ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವೈಕಲ್ಯಕ್ಕೆ ಸವಾಲು; ಬಾಲಾಜಿಗೆ ಒಲಿಂಪಿಕ್ಸ್‌ ಕನಸು

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಅಂಗವೈಕಲ್ಯವನ್ನೇ ಯಶಸ್ಸಿನ ಮೆಟ್ಟಿಲು ಮಾಡಿಕೊಂಡಿರುವ ಬೆಂಗಳೂರಿನ ಕೆ.ಬಾಲಾಜಿ ಅಥ್ಲೆಟಿಕ್ಸ್‌ನಲ್ಲಿ ಭವಿಷ್ಯ ಕಂಡುಕೊಂಡಿದ್ದಾರೆ.

ನೇಪಾಳದಲ್ಲಿ ಇತ್ತೀಚೆಗೆ ನಡೆದ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದುಕೊಂಡಿರುವ ಅವರು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸು ಇಟ್ಟುಕೊಂಡಿದ್ದಾರೆ.

ಡಿಸ್ಕಸ್‌ನಲ್ಲಿ ಚಿನ್ನ ಹಾಗೂ ಶಾಟ್‌ಪಟ್‌ನಲ್ಲಿ ಬೆಳ್ಳಿ ಗೆದ್ದಿದ್ದಾರೆ. 19ರಿಂದ 20 ಮೀ ಶಾಟ್‌ಪಟ್ ಮಾಡುವ ಅವರು 22 ಮೀ ತಲುಪುವ ಮೂಲಕ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿಯೂ ಆಡುವ ಗುರಿ ಹೊಂದಿದ್ದಾರೆ. ಅವರ ಎರಡೂ ಕಾಲುಗಳು ಹಾಗೂ ಎಡಗೈ ಸ್ವಾದೀನ ಕಳೆದುಕೊಂಡಿವೆ. ಚೆನ್ನಾಗಿರುವ ಒಂದು ಕೈಯಲ್ಲಿಯೇ ಜೀವನ ಕಂಡುಕೊಳ್ಳಲು ಬಾಲಾಜಿ ನಿರ್ಧರಿಸಿದ್ದರು.

ಕಾಲುಗಳ ಸಹಾಯ ಇಲ್ಲದೆ ವ್ಹೀಲ್‌ಚೇರ್‌ನಲ್ಲಿ ಕುಳಿತು ಆಡಬಹುದಾದ ಶಾಟ್‌ಪಟ್‌ ಹಾಗೂ ಡಿಸ್ಕಸ್ ಥ್ರೋ ಆಯ್ಕೆ ಮಾಡಿಕೊಂಡರು. ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಮನೆ ಹತ್ತಿರ ಅಭ್ಯಾಸ ಮಾಡುತ್ತಾರೆ. ಮದ್ಯಾಹ್ನ ಸೋನಿಕ್‌ವಾಲ್‌ ಕಂಪೆನಿಯಲ್ಲಿ ಕೆಲಸ. ಇದು ಅವರ ದಿನಚರಿ ಎನಿಸಿದೆ.

‘ದೊಡ್ಡವನಾಗಿ ಬೆಳೆದಂತೆ ನನ್ನ ಅಂಗವೈಕಲ್ಯ ಹೆಚ್ಚಾಯಿತು. ಉಸಿರಾಟದ ತೊಂದರೆ ಕೂಡ ಕಾಡುತ್ತಿತ್ತು. ದೇಹದ ತೂಕ ಹೊರಲು ಸಾಧ್ಯವಾಗುತ್ತಿರಲಿಲ್ಲ. ಆರೋಗ್ಯಕ್ಕಾಗಿ ನಾನು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಬೇಕು ಎಂದು ನಿರ್ಧರಿಸಿದೆ. ಆಗ ನನಗೆ ಶಾಟ್‌ಪಟ್ ಹಾಗೂ ಡಿಸ್ಕಸ್‌ ಮೇಲೆ ಇದ್ದ ಪ್ರೀತಿ ಚಿಗುರೊಡೆಯಿತು’ ಎಂದು ಆಟದ ಅಂಗಳಕ್ಕೆ ಇಳಿದ ಆರಂಭದ ದಿನಗಳನ್ನು ನೆನೆದರು.

‘ತಂದೆ ತಾಯಿಗೆ ನಾನು ಒಬ್ಬನೇ ಮಗ. ಇಬ್ಬರು ಅಕ್ಕಂದಿರು ಇದ್ದಾರೆ. ಕುಟುಂಬದ ಜವಾಬ್ದಾರಿ ನನ್ನ ಮೇಲಿದೆ. ಅಪ್ಪ, ಅಮ್ಮ ಹಾಗೂ ಹೆಂಡತಿ, ಮಗು ನನ್ನ ಮೇಲೆ ಅವಲಂಬಿತರು. ಕೆಲಸ ಬಿಟ್ಟು ಪೂರ್ಣಪ್ರಮಾಣದಲ್ಲಿ ಕ್ರೀಡೆಯಲ್ಲಿ ತೊಡಗಲು  ಸಾಧ್ಯವಿಲ್ಲ. ಆದರೆ ಈ ಹಾದಿಯಲ್ಲಿ ಸಾಕಷ್ಟು ದೊಡ್ಡ ದೊಡ್ಡ ಕನಸುಗಳಿವೆ’ ಎಂದು ಹೇಳುತ್ತಾರೆ.

‘ನನಗೆ ಕೋಚ್ ಯಾರೂ ಇಲ್ಲ. ಗೂಗಲ್ ನೋಡಿ ಕೆಲವು ತಂತ್ರಗಳನ್ನು ಕಲಿತುಕೊಂಡಿದ್ದೇನೆ. ಆಗಾಗ ಕಂಠೀರವ ಕ್ರೀಡಾಂಗಣಕ್ಕೆ ಹೋಗುತ್ತೇನೆ. ಅಲ್ಲಿ ಅಭ್ಯಾಸ ಮಾಡುತ್ತಿರುವವರನ್ನು ನೋಡುತ್ತೇನೆ. ಸತತ ಅಭ್ಯಾಸ ಮಾಡುವ ಕಾರಣ ನಾನು ಈ ಹಂತಕ್ಕೆ ತಲುಪಿದ್ದೇನೆ’ ಎಂದು ಅವರು ತಮ್ಮ ಮನದಾಳ ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT