ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡೆಲ್‌ ಆದ ಬೈಕ್‌ರೈಡರ್‌

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮಾಡೆಲಿಂಗ್‌ ಕ್ಷೇತ್ರಕ್ಕೆ ಈಗಷ್ಟೇ ಪ್ರವೇಶಿಸಿರುವ ವೈಷ್ಣವಿ ಕುಶಾಲಪ್ಪ ಮಡಿಕೇರಿಯವರು. ಅಂತಿಮ ವರ್ಷದ ಬಿ.ಕಾಂ. ಒದುತ್ತಿರುವ ಇವರು, ಬೈಕ್‌ ರೈಡಿಂಗ್‌ ಜೊತೆಗೆ ಮಾಡೆಲಿಂಗ್‌ ಕನಸನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಕೋಲುಮುಖ, ಹೊಂಬಣ್ಣ, ನೀಳಕಾಲಿನ ಈ ಸುಂದರಿ ಮಾಡೆಲಿಂಗ್‌ ಲೋಕ ಪ್ರವೇಶಿಸಿ ಒಂದು ವರ್ಷವಾಗಿದೆ.

‘ಮಾಡೆಲಿಂಗ್‌ ನನ್ನ ಆಯ್ಕೆಯಾಗಿರಲಿಲ್ಲ. ಬಯಸದೇ ಬಂದ ಭಾಗ್ಯವಿದು. ಈಗ ಈ ಕ್ಷೇತ್ರ ಬಿಟ್ಟು ಬೇರೆ ವೃತ್ತಿ ಆಯ್ಕೆಯೇ ಬೇಡ ಎನ್ನುಷ್ಟರ ಮಟ್ಟಿಗೆ ಇದರಲ್ಲಿ ತೃಪ್ತಿ ಕಂಡುಕೊಂಡಿದ್ದೇನೆ’ ಎಂದು ಮಾಡೆಲಿಂಗ್‌ ಪಯಣವನ್ನು ನೆನಪಿಸಿಕೊಳ್ಳುತ್ತಾರೆ.

‘ಮಾಡೆಲಿಂಗ್‌ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಆಕಾಂಕ್ಷೆ ಇರಲಿಲ್ಲ. ಅಂಥ ಕನಸನ್ನೂ ಕಂಡಿರಲಿಲ್ಲ. ಸ್ನೇಹಿತರೆಲ್ಲಾ, ನೀನು ಥೇಟ್‌ ಮಾಡೆಲ್‌ ಥರ ಇದ್ದೀಯಾ, ಯಾಕೆ ರೂಪದರ್ಶಿಯಾಗಬಾರದು ಎನ್ನುತ್ತಿದ್ದರು. ಅವರ ಮಾತಿನಿಂದ ಸ್ಫೂರ್ತಿ ಪಡೆದು ಪ್ರಯತ್ನಪಟ್ಟೆ. ಅವಕಾಶಗಳು ಒಲಿದವು ಎಂದು ಸಂತಸ ಹಂಚಿಕೊಳ್ಳುತ್ತಾರೆ.

ಮಾಡೆಲಿಂಗ್ ಗಂಭೀರವಾಗಿ ತೆಗೆದುಕೊಂಡು, ಮಿಸ್‌ ಆಂಧ್ರಪ್ರದೇಶ್‌, ರಿಲಯನ್ಸ್‌ ಜ್ಯುವೆಲ್ಸ್‌ ಆಯೋಜಿಸಿದ್ದ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಪಾಪ್ಯುಲರ್‌ ಫೇಸ್‌ ಮತ್ತು ಬೆಸ್ಟ್‌ ಲೆಗ್‌ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದರ ಜೊತೆಗೆ ಸಾಕಷ್ಟು ಜನಪ್ರಿಯ ವಸ್ತ್ರವಿನ್ಯಾಸಕರ ಉಡುಪುಗಳನ್ನು ತೊಟ್ಟು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದ್ದಾರೆ.

ಮಗಳು ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಂಡಿರುವುದು ಪೋಷಕರಿಗೂ ಹೆಮ್ಮೆ ಎನಿಸಿದೆ. ‘ಸಾಮಾನ್ಯವಾಗಿ ಈ ಕ್ಷೇತ್ರ ಪ್ರವೇಶಿಸುವುದನ್ನು ತಂದೆತಾಯಿ ಇಷ್ಟಪಡುವುದಿಲ್ಲ. ಆದರೆ ಈ ವಿಷಯದಲ್ಲಿ ನಾನು ಅದೃಷ್ಟವಂತೆ. ನಾನು ಏನು ಮಾಡಿದರೂ ಮನೆಯವರು ಬೆಂಬಲ ನೀಡುತ್ತಾರೆ’ ಎನ್ನುತ್ತಾರೆ ಇವರು.

ಅಥ್ಲೀಟ್‌ ಕೂಡ ಆಗಿರುವ ವೈಷ್ಣವಿ ಅವರಿಗೆ ಓದುವುದು ನೆಚ್ಚಿನ ಹವ್ಯಾಸವಂತೆ. ಪ್ರವಾಸ ಮಾಡುವುದು ಇವರಿಗೆ ಇಷ್ಟ.

‘ನಾನು ಟಾಮ್‌ಬಾಯ್‌. ಬೈಕ್‌ ಏರಿ ಊರು ಸುತ್ತುವುದೆಂದರೆ ತುಂಬಾ ಇಷ್ಟ. ಬಿಡುವು ಸಿಕ್ಕಾಗಲೆಲ್ಲ ಸ್ನೇಹಿತರ ಜೊತೆಗೆ ಬೈಕ್‌ ರೈಡಿಂಗ್‌ ಹೋಗುತ್ತೇನೆ. ಮನಾಲಿಗೆ ಪಯಣ ಬೆಳೆಸುವುದೆಂದರೆ ಬಲು ಉತ್ಸಾಹ. ಎರಡು ಬಾರಿ ಹೋಗಿದ್ದೇನೆ’ ಎಂದು ಮಾಡೆಲಿಂಗ್‌ ಹೊರತಾದ ಆಸಕ್ತಿಯನ್ನು ಹಂಚಿಕೊಳ್ಳುತ್ತಾರೆ.

ಸಿನಿಮಾರಂಗಕ್ಕೆ ಜಿಗಿಯುವ ಕನಸೂ ಇವರಿಗಿದೆ. ಆದರೆ ತನ್ನ ಕನಸು ನನಸಾಗಿಸಿಕೊಳ್ಳುವ ತರಾತುರಿ ಇಲ್ಲ. ಮಾಡೆಲಿಂಗ್‌ಗಿಂತ ಅಭಿನಯ ಜಗತ್ತು ಭಿನ್ನ. ಅಲ್ಲಿ ಹೆಜ್ಜೆಯೂರಲು ಬೇಕಾಗುವ ಕೌಶಲಗಳು ಬೇರೆ ಎಂಬುದು ಇವರಿಗೆ ತಿಳಿದಿದೆ. ಬಣ್ಣದ ಕನಸಿಗೆ ಮರುಳಾಗಿ ವಿದ್ಯಾಭ್ಯಾಸವನ್ನು ಹಾಳುಮಾಡಿಕೊಳ್ಳಲೂ ಇವರು ಸಿದ್ಧರಿಲ್ಲ. ಈಗಾಗಲೇ ತಮಗೆ ಬಂದಿರುವ ಹಲವು ನಟನಾ ಅವಕಾಶಗಳನ್ನು ಅವರು ನಯವಾಗಿಯೇ ತಿರಸ್ಕರಿಸಿದ್ದಾರೆ.

‘ಮಾಡೆಲಿಂಗ್‌ ಆದ ನಂತರ ನಾನು ಸಾಕಷ್ಟು ಕಲಿತಿದ್ದೇನೆ. ಉಸಿರಾಡದೇ ವ್ಯಕ್ತಿ ಹೇಗೆ ಬದುಕುವುದಿಲ್ಲವೋ ಹಾಗೇ ನಾನು ಮಾಡೆಲಿಂಗ್‌ ಇಲ್ಲದೇ ಜೀವನವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದೇನೆ. ಫ್ಯಾಷನ್‌ ಜಗತ್ತಿನಲ್ಲಿ ಆತ್ಮವಿಶ್ವಾಸವೇ ಮುಖ್ಯ. ನಮ್ಮ ಆತ್ಮವಿಶ್ವಾಸ ಮುಖದಲ್ಲಿ ವ್ಯಕ್ತವಾಗಬೇಕು’ ಎಂದು ಫ್ಯಾಷನ್‌ ಕ್ಷೇತ್ರದ ಒಳಗುಟ್ಟನ್ನು ಹಂಚಿಕೊಳ್ಳುತ್ತಾರೆ.

ಮಾಡೆಲಿಂಗ್‌ಗೆ ಬಂದಮೇಲೆ ದೇಹಾಕಾರದ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯ. ಸಪೂರವಾಗಬೇಕು ಎಂದು ದೇಹ ದಂಡಿಸುವ ಅಗತ್ಯ ವೈಷ್ಣವಿ ಅವರಿಗೆ ಬಂದಿಲ್ಲ.

‘ನಾನು ಕ್ರೀಡೆ, ಬೈಕ್‌ ರೈಡಿಂಗ್‌ ಎಂದು ಬ್ಯುಸಿಯಾಗಿರುವುದರಿಂದ ಕೊಬ್ಬು ತಾನಾಗಿಯೇ ಕರಗುತ್ತದೆ. ಅದಕ್ಕಾಗಿ ಕಸರತ್ತು ನಡೆಸುವ ಅಗತ್ಯ ಬಂದಿಲ್ಲ. ಆಹಾರ ಸೇವನೆ ವಿಷಯದಲ್ಲಿಯೂ ನಾನು ಧಾರಾಳಿ. ಡಯೆಟ್‌ ಗಿಯಟ್‌ ಮಾಡುವ ಅಗತ್ಯ ಬಂದಿಲ್ಲ. ಚೆನ್ನಾಗಿ ತಿನ್ನುವುದರ ಜೊತೆಗೆ ಆರೋಗ್ಯಕರ ಆಹಾರ ಸೇವನೆಗೆ ಆದ್ಯತೆ ನೀಡುತ್ತೇನೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT