ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ ಭಾರತದ ಕೈಸೇರಲಿದೆ ಕಪ್ಪುಹಣದ ಗುಟ್ಟು

ಸ್ವಯಂ ವಿವರ ವಿನಿಮಯ ವ್ಯವಸ್ಥೆಗೆ ಸ್ವಿಟ್ಜರ್‌ಲೆಂಡ್‌ ಸಂಸದೀಯ ಸಮಿತಿ ಸಮ್ಮತಿ
Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬರ್ನ್‌/ನವದೆಹಲಿ : ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದ ಸ್ವಿಸ್‌ ಬ್ಯಾಂಕ್‌ಗಳಲ್ಲಿಯ ಭಾರತೀಯರ ಬ್ಯಾಂಕ್‌ ಖಾತೆಗಳ ರಹಸ್ಯ ಮಾಹಿತಿ ವಿನಿಮಯಕ್ಕೆ ಸ್ವಿಟ್ಜರ್ಲೆಂಡ್‌ ಸಂಸದೀಯ ಸಮಿತಿ ಒಪ್ಪಿಗೆ ನೀಡಿದೆ.

ಈ ಸಂಬಂಧ ಭಾರತ ಮತ್ತು ಇತರ 40 ರಾಷ್ಟ್ರಗಳ ಜತೆಗಿನ ಉದ್ದೇಶಿತ ಒಪ್ಪಂದಕ್ಕೆ ಸ್ವಿಟ್ಜರ್ಲೆಂಡ್‌ ಸರ್ಕಾರದ ಮೇಲ್ಮನೆಯ ಆರ್ಥಿಕ ವ್ಯವಹಾರ ಮತ್ತು ತೆರಿಗೆ ಮೇಲಿನ ಸಂಸದೀಯ ಸಮಿತಿ ಸಮ್ಮತಿ ಸೂಚಿಸಿದೆ.

ಬ್ಯಾಂಕ್‌ ಖಾತೆಗಳ ಬಗ್ಗೆ ತ್ವರಿತ ಮತ್ತು ಸ್ವಯಂಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆಗೆ ತನ್ನದೇನೂ ತಕರಾರಿಲ್ಲ. ಆದರೆ, ಭವಿಷ್ಯದಲ್ಲಿ ಯಾವುದೇ ಕಾನೂನಾತ್ಮಕ ತೊಡಕುಗಳು ಎದುರಾಗದಂತೆ ಪ್ರಸ್ತಾವನೆಯಲ್ಲಿ ಕೆಲವು ನಿಯಮಾವಳಿಗೆ ತಿದ್ದುಪಡಿ ತರುವಂತೆ ಸಲಹೆ ಮಾಡಿದೆ.

ಸ್ವಯಂಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆಯಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳುವ ಅಗತ್ಯವಿದೆ. ಖಾತೆದಾರರ ವೈಯಕ್ತಿಕ ಹಾಗೂ ಕಾನೂನಾತ್ಮಕ ಹಕ್ಕುಗಳ ರಕ್ಷಣೆಗೆ ನಿಯಮಾವಳಿಗಳನ್ನು ಮತ್ತಷ್ಟು ಬಲಪಡಿಸುವಂತೆ ಹೇಳಿದೆ.

ನವೆಂಬರ್ 27ರಂದು ಆರಂಭವಾಗಲಿರುವ ಸ್ವಿಟ್ಜರ್‌ಲೆಂಡ್‌ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವು ಮೇಲ್ಮನೆಯಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಿದೆ. ಅಂಗೀಕಾರ ಪಡೆದ ನಂತರ ಒಪ್ಪಂದ ಜಾರಿಯಾಗಲಿದೆ.

ಈ ಒಪ್ಪಂದಕ್ಕೆ ಬಲಪಂಥೀಯ ರಾಜಕೀಯ ಪಕ್ಷ ತೀವ್ರ ಆಕ್ಷೇಪ ಎತ್ತಿತ್ತು. ಆದರೆ, ರಾಷ್ಟ್ರೀಯ ಮಂಡಳಿಯಲ್ಲಿ ಈ ಆಕ್ಷೇಪಗಳಿಗೆ ಮನ್ನಣೆ ದೊರೆತಿರಲಿಲ್ಲ. ಇದೇ ಸೆಪ್ಟೆಂಬರ್‌ನಲ್ಲಿ ಮಸೂದೆಗೆ ಕೆಳಮನೆ ಅನುಮೋದನೆ ಪಡೆದಿತ್ತು.

2019ರಲ್ಲಿ ಮೊದಲ ಮಾಹಿತಿ ವಿನಿಮಯ

ಭಾರತ ಮತ್ತು ಸ್ವಿಟ್ಜರ್ಲೆಂಡ್‌ ನಡುವಣ ಒಪ್ಪಂದ 2018ರಿಂದ ಜಾರಿಗೆ ಬರಲಿದ್ದು, 2019ರಲ್ಲಿ ವಿಧ್ಯುಕ್ತವಾಗಿ ಮೊದಲ ಮಾಹಿತಿ ವಿನಿಮಯ ಪ್ರಕ್ರಿಯೆ ನಡೆಯಲಿದೆ.

ಆದರೆ, ಅದಕ್ಕೂ ಮುನ್ನ ಗೌಪ್ಯತೆ ಮತ್ತು ದತ್ತಾಂಶ ರಕ್ಷಣೆಯ ಬಗ್ಗೆ ಭಾರತ ಹಾಗೂ ಇತರ ರಾಷ್ಟ್ರಗಳು ಕೈಗೊಂಡ ಕ್ರಮಗಳ ಬಗ್ಗೆ ಸ್ವಿಟ್ಜರ್ಲೆಂಡ್‌ ಸರ್ಕಾರ ಸ್ಥಿತಿಗತಿ ವರದಿ ಸಿದ್ಧಪಡಿಸಲಿದೆ.

ತಾನು ಒದಗಿಸುವ ಮಾಹಿತಿ ಮತ್ತು ದತ್ತಾಂಶ ಗೌಪ್ಯತೆಯ ಬಗ್ಗೆ ಸ್ವಿಟ್ಜರ್ಲೆಂಡ್ ಸರ್ಕಾರಕ್ಕೆ ಹೆಚ್ಚು ಆತಂಕವಿದೆ. ಹೀಗಾಗಿ ಮಾಹಿತಿ ಮತ್ತು ದತ್ತಾಂಶ ರಹಸ್ಯ ಕಾಪಾಡುವ  ಸಂಬಂಧ ಸ್ವಿಟ್ಜರ್ಲೆಂಡ್ ಇದೇ ಜೂನ್‌ನಲ್ಲಿ ಭಾರತ ಹಾಗೂ ಇತರ ರಾಷ್ಟ್ರಗಳ ಜತೆ ಒಪ್ಪಂದ ಮಾಡಿಕೊಂಡಿತ್ತು.

ಯಾವ ಮಾಹಿತಿ ದೊರೆಯಲಿದೆ?

ಭಾರತೀಯ ಖಾತೆದಾರರ ಹೆಸರು, ವಿಳಾಸ, ಜನ್ಮದಿನಾಂಕ, ಖಾತೆ ಸಂಖ್ಯೆ, ಖಾತೆಯಲ್ಲಿರುವ ಹಣ, ತೆರಿಗೆ ಗುರುತಿನ ಸಂಖ್ಯೆ, ಹಣಕಾಸು ವಹಿವಾಟು, ಬಡ್ಡಿ, ಡಿವಿಡೆಂಡ್‌ ಇತ್ಯಾದಿ ಮಾಹಿತಿಗಳು ಸ್ವಯಂಚಾಲಿತವಾಗಿ ಭಾರತ ಸರ್ಕಾರಕ್ಕೆ ರವಾನೆಯಾಗಲಿವೆ.

ತೆರಿಗೆಗಳ್ಳತನ ತಪ್ಪಿಸುವ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ಸ್ವಯಂಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆ (ಎಇಒಐ) ಅಳವಡಿಸಿಕೊಳ್ಳುವ ಒಪ್ಪಂದಕ್ಕೆ ಭಾರತ, ಸ್ವಿಟ್ಜರ್ಲೆಂಡ್‌ ಸೇರಿದಂತೆ ನೂರಕ್ಕೂ ಹೆಚ್ಚು ರಾಷ್ಟ್ರಗಳು ಸಹಿ ಹಾಕಿವೆ. ಆದರೆ, ಸ್ವಿಟ್ಜರ್ಲೆಂಡ್‌ ದೇಶೀಯ ಬ್ಯಾಂಕ್‌ಗಳ ಖಾತೆದಾರರ ಮಾಹಿತಿ ಹಂಚಿಕೆ ಈ ಒಪ್ಪಂದದ ವ್ಯಾಪ್ತಿಗೆ ಒಳಪಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT