ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿರಿಯರ ಮೆಚ್ಚಿಸಿದರೆ ಮಾತ್ರ ಭಾಷೆಗೆ ಉಳಿಗಾಲ’

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಿರಿಯರನ್ನು ಮೆಚ್ಚಿಸುವ ಸಾಹಿತ್ಯ ಸೃಷ್ಟಿಯಾದರೆ ಕನ್ನಡ ಭಾಷೆಗೆ ಉಳಿಗಾಲವಿದೆ’ ಎಂದು ಕತೆಗಾರ ವಸುಧೇಂದ್ರ ಅಭಿಪ್ರಾಯಪಟ್ಟರು.

ನವಕರ್ನಾಟಕ ಪ್ರಕಾಶನ ಮತ್ತು ಇ–ಜ್ಞಾನ ಟ್ರಸ್ಟ್ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಕನ್ನಡ: ನಿನ್ನೆ, ಇಂದು ಮತ್ತು ನಾಳೆ’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಹಿರಿಯರನ್ನು, ದೊಡ್ಡ ವಿಮರ್ಶಕರನ್ನು ಮೆಚ್ಚಿಸಲು ಸಾಹಿತ್ಯ ಬರೆಯುತ್ತಿದ್ದ ಕಾಲವಿತ್ತು. ಈಗ ಕಾಲ ಬದಲಾಗಿದ್ದು, ಯುವ ಪೀಳಿಗೆಯನ್ನು ಓದುಗರನ್ನಾಗಿ ಮಾಡಿಕೊಳ್ಳದಿದ್ದರೆ ಭಾಷೆಯ ಬೆಳವಣಿಗೆ ಕಷ್ಟವಾಗಲಿದೆ’ ಎಂದರು.

‘ಆಧುನಿಕತೆಯ ಸವಾಲುಗಳನ್ನು ಎಲ್ಲಾ ಕಾಲದಲ್ಲೂ ಸಾಹಿತಿಗಳು ಎದುರಿಸಿದ್ದಾರೆ. ಕಂಪ್ಯೂಟರ್, ಸಾಮಾಜಿಕ ಜಾಲತಾಣಗಳನ್ನು ವಿರೋಧ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ‘ಫೇಸ್‌ ಬುಕ್’ ಮತ್ತು ‘ವಾಟ್ಸ್ಆ್ಯಪ್’ ‌ಆಧುನಿಕ ಅರಳಿಕಟ್ಟೆಗಳು. ಅಲ್ಲಿ ಸಾಹಿತ್ಯ ಹುಟ್ಟದಿರಬಹುದು, ಆದರೆ, ಯುವ ಜನರು ಈ ತಾಣಗಳಲ್ಲಿ ಆಕರ್ಷಿತರಾಗಿದ್ದಾರೆ. ಅವುಗಳನ್ನೇ ಬಳಸಿಕೊಂಡು ಅವರನ್ನು ತಲುಪುವ ಪ್ರಯತ್ನ ನಡೆಯಬೇಕು. ಇಲ್ಲದಿದ್ದರೆ ಭಾಷೆ ನಶಿಸಿ ಹೋಗುತ್ತದೆ’ ಎಂದು ಹೇಳಿದರು.

‘ಕನ್ನಡ ಭಾಷೆಗಿರುವ ಆತಂಕಗಳಿಗೆ ಇಂಗ್ಲಿಷ್ ಮೇಲಿನ ವ್ಯಾಮೋಹ ಒಂದೇ ಕಾರಣ ಅಲ್ಲ. ಏಕೆಂದರೆ ಯುವ ಸಮೂಹ ಕನ್ನಡ ಓದುವುದನ್ನು ನಿಲ್ಲಿಸಿ ಇಂಗ್ಲಿಷ್ ಸಾಹಿತ್ಯ ಓದುತ್ತಿಲ್ಲ. ಅವರು ಓದುವ ಹವ್ಯಾಸವನ್ನೇ ಬೆಳೆಸಿಕೊಂಡಿಲ್ಲ. ಅದಕ್ಕೆ ಶಿಕ್ಷಣ ವ್ಯವಸ್ಥೆಯಲ್ಲಿನ ದೋಷ ಕಾರಣ. ಉದ್ಯೋಗಕ್ಕಾಗಿ ಮಾತ್ರ ಶಿಕ್ಷಣ ಎಂಬ ಮನಸ್ಥಿತಿ ಬದಲಾಗಬೇಕು’ ಎಂದು ವಸುಧೇಂದ್ರ ಅವರು ಪ್ರತಿಪಾದಿಸಿದರು.

ಲೇಖಕ ಜಿ.ಎಂ. ಕೃಷ್ಣಮೂರ್ತಿ, ‘ಕನ್ನಡವನ್ನು ಬೆಳೆಸುವುದಕ್ಕಿಂತ ಉಳಿಸುವುದೇ ದೊಡ್ಡ ಸವಾಲಾಗಿದೆ. ಭಾವನಾತ್ಮಕವಾಗಿ ಕನ್ನಡಿಗರನ್ನು ಒಗ್ಗೂಡಿಸುವ ಕೆಲಸ ಆಗಿಲ್ಲ. ಒಂದಾಗಲು ಎಲ್ಲ ಕನ್ನಡ ಸಂಘಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT