ಸಂಪಾದಕೀಯ

ಮೂಡಿಸ್‌ನ ಶಹಬ್ಬಾಸ್‌ಗಿರಿ ಸುಧಾರಣಾ ಪರ್ವ ನಿಲ್ಲದಿರಲಿ

ರೇಟಿಂಗ್‌ ಹೆಚ್ಚಾದ ಮಾತ್ರಕ್ಕೆ ದೇಶಿ ಆರ್ಥಿಕ ಸ್ಥಿತಿಯ ಸಮಗ್ರ ಸುಧಾರಣೆಯಾಗಿದೆ ಎಂಬ ಭ್ರಮೆಯಲ್ಲಿ ಬದುಕಬಾರದು ಎನ್ನುವುದನ್ನು ನಾವಿಲ್ಲಿ ಮರೆಯಬಾರದು.

ಮೂಡಿಸ್‌ನ ಶಹಬ್ಬಾಸ್‌ಗಿರಿ ಸುಧಾರಣಾ ಪರ್ವ ನಿಲ್ಲದಿರಲಿ

ಸಾಲದ ವಿಶ್ವಾಸಾರ್ಹತೆ ಮತ್ತು ಸಕಾಲದಲ್ಲಿ ಹಣಕಾಸು ಹೊಣೆಗಾರಿಕೆಗಳನ್ನು ನಿಭಾಯಿಸುವುದರಲ್ಲಿ ಭಾರತದ ಮಾನದಂಡವನ್ನು (ಕ್ರೆಡಿಟ್‌ ರೇಟಿಂಗ್‌) ಅಮೆರಿಕದ ಜಾಗತಿಕ ಸಾಲ ಮೌಲ್ಯಮಾಪನಾ ಸಂಸ್ಥೆ ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವಿಸಸ್‌ ಮೇಲ್ದರ್ಜೆಗೆ ಏರಿಸಿದೆ.

ದೇಶಿ ಆರ್ಥಿಕತೆಯ ಮುನ್ನೋಟವನ್ನು ಸ್ಥಿರತೆಯಿಂದ ಸಕಾರಾತ್ಮಕಕ್ಕೆ ಬದಲಿಸಿದೆ. ದೇಶದ ಸಾಲ ಮರುಪಾವತಿ ಸಾಮರ್ಥ್ಯವನ್ನು ‘ಬಿಎಎ–3’ದಿಂದ ‘ಬಿಎಎ–2’ ಶ್ರೇಣಿಗೆ ಹೆಚ್ಚಿಸಿದೆ. ಅಲ್ಪಾವಧಿ ಸಾಲ ಮರುಪಾವತಿ ಮಾಡುವ ಉನ್ನತ ಮಟ್ಟದ ಸಾಮರ್ಥ್ಯ ಹೊಂದಿದೆ ಎಂದೂ ಇದರರ್ಥ.

ಹಲವಾರು ಕಾರಣಗಳಿಗೆ ಇದು ಮಹತ್ವದ ಬೆಳವಣಿಗೆಯಾಗಿದೆ. ಈ ಬಡ್ತಿ ಬಹಳ ಹಿಂದೆಯೇ ಬರಬೇಕಾಗಿತ್ತು. ದೇಶಿ ಆರ್ಥಿಕ ಬೆಳವಣಿಗೆಯ ಭರವಸೆದಾಯಕ ಪಯಣ ಮತ್ತು ಸಾಂಸ್ಥಿಕ ಸುಧಾರಣಾ ಕ್ರಮಗಳಿಂದ ದೀರ್ಘಾವಧಿಯಲ್ಲಿ ಉಜ್ವಲ ಭವಿಷ್ಯ ಕಾದಿರುವುದನ್ನೂ ಇದು ದೃಢಪಡಿಸುತ್ತದೆ. ಭಾರತವು ಬಂಡವಾಳ ಹೂಡಿಕೆಯ ಆಕರ್ಷಕ ದೇಶವಾಗಿ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಳ್ಳಲೂ ನೆರವಾಗಲಿದೆ.

2004ರ ನಂತರ ಸಿಕ್ಕಿರುವ ಈ ಬಡ್ತಿಯು ಕೇಂದ್ರ ಸರ್ಕಾರದ ಸುಧಾರಣಾ ಕ್ರಮಗಳಿಗೆ ದೊರೆತಿರುವ ಶಹಬ್ಬಾಸ್‌ಗಿರಿಯೂ ಹೌದು. ಆದರೆ, ಈ ಶ್ಲಾಘನೆ ಬರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮಾತ್ರ ಸಲ್ಲುವುದಿಲ್ಲ. 1991ರಿಂದಲೂ ಜಾರಿಯಲ್ಲಿ ಇರುವ ಒಟ್ಟಾರೆ ಸುಧಾರಣಾ ಕ್ರಮಗಳಿಗೆ ಸಂದ ಮನ್ನಣೆ ಇದಾಗಿದೆ. ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ ಸಿಗಲಿದೆ. ದೇಶಿ ಕಂಪೆನಿಗಳು ವಿದೇಶಗಳಿಂದ ಕಡಿಮೆ ಬಡ್ಡಿ ದರಕ್ಕೆ ಸಾಲ ಎತ್ತುವುದು ಈಗ ಸುಲಭವಾಗಲಿದೆ.

ಭಾರತ ಸರ್ಕಾರ ತನ್ನ ಸಾಲವನ್ನು ದಕ್ಷ ರೀತಿಯಲ್ಲಿ ನಿರ್ವಹಿಸುತ್ತಿದ್ದು, ಕ್ರಮೇಣ ಸಾಲದ ಹೊರೆ ಇಳಿಯಲಿದೆ. ಭಾರತದಲ್ಲಿ ಬಂಡವಾಳ ಹೂಡುವುದರಿಂದ ಹೆಚ್ಚು ನಷ್ಟದ ಸಾಧ್ಯತೆ ಇರುವುದಿಲ್ಲ. ಇದು ದೇಶದ ಆರ್ಥಿಕ ಮತ್ತು ರಾಜಕೀಯ ಸ್ಥಿರತೆಗೂ ಕನ್ನಡಿ ಹಿಡಿಯುತ್ತದೆ. ವಿದೇಶಿ ಬಂಡವಾಳ ಹೂಡಿಕೆಯೂ (ಎಫ್‌ಡಿಐ) ಹೆಚ್ಚಳಗೊಳ್ಳಲಿದೆ.

ನೋಟು ರದ್ದತಿ, ಜಿಎಸ್‌ಟಿ ಜಾರಿ, ಆಧಾರ್‌ ಆಧಾರಿತ ಬಯೊಮೆಟ್ರಿಕ್‌ ಖಾತೆ, ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ, ಬ್ಯಾಂಕ್‌ಗಳ ಬಾಕಿ ಸಾಲ ವಸೂಲಿಗೆ ಕೈಗೊಂಡ ರಚನಾತ್ಮಕ ಕ್ರಮಗಳನ್ನು ಪರಿಗಣಿಸಿ ಈ ರೇಟಿಂಗ್ ನೀಡಿರುವುದು ಸಹಜವಾಗಿಯೇ ಕೇಂದ್ರ ಸರ್ಕಾರಕ್ಕೆ ಕೋಡು ಮೂಡಿಸಲಿದೆ. ದೇಶಿ ಆರ್ಥಿಕ ವೃದ್ಧಿ ದರವು ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವ ಸಂಕಷ್ಟದ ಹೊತ್ತಿನಲ್ಲಿ ಪ್ರಕಟವಾಗಿರುವ ಈ ವರದಿ ಸರ್ಕಾರದ ಬೆನ್ನು ಚಪ್ಪರಿಸಿದ್ದರೂ ಅದನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ.

‘ಜಾಗತಿಕ ರೇಟಿಂಗ್‌ ಸಂಸ್ಥೆಗಳು ನೀಡುವ ರೇಟಿಂಗ್‌ಗಳು ಅಸಮಂಜಸವಾಗಿರುತ್ತವೆ. ಅವುಗಳನ್ನು ನಾವೇಕೆ ಗಂಭೀರವಾಗಿ ಪರಿಗಣಿಸಬೇಕು’ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಮತ್ತು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದ ಶಕ್ತಿಕಾಂತ್‌ ದಾಸ್ ಅವರು ಈಚೆಗಷ್ಟೇ ಪ್ರಶ್ನಿಸಿದ್ದರು. ಈಗ ತಮ್ಮ ರಾಗ ಬದಲಿಸಿರುವ ಇವರ ನಡೆಯೂ ಪ್ರಶ್ನಾರ್ಹವಾಗಿದೆ.

ಖಾಸಗಿ ಹೂಡಿಕೆ ಪ್ರಮಾಣ ಏಳೆಂಟು ವರ್ಷಗಳಲ್ಲಿಯೇ ಕಡಿಮೆ ಮಟ್ಟದಲ್ಲಿ ಇದೆ. ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣವೂ ಕುಸಿದಿದೆ. ಅನೇಕ ಮೂಲ ಸೌಕರ್ಯ ಯೋಜನೆಗಳು ನನೆಗುದಿಗೆ ಬಿದ್ದಿವೆ. ಹಲವಾರು ಉದ್ದಿಮೆಗಳಿಂದ ಸಾಲ ವಸೂಲಿಗೆ ದಿವಾಳಿ ಸಂಹಿತೆಯಡಿ ಕ್ರಮ ಕೈಗೊಂಡಿರುವುದು ಉದ್ದಿಮೆಗಳು ಬಾಗಿಲು ಹಾಕಲು ಮತ್ತು ಉದ್ಯೋಗ ಅವಕಾಶ ಕಡಿತಕ್ಕೆ ಅವಕಾಶ ಮಾಡಿಕೊಡಲಿದೆ.

ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಸರ್ಕಾರದ ಸಾಲದ ಅನುಪಾತವು ಗರಿಷ್ಠ ಮಟ್ಟದಲ್ಲಿ ಇರುವಾಗಲೇ ಈ ಬಡ್ತಿ ಸಿಕ್ಕಿದೆ. ಆದಾಗ್ಯೂ, ಆರ್ಥಿಕ ಉನ್ನತಿಯು ತನ್ನಷ್ಟಕ್ಕೆ ತಾನೇ ಘಟಿಸಲಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಧಾರಣಾ ಕ್ರಮಗಳ ಜಾರಿಗೆ ಇನ್ನಷ್ಟು ಬದ್ಧತೆ ತೋರಿ ದೇಶದ ಅಂತಃಸತ್ವವನ್ನು ವಾಸ್ತವ ರೂಪದಲ್ಲಿ ಕಾರ್ಯಗತಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಆಗ ಆರ್ಥಿಕತೆಯ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿದೆ. ರೇಟಿಂಗ್ ಬಡ್ತಿಗೂ ಅರ್ಥ ಬರಲಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ ಶಿಫಾರಸು ಸ್ವಾಗತಾರ್ಹ

ಸಂಪಾದಕೀಯ
ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ ಶಿಫಾರಸು ಸ್ವಾಗತಾರ್ಹ

20 Apr, 2018
ನಗದು ಕೊರತೆ ಆತಂಕ ತಕ್ಷಣ ದೂರವಾಗಲಿ

ಸಂಪಾದಕೀಯ
ನಗದು ಕೊರತೆ ಆತಂಕ ತಕ್ಷಣ ದೂರವಾಗಲಿ

19 Apr, 2018
ಸಿರಿಯಾ ಮೇಲೆ ದಾಳಿ ಸಂಯಮ ಅಗತ್ಯ

ಸಂಪಾದಕೀಯ
ಸಿರಿಯಾ ಮೇಲೆ ದಾಳಿ ಸಂಯಮ ಅಗತ್ಯ

18 Apr, 2018
ಗೋಲ್ಡ್‌ ಕೋಸ್ಟ್‌ ಸಾಧನೆ ಹೊಸ ಭವಿಷ್ಯಕ್ಕೆ ಚಿಮ್ಮುಹಲಗೆ

ಸಂಪಾದಕೀಯ
ಗೋಲ್ಡ್‌ ಕೋಸ್ಟ್‌ ಸಾಧನೆ ಹೊಸ ಭವಿಷ್ಯಕ್ಕೆ ಚಿಮ್ಮುಹಲಗೆ

17 Apr, 2018
ಕೆಪಿಎಸ್‌ಸಿ ಅಕ್ರಮ ಕಠಿಣ ಕ್ರಮ ಅಗತ್ಯ

ಸಂಪಾದಕೀಯ
ಕೆಪಿಎಸ್‌ಸಿ ಅಕ್ರಮ ಕಠಿಣ ಕ್ರಮ ಅಗತ್ಯ

16 Apr, 2018