಕ್ಕಾಚಾರ ಕೈಗೂಡಲಿಲ್ಲ. ಆರಂಭಿಕ ಜೋಡಿ ಉಮಂಗ್ ಶರ್ಮಾ (89; 158ಎ, 13ಬೌಂ) ಮತ್ತು ಶಿವಂ ಚೌಧರಿ (57; 87ಎ, 6ಬೌಂ, 3 ಸಿ) ತಮ್ಮ ತಂಡದ ಹೋರಾಟಕ್ಕೆ ಚಾಲನೆ ನೀಡಿದರು. ದಿನದಾಟದ ಕೊನೆ ಹಂತದಲ್ಲಿ ರಿಂಕು ಸಿಂಗ್ (ಬ್ಯಾಟಿಂಗ್ 57;50ಎ, 7ಬೌಂ, 1ಸಿ) ಕಾಡಿದರು.  ಉತ್ತರಪ್ರದೇಶ 69 ಓವರ್‌ಗಳಲ್ಲಿ 5 ವಿಕೆಟ್ ಗಳಿಗೆ 243  ರನ್ ಗಳಿಸಿದೆ.

ಪಂದ್ಯ ಗೆಲ್ಲಬೇಕಾದರೆ ಕೊನೆಯ ದಿನವಾದ ಸೋಮವಾರ ಒಟ್ಟು 15 ವಿಕೆಟ್‌ಗಳನ್ನು (ಮೊದಲ ಇನಿಂಗ್ಸ್‌ನಲ್ಲಿ ಐದು, ಎರಡನೇ ಇನಿಂಗ್ಸ್‌ನಲ್ಲಿ ಹತ್ತು) ಕರ್ನಾಟಕ ಕಬಳಿಸಬೇಕು. ಆದರೆ, ಬ್ಯಾಟ್ಸ್‌ಮನ್‌ಗಳ ‘ಆಪ್ತಮಿತ್ರ’ನಂತೆ ಇರುವ ಪಿಚ್‌ನಲ್ಲಿ ಇಂತಹ ಸಾಧನೆ ಕಷ್ಟ. ಆದ್ದರಿಂದ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದು ಮೂರು ಪಾಯಿಂಟ್‌ಗಳನ್ನು ಗಳಿಸಲು ಕರ್ನಾಟಕ ತಂಡ ಆದ್ಯತೆ ನೀಡುವುದು ಖಚಿತ. ಆತಿಥೇಯರು ಮುನ್ನಡೆ ಪಡೆಯಬೇಕಾದರೆ 412 ರನ್‌ಗಳ ಬಾಕಿಯನ್ನು ಚುಕ್ತಾ ಮಾಡಬೇಕು. 

ದಿಟ್ಟ ಉತ್ತರ: ಕರ್ನಾಟಕದ ಡಿ. ನಿಶ್ಚಲ್  (195 ರನ್) ಮತ್ತು ಮನೀಷ್ ಪಾಂಡೆ (238ರನ್) ಬ್ಯಾಟಿಂಗ್ ಎದುರು ಕಳೆದೆರಡು ದಿನ ಆತಿಥೇಯ ಬೌಲರ್‌ಗಳು ಪರದಾಡಿದ್ದರು. ಮೂರನೇ ದಿನ ಕರ್ನಾಟಕದ ಬೌಲರ್‌ಗಳನ್ನು ಉಮಂಗ್ ಮತ್ತು ಶಿವಂ ಕಾಡಿದರು. ಮೂರು ಸಿಕ್ಸರ್‌ಗಳನ್ನು ಬಾರಿಸಿದ ಶಿವಂ  76 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇವರಿಬ್ಬರ ಆಟದಿಂದಾಗಿ ಊಟದ ವಿರಾಮಕ್ಕೆ ತಂಡದ ಮೊತ್ತವು 23 ಓವರ್‌ಗಳಲ್ಲಿ 90 ರನ್‌ಗಳಾಗಿತ್ತು.

ನಂತರದ ಅವಧಿಯಲ್ಲಿಯೂ ಇವರ ಆಟ ಮುಂದುವರಿಯಿತು. ಮೊದಲ ವಿಕೆಟ್‌ಗೆ 106 ರನ್‌ಗಳನ್ನು ಸೇರಿಸಿದ ಇವರ ಜೊತೆಯಾಟವನ್ನು ಆಫ್‌ಸ್ಪಿನ್ನರ್ ಕೆ. ಗೌತಮ್ ಮುರಿದರು. ಶಿವಂ ಕ್ಲೀನ್‌ಬೌಲ್ಡ್  ಆದರು.  ರೈನಾ ಮತ್ತೆ ವಿಫಲರಾದರು. ರೋನಿತ್‌ ಮೋರೆ ಬೀಸಿದ ಎಲ್‌ಬಿ ಬಲೆಗೆ ಬಿದ್ದರು.

ಉಮಂಗ್ ಜೊತೆಗೂಡಿದ ಮೊಹಮ್ಮದ್ ಸೈಫ್ ನಿಧಾನವಾಗಿ ಆಡಿದರು. ಉಮಂಗ್ 81 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇಬ್ಬರೂ ಮೂರನೇ ವಿಕೆಟ್‌ಗೆ 53 ರನ್ ಸೇರಿಸಿದರು. ಚಹಾದ ನಂತರ ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಎಸೆತದಲ್ಲಿ ಉಮಂಗ್  ವಿನಯಕುಮಾರ್‌ಗೆ ಕ್ಯಾಚ್ ಕೊಟ್ಟರು. ಮೂರು ಓವರ್‌ಗಳ ನಂತರ ರೋನಿತ್ ಎಸೆತದಲ್ಲಿ ಅಕ್ಷದೀಪ್ ಎಲ್‌ಬಿ ಆಗಿ ಹೊರನಡೆದರು.

ನೆಲಕಚ್ಚಿ ಆಡುತ್ತಿದ್ದ ಸೈಫ್ ಜೊತೆಗೂಡಿದ ರಿಂಕು ಧೈರ್ಯದಿಂದ ಬ್ಯಾಟ್‌ ಬೀಸಿದರು. ರಿಂಕು ಸಿಂಗ್ 39 ಎಸೆತಗಳಲ್ಲಿ 50 ರನ್‌ ಗಳಿಸಿದರು. ಅವರನ್ನು ಕಟ್ಟಿಹಾಕಲು ಬೌಲರ್ ಗಳು ಮಾಡಿದ ಪ್ರಯತ್ನಗಳು ವಿಫಲವಾದವು. 59ನೇ ಓವರ್‌  ಬೌಲಿಂಗ್ ಮಾಡಿದ ಕರುಣ್ ನಾಯರ್ ಎಸೆತದಲ್ಲಿ  ಸೈಫ್ ಅವರು ನಿಶ್ಚಲ್‌ಗೆ ಕ್ಯಾಚಿತ್ತರು. ಮಂದಬೆಳಕಿನ ಕಾರಣ ದಿನದ  12 ಓವರ್‌ಗಳು ಬಾಕಿಯಿದ್ದಾಗಲೇ ಆಟ ಸ್ಥಗಿತಗೊಳಿಸಲಾಯಿತು.

ಎಂಟರ ಘಟ್ಟಕ್ಕೆ ಕರ್ನಾಟಕ
ಕಾನ್ಪುರ:
ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್‌ ಪ್ರವೇಶಿಸುವುದು ಖಚಿತವಾಗಿದೆ.

ನವದೆಹಲಿಯಲ್ಲಿ ಭಾನುವಾರ ಮುಕ್ತಾಯವಾದ ‘ಎ‘ ಗುಂಪಿನ ಪಂದ್ಯದಲ್ಲಿ ದೆಹಲಿ ತಂಡವು ಮಹಾರಾಷ್ಟ್ರ ತಂಡವನ್ನು ಸೋಲಿಸಿ ಎಂಟರ ಘಟ್ಟ ತಲುಪಿತು. ದೆಹಲಿ ಐದು ಪಂದ್ಯಗಳಿಂದ ಒಟ್ಟು 24 ಪಾಯಿಂಟ್‌ಗಳನ್ನು ಗಳಿಸಿದೆ. ಕರ್ನಾಟಕ 4 ಪಂದ್ಯಗಳಿಂದ 23 ಪಾಯಿಂಟ್ ಗಳಿಸಿದೆ. ಇಲ್ಲಿ ನಡೆಯುತ್ತಿರುವ ಐದನೇ ಪಂದ್ಯವು ಸೋಮವಾರ ಮುಕ್ತಾಯವಾಗಲಿದೆ. ಇದರಲ್ಲಿ ಕರ್ನಾಟಕವು ಇನಿಂಗ್ಸ್‌ ಮುನ್ನಡೆ ಗಳಿಸಿದರೆ ಮೂರು ಪಾಯಿಂಟ್ ಪಡೆಯುವ ಸಾಧ್ಯತೆ ಇದೆ.

ಗುಂಪಿನಲ್ಲಿರುವ ಇನ್ನುಳಿದ ತಂಡಗಳಾದ ರೈಲ್ವೆಸ್ (14 ಪಾಯಿಂಟ್ಸ್), ಮಹಾರಾಷ್ಟ್ರ (10 ಪಾ), ಹೈದರಾಬಾದ್ (9 ಪಾ), ಉತ್ತರಪ್ರದೇಶ (4ಪಾ) ಮತ್ತು ಅಸ್ಸಾಂ (2 ಪಾ) ಈಗಾಗಲೇ ನಾಕೌಟ್ ಹಾದಿಯಿಂದ ಹೊರಬಿದ್ದಿವೆ. ಗುಂಪಿನ ಎಲ್ಲ ತಂಡಗಳೂ ನ. 25ರಿಂದ ಕೊನೆಯ ಸುತ್ತಿನ ಪಂದ್ಯಗಳನ್ನು ಆಡಲಿವೆ.

ಕ್ವಾರ್ಟರ್‌ಫೈನಲ್‌ಗೆ ದೆಹಲಿ
ನವದೆಹಲಿ:
ದೆಹಲಿ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಐದನೇ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ಎದುರು ಇನಿಂಗ್ಸ್‌ ಮತ್ತು 61 ರನ್‌ಗಳಿಂದ ಜಯಿಸಿ, ಕ್ವಾರ್ಟರ್‌ಫೈನಲ್ ಪ್ರವೇಶಿಸಿತು. ದೆಹಲಿ ತಂಡವು ಐದು ಪಂದ್ಯಗಳಿಂದ ಒಟ್ಟು 24 ಪಾಯಿಂಟ್‌ಗಳನ್ನು ಗಳಿಸಿದೆ. ಇದರೊಂದಿಗೆ ಮಹಾರಾಷ್ಟ್ರ ತಂಡವು ಟೂರ್ನಿಯಿಂದ ಹೊರಬಿದ್ದಂತಾಗಿದೆ.

ದೆಹಲಿ ತಂಡವು 25ರಿಂದ ನಡೆ ಯಲಿರುವ ಕೊನೆಯ ಪಂದ್ಯದಲ್ಲಿ ಹೈದ ರಾಬಾದ್ ತಂಡವನ್ನು ಎದುರಿಸಲಿದೆ.

‘ಡಿ’ ಗುಂಪಿನಲ್ಲಿ ಸರ್ವಿಸಸ್ ತಂಡವು ಇನಿಂಗ್ಸ್ ಮತ್ತು 9 ರನ್‌ಗಳಿಂದ ಛತ್ತೀಸಗಡ ತಂಡದ ಎದುರು ಜಯಿಸಿತು. ಇದೇ ಗುಂಪಿನಲ್ಲಿ ಬಂಗಾಳ ತಂಡವು ಇನಿಂಗ್ಸ್‌ ಮತ್ತು 19 ರನ್‌ಗಳಿಂದ ಪಂಜಾಬ್ ಎದುರು ಗೆದ್ದಿದೆ.

ಸಂಕ್ಷಿಪ್ತ ಸ್ಕೋರು: ದೆಹಲಿ: ಮೊದಲ ಇನಿಂಗ್ಸ್: 111.1 ಓವರ್‌ಗಳಲ್ಲಿ 419. ಮಹಾರಾಷ್ಟ್ರ, ಮೊದಲ ಇನಿಂಗ್ಸ್: 35 ಓವರ್ ಗಳಲ್ಲಿ 99, ಎರಡನೆ ಇನಿಂಗ್ಸ್‌: 63.3 ಓವರ್ ಗಳಲ್ಲಿ 259 (ರುತುರಾಜ್ ಗಾಯಕವಾಡ್ 21, ನೌಷಾದ್ ಶೇಖ್ 21, ರಾಹುಲ್ ತ್ರಿಪಾಠಿ 106, ರೋಹಿತ್ ಮೋಟ್ವಾನಿ 39, ಚಿರಾಗ್ ಖುರಾನಾ 33, ಇಶಾಂತ್ ಶರ್ಮಾ 33ಕ್ಕೆ2, ನವದೀಪ್ ಸೈನಿ 57ಕ್ಕೆ4, ವಿಕಾಶ್ ಮಿಶ್ರಾ 90ಕ್ಕೆ4) ಫಲಿತಾಂಶ: ದೆಹಲಿ ತಂಡಕ್ಕೆ ಇನಿಂಗ್ಸ್‌ ಮತ್ತು 61 ರನ್ ಜಯ.
ಛತ್ತೀಸಗಡ : ಮೊದಲ ಇನಿಂಗ್ಸ್: 72.2 ಓವರ್‌ಗಳಲ್ಲಿ 130; ಸರ್ವಿಸಸ್: 90.5 ಓವರ್ ಗಳಲ್ಲಿ 272 ಛತ್ತೀಸಗಡ: ಎರಡನೇ ಇನಿಂಗ್ಸ್: 55.3 ಓವರ್‌ಗಳಲ್ಲಿ 133 ಫಲಿತಾಂಶ: ಸರ್ವಿಸಸ್‌ ತಂಡಕ್ಕೆ ಇನಿಂಗ್ಸ್‌ ಮತ್ತು 9 ರನ್ ಜಯ.

*

ನೆನಪಿನಂಗಳದಲ್ಲಿ ದೊಡ್ಡಗಣೇಶ
ಕಾನ್ಪುರ:
‘ಎರಡು ದಶಕಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ಭಾರತ ತಂಡಕ್ಕೆ ನಡೆದಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೆ. ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದೆ. ಈಗ ಇದೇ ಜಾಗದಲ್ಲಿ ನನ್ನ ರಾಜ್ಯ ತಂಡದ ಆಯ್ಕೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ’–ಕಾನ್ಪುರದ ಗ್ರೀನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಉತ್ತರಪ್ರದೇಶ ತಂಡಗಳ ನಡುವಣ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯಕ್ಕೆ  ಆಯ್ಕೆಗಾರರಾಗಿ ಬಂದಿರುವ ಹಿರಿಯ ಕ್ರಿಕೆಟಿಗ ದೊಡ್ಡಗಣೇಶ್ ಅವರ ಮಾತುಗಳಿವು.  ಗ್ರೀನ್‌ ಪಾರ್ಕ್‌ನಲ್ಲಿ ತಮ್ಮ ವೃತ್ತಿಜೀವನಕ್ಕೆ ಲಭಿಸಿದ್ದ ಮಹತ್ವದ ತಿರುವಿನ ನೆನಪನ್ನು  ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘1996ರಲ್ಲಿ ಇಲ್ಲಿ ಭಾರತ ತಂಡಕ್ಕೆ ಬೌಲರ್ ಆಯ್ಕೆ ನಡೆಯುತ್ತಿತ್ತು. ಕರ್ನಾಟಕದಿಂದ ನನ್ನನ್ನು ಮತ್ತು ಮುಂಬೈ ತಂಡದ ಅಬೆ ಕುರುವಿಲ್ಲಾ ಅವರನ್ನು ಇಲ್ಲಿಗೆ ಕರೆಸಿದ್ದರು. ದೇಶದ ತಂಡಕ್ಕೆ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತ್ತು. ಆಗ ಮೊಬೈಲ್ ಫೋನ್ ಇರಲಿಲ್ಲ. ಇಲ್ಲಿಯೇ ಸಮೀಪದ ಫೋನ್‌ ಬೂತ್‌ಗೆ ಹೋಗಿ ಮನೆಗೆ ತಿಳಿಸಿದ್ದೆ. ಅದೇ ಖುಷಿಯಲ್ಲಿ ಬೂತ್‌ನವರಿಗೆ ದುಡ್ಡು ಕೊಡುವುದನ್ನೂ ಮರೆತು ಬಂದಿದ್ದೆ’ ಎಂದು ನಕ್ಕರು.

‘1991–92ರಲ್ಲಿ ಜೂನಿಯರ್ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ ಇಲ್ಲಿ ಪಂದ್ಯ ಆಡಲು ಬಂದಿದ್ದೆ. ಆದರೆ, ಆಗ  ಅಂತಿಮ ಹನ್ನೊಂದರಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಆಗ ನಮಗೆ ದಿನಭತ್ಯೆ ₹ 75 ನೀಡುತ್ತಿದ್ದರು. ರೈಲಿನಲ್ಲಿ ಮೂರು ದಿನ ಪ್ರಯಾಣ ಮಾಡಿ ಬರಬೇಕಿತ್ತು. ಆದರೆ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದು ಖುಷಿ ನೀಡಿತ್ತು’ ಎಂದು ನೆನಪಿಸಿಕೊಂಡರು.

‘ಈ ಊರಿಗೆ 21 ವರ್ಷಗಳ ನಂತರ ಬಂದಿದ್ದೇನೆ. ನಾನು ಬೆಳೆದ, ಆಡಿದ ರಾಜ್ಯ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವ ಹೊಣೆಯನ್ನು ನನಗೆ ವಹಿಸಲಾಗಿದೆ. ರಘುರಾಮ್ ಭಟ್ ಅವರೊಂದಿಗೆ ಈ ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕದ ಎಲ್ಲ ಕಡೆಯೂ ಉತ್ತಮ ಸೌಲಭ್ಯಗಳು ಇರುವುದರಿಂದ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಆಯ್ಕೆ ಮಾಡುವುದು ಸವಾಲಿನ ಕೆಲಸ. ಪ್ರತಿಭಾವಂತರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸುತ್ತಿದ್ದೇವೆ. ಅದರ ಫಲವಾಗಿಯೇ ರಾಜ್ಯ ತಂಡವು ಇವತ್ತು ಬಲಿಷ್ಠವಾಗಿದೆ’ ಎಂದರು.

‘ಕಳೆದ ನಾಲ್ಕು ವರ್ಷಗಳಿಂದ ಆಯ್ಕೆಗಾರನಾಗಿದ್ದೇನೆ. ಹಲವು ಉತ್ತಮ ದಾಖಲೆಗಳನ್ನು ಕಂಡಿದ್ದೇನೆ. ಕರ್ನಾಟಕದ ಮೂವರು ಆಟಗಾರರು ತ್ರಿಶತಕಗಳಿಗೆ ಸಾಕ್ಷಿಯಾಗಿದ್ದೇನೆ. ಅವಿಸ್ಮರಣೀಯ ಗೆಲುವುಗಳನ್ನು ಕಂಡಿದ್ದೇನೆ. ಅನುಭವಿ ಮತ್ತು ಯುವ ಆಟಗಾರರು ತಂಡವನ್ನು ಸಬಲಗೊಳಿಸಿದ್ದಾರೆ. ಈ ಸಲ ನಾಕೌಟ್ ಹಂತಕ್ಕೆ ತಂಡವು ಈಗಾಗಲೇ ಪ್ರವೇಶಿಸಿದೆ. ಟ್ರೋಫಿ ಗೆಲ್ಲುವ ಸಾಮರ್ಥ್ಯ ತಂಡಕ್ಕೆ ಇದೆ’ ಎಂದು ದೊಡ್ಡಗಣೇಶ್ ಹೇಳಿದರು.

ಮಧ್ಯಮವೇಗಿ ಬೌಲರ್‌ ಆಗಿದ್ದ ದೊಡ್ಡಗಣೇಶ್ ಅವರು ನಾಲ್ಕು ಟೆಸ್ಟ್, ಒಂದು ಅಂತರರಾಷ್ಟ್ರೀಯ ಏಕದಿನ ಮತ್ತು 104 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT