ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೇಂಗಾ ಖರೀದಿ ಶೀಘ್ರ ಆರಂಭ’

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಶೇಂಗಾ ಬೆಲೆ ಕುಸಿತಗೊಂಡಿರುವುದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರವು ಕೆಲವೇ ದಿನಗಳಲ್ಲಿ ಶೇಂಗಾ ಖರೀದಿ ಪ್ರಕ್ರಿಯೆ ಆರಂಭಿಸಲಿದೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯವು ಜಿಕೆವಿಕೆಯಲ್ಲಿ ಆಯೋಜಿಸಿರುವ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶೇಂಗಾ ಬೆಲೆ ಸ್ವಲ್ಪ ಕುಸಿತಗೊಂಡಿದೆ. ಇದರ ಖರೀದಿಗೆ ಅನುಮತಿ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಈ ವರ್ಷ ತೊಗರಿ ಬೆಲೆ ಕುಸಿತಗೊಂಡರೆ ಅದನ್ನೂ ಖರೀದಿ ಮಾಡಲು ರಾಜ್ಯ ಸರ್ಕಾರ ಸಿದ್ಧವಿದೆ’ ಎಂದರು.

‘ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕಡಿಮೆ ಇದೆ. ಸರ್ಕಾರವು ಮಧ್ಯ ಪ್ರವೇಶಿಸಿ ಖರೀದಿ ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ. ಅಲ್ಲಿಂದ ಅನುಮತಿ ಬಂದ ಬಳಿಕ ಖರೀದಿ ಪ್ರಕ್ರಿಯೆ ಆರಂಭಿಸುತ್ತೇವೆ’ ಎಂದು ತಿಳಿಸಿದರು.

‘ಭತ್ತ, ಜೋಳ, ರಾಗಿ, ತೊಗರಿ, ಹೆಸರು, ಉದ್ದು ಧಾನ್ಯಗಳಿಗೆ ಬೆಂಬಲ ಬೆಲೆ ನೀಡುವ ಜತೆಗೆ ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ರಾಗಿ, ಜೋಳಕ್ಕೆ ಶಾಶ್ವತವಾಗಿ ₹400 ಪ್ರೋತ್ಸಾಹ ಧನ ನಿಗದಿ ಪಡಿಸಿದ್ದೇವೆ. ದೇಶದ ಯಾವ ರಾಜ್ಯಗಳಲ್ಲೂ ಇಷ್ಟು ಪ್ರಮಾಣದ ಪ್ರೋತ್ಸಾಹ ಧನ ನೀಡುತ್ತಿಲ್ಲ’ ಎಂದರು.

‘ರಾಜ್ಯದಲ್ಲಿ 2–3 ವರ್ಷಗಳಲ್ಲಿ ಸತತ ಬರ ಬಂದಿತ್ತು. ಈ ವರ್ಷ ಉತ್ತಮ ಮಳೆಯಾಗಿದ್ದು, ರೈತರಿಗೆ ಸಂತಸ ತಂದಿದೆ. ದಕ್ಷಿಣ ಕರ್ನಾಟಕದ ಪ್ರಮುಖ ಬೆಳೆಯಾದ ರಾಗಿ ಎಲ್ಲ ಕಡೆಗಳಲ್ಲಿ ಚೆನ್ನಾಗಿ ಬೆಳೆದಿದೆ’ ಎಂದು ಹೇಳಿದರು.

‘ಕೇಂದ್ರದ ತಪ್ಪು ನಿರ್ಧಾರ’: ‘ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿದ ಮೇಲೆ ಕೇಂದ್ರ ಸರ್ಕಾರವೇ ಅದನ್ನು ಖರೀದಿ ಮಾಡಬೇಕಿತ್ತು. ಆದರೆ, ಪಡಿತರ ವ್ಯವಸ್ಥೆ ಮೂಲಕ ಮೆಕ್ಕೆಜೋಳವನ್ನು ಮಾರಾಟ ಮಾಡುವಂತೆ ಷರತ್ತು ಹಾಕಿದೆ. ಇದು ರೈತರ ದೃಷ್ಟಿಯಿಂದ ತಪ್ಪು ನಿರ್ಧಾರ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.

‘ಕಳೆದ ವರ್ಷ ತೊಗರಿಗೆ ₹450 ಪ್ರೋತ್ಸಾಹ ಧನ ನೀಡಿದ್ದೇವೆ. 34 ಲಕ್ಷ ಕ್ವಿಂಟಲ್‌ ತೊಗರಿಗೆ ಬೆಂಬಲ ಬೆಲೆ ನೀಡಿ ಖರೀದಿಸಿದ್ದೇವೆ. ಕೃಷಿ ಭಾಗ್ಯದ ಮೂಲಕ 1.70 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಿದ್ದೇವೆ. ಈ ವರ್ಷ ಶೇ 70ರಷ್ಟು ಬಿತ್ತನೆ ಆಗಿದೆ’ ಎಂದು ವಿವರಿಸಿದರು.

ಸಣ್ಣ ಹಿಡುವಳಿದಾರರು ಸಮಗ್ರ ಕೃಷಿ ಪದ್ಧತಿ ಮೂಲಕ ಅಧಿಕ ಲಾಭ ಗಳಿಸುವ ಕುರಿತು ಕೃಷಿ ವಿ.ವಿ.ಯು ಮಾಹಿತಿ ನೀಡಬೇಕು
–ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT