ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲುಪೆಟ್ಟಿಗೆ ಮುಂದಿನ ಎರಡು ದಶಕ

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಜಿಯಾಂಗ್ ಲ್ಯುಗಿ ಬಫೋನ್ ಇಟಲಿಯ ಜನಪ್ರಿಯ ಫುಟ್‌ಬಾಲ್ ಗೋಲ್‌ಕೀಪರ್. ಎರಡು ದಶಕ ದೇಶದ ಪರವಾಗಿ ಆಡಿದ ಮಹತ್ವಾಕಾಂಕ್ಷಿ. ಮೊನ್ನೆ ಮೊನ್ನೆ ಅವರು ನಿವೃತ್ತಿ ಪ್ರಕಟಿಸಿದಾಗ ಕೆಲವರಿಗೆ ಅಚ್ಚರಿಯಾಯಿತು. ಯಾಕೆಂದರೆ, ಹೋದವರ್ಷವಷ್ಟೆ ಅವರು 2018ರ ‘ಫಿಫಾ’ ವಿಶ್ವಕಪ್‌ನಲ್ಲಿ ತಮ್ಮ ದೇಶವನ್ನು ಗೆಲ್ಲಿಸಬೇಕೆಂಬ ಕನಸು ಹಂಚಿಕೊಂಡಿದ್ದರು.

1978ರಲ್ಲಿ ಹುಟ್ಟಿದ ಬಫೋನ್ ರಕ್ತದಲ್ಲೇ ಕ್ರೀಡೆ ಇದೆ. ಅವರ ಅಪ್ಪ ಆಡ್ರಿಯಾನೊ ವೇಟ್‌ಲಿಫ್ಟರ್‌. ಅಮ್ಮ ಮರಿಯಾ ಸ್ಟೆಲಾ ಡಿಸ್ಕಸ್‌ ಥ್ರೋನಲ್ಲಿ ಪಳಗಿದ್ದವರು.

ಸಹೋದರಿಯರಾದ ವೆರೋನಿಕಾ, ಗ್ವೆಂಡ್ಯಾಲಿನಾ ವಾಲಿಬಾಲ್‌ನಲ್ಲಿ ರಾಷ್ಟ್ರದ ತಂಡವನ್ನು ಪ್ರತಿನಿಧಿಸಿದ್ದವರು. ಚಿಕ್ಕಪ್ಪ ಡಾಂಟೆ ಮಸೊರೊ ‘ಸೀರೀಸ್ ಎ’ ಬಾಸ್ಕೆಟ್ ಬಾಲ್ ಆಟಗಾರರಾಗಿದ್ದರು.

ಇಂಥ ಕೌಟುಂಬಿಕ ಹಿನ್ನೆಲೆಯ ಬಫೋನ್ 1000ಕ್ಕೂ ಹೆಚ್ಚು ಪಂದ್ಯಗಳಲ್ಲಿ ಗೋಲ್‌ಕೀಪರ್‌ ಆಗಿ ಛಾಪು ಮೂಡಿಸಿದ್ದಾರೆನ್ನುವುದು ವಿಶೇಷ. 2004ರಲ್ಲಿ ಖ್ಯಾತ ಆಟಗಾರ ಪೀಲೆ ಪಟ್ಟಿ ಮಾಡಿದ ವಿಶ್ವದ ಸಾರ್ವಕಾಲಿಕ ಶ್ರೇಷ್ಠ 100 ಆಟಗಾರರ ಹೆಸರಿನಲ್ಲಿ ಬಫೋನ್ ಅವರೂ ಒಬ್ಬರು.

ಹನ್ನೊಂದು ಸಲ ವರ್ಷದ ‘ಸೀರೀಸ್ ಎ ಗೋಲ್ ಕೀಪರ್’ ಎಂಬ ಗೌರವ ದಕ್ಕಿಸಿಕೊಂಡ ಈ ಆಟಗಾರ, 2001ರಲ್ಲಿ ಜುವೆಂಟಸ್ ಕ್ಲಬ್ ಪರವಾಗಿ ಆಡಲು ಸಹಿ ಮಾಡಿದರು. ಅದುವರೆಗೆ ವಿಶ್ವದ ಯಾವ ಕ್ಲಬ್ ಕೂಡ ಕೊಡದಷ್ಟು ದೊಡ್ಡ ಮೊತ್ತವನ್ನು ಗೋಲ್ ಕೀಪರ್ ಒಬ್ಬನಿಗೆ ಕೊಟ್ಟು ಆ ಕ್ಲಬ್‌ನವರು ಒಪ್ಪಂದ ಮಾಡಿಕೊಂಡಿದ್ದರು. ಹೀಗಾಗಿ ಬಫೋನ್ ಅತಿ ದುಬಾರಿ ಗೋಲ್‌ಕೀಪರ್ ಕೂಡ ಹೌದು.

ಯುರೋಪ್‌ನಲ್ಲೇ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನೂಹ್ಯ ಸಾಧನೆಯೂ ಅವರ ಹೆಸರಲ್ಲಿದೆ. ಈ ಸಹಸ್ರಮಾನದ ಪ್ರಾರಂಭ ಬಫೋನ್ ಅವರಿಗೆ ಸಿಹಿಯನ್ನು ಹೆಚ್ಚಾಗಿ ನೀಡರಲಿಲ್ಲ. 2000ನೇ ಇಸವಿಯಲ್ಲಿ ಕಾನೂನು ಪದವಿ ಪಡೆಯುವ ಆಸೆಯಿಂದ ಅವರು ನಕಲಿ ಡಿಪ್ಲೊಮಾ ಅಂಕಪಟ್ಟಿಯನ್ನು ಲಗತ್ತಿಸಿ ಸಿಕ್ಕಿಬಿದ್ದಿದ್ದರು. ಅದರ ವಿಚಾರಣೆ ನಡೆದು, ಜೈಲುಶಿಕ್ಷೆಯಿಂದ ಸ್ವಲ್ಪದರಲ್ಲೇ ಪಾರಾದರು. ಅದಕ್ಕಾಗಿ ದೊಡ್ಡ ಮೊತ್ತದ ದಂಡ ಕಟ್ಟಿದರು.

ಜನಪ್ರಿಯತೆ ನಿಭಾಯಿಸುವಾಗಲೂ ಅವರು ಅನೇಕ ಇಳಿತಗಳನ್ನು ಅನುಭವಿಸಿದ್ದಾರೆ. 2003-04ರ ಋತುವಿನಲ್ಲಿ ಚಾಂಪಿಯನ್ಸ್ ಲೀಗ್ ಫೈನಲ್ಸ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಜುವೆಂಟಸ್ ಕ್ಲಬ್ ಸೋಲನ್ನು ಕಂಡಿತು. ಆ ಪಂದ್ಯದ ನಂತರ ಅವರು ಖಿನ್ನತೆಗೆ ಒಳಗಾದರು. ಗೋಲುಪೆಟ್ಟಿಗೆಯ ಮುಂದೆ ನಿಲ್ಲುವುದೇ ಕಷ್ಟವೆನ್ನಿಸತೊಡಗಿತು. ಮನೋವೈದ್ಯರ ಬಳಿಗೆ ಹೋದರು. ‘ಗುಳಿಗೆ ಕೊಡದೆ ಚಿಕಿತ್ಸೆ ನೀಡಿ’ ಎಂದು ಮೊರೆಯಿಟ್ಟರು. ವೈದ್ಯರು ಒತ್ತಡದಿಂದ ಹೊರಬರುವ ಮಾರ್ಗೋಪಾಯಗಳನ್ನು ಸೂಚಿಸಿದರು. 2004ರ ‘ಯೂರೊ’ ಋತುವಿನ ಹೊತ್ತಿಗೆ ಮನಸ್ಸು ಪ್ರಸನ್ನವಾಯಿತು.

2006ರ ವಿಶ್ವಕಪ್ ಬಫೋನ್ ಬದುಕಿನ ಮಹತ್ವದ ವರ್ಷ. ಫುಟ್‌ಬಾಲ್‌ನಲ್ಲಿ ‘ಕ್ಲೀನ್ ಶೀಟ್ ನಿಭಾಯಿಸುವುದು’ ಎಂಬ ತಾಂತ್ರಿಕ ಪದಗಳಿವೆ. ಗೋಲ್ ಕೀಪರ್ ಎದುರಾಳಿ ತಂಡಕ್ಕೆ ಒಂದೂ ಗೋಲ್ ಹೊಡೆಯಲು ಬಿಡದೇ ಇರುವುದನ್ನು ಇದು ಸೂಚಿಸುತ್ತದೆ. ಇಂಥ ‘ಕ್ಲೀನ್ ಶೀಟ್’ ಅನ್ನು 453 ನಿಮಿಷ ಆ ವಿಶ್ವಕಪ್ ಪಂದ್ಯಗಳಲ್ಲಿ ಬಫೋನ್ ನಿಭಾಯಿಸಿದ್ದರು. ಅಂದರೆ ಆಡಿದ ಪಂದ್ಯಗಳಲ್ಲಿ ಅಷ್ಟೂ ನಿಮಿಷದ ಅವಧಿ ಎದುರಾಳಿಗಳಿಗೆ ಗೋಲ್ ಗಳಿಸಲು ಅವಕಾಶ ಕೊಟ್ಟಿರಲಿಲ್ಲ.

ಎರಡು ಮದುವೆ, ಒಂದು ವಿವಾದ ವಿಚ್ಛೇದನ, ಜೆರ್ಸಿ ನಂಬರ್‌ಗೆ ಸಂಬಂಧಿಸಿದಂತೆ ಕಾಲು ಡಜನ್ ವಿವಾದಗಳು, ಹುಡುಗಾಟಿಕೆಯಿಂದ ಹಲವು ಸಲ ಪೇಚಿಗೆ ಸಿಲುಕಿದ್ದು- ಇವೆಲ್ಲವುಗಳನ್ನು ಹಾದುಬಂದ ಬಫೋನ್ ಜನಮನದಲ್ಲಿ ಒಬ್ಬ ಅಪ್ರತಿಮ ಗೋಲ್‌ಕೀಪರ್‌ ಆಗಿಯಷ್ಟೇ ಉಳಿದಿದ್ದಾರೆ; ಉಳಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT