ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಂಗಾ ದರ ಕುಸಿತ: ಬೆಂಬಲ ಬೆಲೆಗೆ ಆಗ್ರಹ

ಖರ್ಚು ವಾಪಸ್‌ ಬಾರದ ಸ್ಥಿತಿಯಲ್ಲಿ ಬೆಳೆಗಾರರು
Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ಶೇಂಗಾ ಬೆಳೆದಿರುವ ರೈತರು ಈ ಬಾರಿ ತೀವ್ರ ಬೆಲೆ ಕುಸಿತದಿಂದಾಗಿ ಕಂಗಾಲಾಗಿದ್ದಾರೆ.

ಶೇಂಗಾವನ್ನು ಹೆಚ್ಚಾಗಿ ಮಳೆ ಆಶ್ರಿತ ಮೊಳಕಾಲ್ಮುರು, ಚಳ್ಳಕೆರೆ, ಕೂಡ್ಲಿಗಿ, ಪಾವಗಡ, ಹಿರಿಯೂರು ತಾಲ್ಲೂಕುಗಳಲ್ಲಿ ಬೆಳೆಯಲಾಗುತ್ತಿದೆ. ಐದಾರು ವರ್ಷಗಳ ನಂತರ ಈ ಬಾರಿ ತುಸು ಬೆಳೆ ಕೈಗೆ ಸಿಗುವ ಲಕ್ಷಣ ಕಾಣಸಿಕ್ಕರೂ ದರ ಕುಸಿತದ ಸುದ್ದಿಯಿಂದ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.

‘ಬಿತ್ತನೆ ವೇಳೆ ಪ್ರತಿ ಕ್ವಿಂಟಲ್‌ಗೆ ₹ 6,000ದಿಂದ ₹ 6,500ರಂತೆ ಖರೀದಿಸಿ ಬಿತ್ತನೆ ಮಾಡಿದ್ದೇವೆ. ಈಗ ₹ 2,000ದಿಂದ ₹ 4,000 ದರವಿದೆ. ಶೇ 50ರಷ್ಟು ದರ ಕುಸಿತವಾಗಿದ್ದು, ನಷ್ಟ ಕಟ್ಟಿಟ್ಟ ಬುತ್ತಿ. ಸರ್ಕಾರ ಬೆಂಬಲ ಬೆಲೆ ನೀಡದಿದ್ದರೆ ಮುಂದಿನ ದಾರಿ ಹೇಗೋ ಎನ್ನುವಂತಾಗಿದೆ’ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಚಳ್ಳಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ದಲ್ಲಾಲರ ಸಂಘದ ಅಧ್ಯಕ್ಷ ಅರವಿಂದ್‌ ಭಾನುವಾರ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಈ ವರ್ಷ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ಆಂಧ್ರಪ್ರದೇಶ ಸೇರಿ ಬಹುತೇಕ ರಾಜ್ಯಗಳಲ್ಲಿ ಶೇಂಗಾ ಉತ್ತಮ ಫಸಲು ಬಂದಿದೆ. ಗುಜರಾತ್‌ನಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಪ್ತು ಮಾಡುವ ಗುಣಮಟ್ಟದ ಶೇಂಗಾವನ್ನು ಹೆಚ್ಚಾಗಿ ಬೆಳೆಯಲಾಗಿದೆ’.

‘ಸರ್ಕಾರ ರಫ್ತಿಗೆ ಅವಕಾಶ ನೀಡದಿರುವುದು ಬೆಲೆ ಕುಸಿತಕ್ಕೆ ಒಂದು ಕಾರಣವಾಗಿದೆ. ನಮ್ಮ ರಾಜ್ಯದಲ್ಲಿ ರಾಜ್ಯ ಬೀಜ ಎಣ್ಣೆ ಅಭಿವೃದ್ಧಿ ನಿಗಮ (ಕೆಒಎಫ್‌) ಈ ವರ್ಷ ಖರೀದಿಗೆ ಮುಂದಾಗದಿರುವುದು ಮತ್ತೊಂದು ದೊಡ್ಡ ಕಾರಣವಾಗಿದೆ’ ಎಂದು ವಿವರಿಸಿದರು.

‘ಸದ್ಯಕ್ಕೆ ಆಂಧ್ರಪ್ರದೇಶ ಗಡಿಭಾಗದಿಂದ ಶೇಂಗಾ ಹೆಚ್ಚಾಗಿ ಮಾರುಕಟ್ಟೆಗೆ ಬರುತ್ತಿದೆ. ನಮ್ಮ ರಾಜ್ಯದ್ದು ಈಗ ಆರಂಭವಾಗುತ್ತಿದೆ. ಪ್ರಸ್ತುತ ಕನಿಷ್ಠ ₹ 2,000, ಗರಿಷ್ಠ ₹ 4,489, ಸಾಮಾನ್ಯ ₹ 3,805 ಇದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಶೇ 45–50ರಷ್ಟು ಕಡಿಮೆ ದರವಿದೆ. ದರ ಹೆಚ್ಚಳ ಸಾಧ್ಯತೆ ಕ್ಷೀಣಿಸಿದ್ದು, ಕೆಒಎಫ್‌ ಖರೀದಿಗೆ ಮುಂದಾದರಷ್ಟೇ ಪರಿಸ್ಥಿತಿ ಸುಧಾರಿಸಬಹುದು’ ಎಂದು ಎಪಿಎಂಸಿ ಕಾರ್ಯದರ್ಶಿ ಖಲೀಲ್‌ ಅಭಿಪ್ರಾಯಪಟ್ಟರು.

‘ಬೆಲೆ ಕುಸಿತ ಗಮನಕ್ಕೆ ಬಂದಿದೆ. ಈ ಬಗ್ಗೆ ಕೃಷಿ ಸಚಿವರ ಜತೆ ಮಾತುಕತೆ ನಡೆಸಲಾಗುವುದು. ‘ಕೆಒಎಫ್‌’ ಖರೀದಿಗೆ ಮುಂದಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಶೇಂಗಾ ಬೆಳೆಗಾರರ ಹಿತ ಕಾಪಾಡಲು ಶಕ್ತಿಮೀರಿ ಶ್ರಮಿಸಲಾಗುವುದು’ ಎಂದು ಶಾಸಕ ಟಿ. ರಘುಮೂರ್ತಿ ಭರವಸೆ ನೀಡಿದ್ದಾರೆ.

‘ಜಿಎಸ್‌ಟಿ’ ಪ್ರಭಾವ

‘ಶೇಂಗಾ ಮಾರಾಟದಲ್ಲಿ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಈ ಬಗ್ಗೆ ಗೊಂದಲವಿರುವ ಕಾರಣ ರಫ್ತು ಮಾಡಲು ಮಾರಾಟಗಾರರು ಮುಂದೆ ಬರುತ್ತಿಲ್ಲ. ಈ ಗೊಂದಲವನ್ನು ಸರ್ಕಾರ ನಿವಾರಿಸಬೇಕು’ ಎಂದು ಚಳ್ಕಕೆರೆ ಎಪಿಎಂಸಿ ದಲ್ಲಾಳಿಗಳ ಸಂಘದ ಅಧ್ಯಕ್ಷ ಅರವಿಂದ್‌ ಒತ್ತಾಯಿಸಿದ್ದಾರೆ.

ಟಿ. ರಘುಮೂರ್ತಿ

* ಬೆಂಬಲ ಬೆಲೆ ಜಾರಿಗೆ ಸರ್ಕಾರದ ಗಮನ ಸೆಳೆಯಲಾಗುವುದು. ರೈತರು ಆತಂಕ ಪಡಬೇಕಿಲ್ಲ

–ಟಿ. ರಘುಮೂರ್ತಿ, ಚಳ್ಳಕೆರೆ ಶಾಸಕ

* ಪ್ರಸಕ್ತ ಸಾಲಿಗೆ ಕೇಂದ್ರ ಸರ್ಕಾರ ಕ್ವಿಂಟಲ್‌ ಶೇಂಗಾಕ್ಕೆ ನಿಗದಿಗೊಳಿಸಿರುವ ₹ 4,250 ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಬೇಕು

– ಖಲೀಲ್‌, ಕಾರ್ಯದರ್ಶಿ, ಚಳ್ಳಕೆರೆ ಎಪಿಎಂಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT