ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಸಿ ತೋಟದತ್ತ ನಗರ ಜನರ ಚಿತ್ತ

Last Updated 19 ನವೆಂಬರ್ 2017, 19:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಒತ್ತಡದ ಬದುಕಿಗೆ ಮೈಮನ ಹಗುರಾಗಿಸುವ ಕೆಲಸವನ್ನು ಕೈತೋಟ, ತಾರಸಿ ತೋಟ ಮಾಡುತ್ತದೆ ಎನ್ನುವುದು ಬೆಂಗಳೂರಿಗರು ಕಂಡುಕೊಂಡಿರುವ ಸತ್ಯ.

ಮಹಾನಗರ ಬೆಳೆದಂತೆಲ್ಲಾ ಮಣ್ಣಿನ ಜತೆಗಿನ ಒಡನಾಟ ವಿರಳವಾಗುತ್ತಿದೆ. ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ಸಂಚಾರ ದಟ್ಟಣೆ, ಹವಾಮಾನ ಬದಲಾವಣೆಯಿಂದ ಜನರ ಆರೋಗ್ಯ ಏರುಪೇರಾಗುತ್ತಿದೆ. ಇದಕ್ಕೆ ಪರಿಹಾರವಾಗಿ ತಾರಸಿ ತೋಟದ ಮೊರೆ ಹೋಗಿದ್ದಾರೆ.

ಕೃಷಿ ಮೇಳದಲ್ಲಿ ಊರುಕೇರಿ ವಿಭಾಗ ಗಾರ್ಡನ್‌ ಕೇರ್‌, ಸಾಲಿಡಸ್‌ ಸಂಸ್ಥೆ, ಮೈಡ್ರೀಮ್‌ ಗಾರ್ಡನ್‌, ಹಿತಕೇರಿ ಗಾರ್ಡನ್‌... ಹೀಗೆ ಹತ್ತಾರು ಸಂಸ್ಥೆಗಳು ತಾರಸಿ ತೋಟದ ಕುರಿತು ಮಾಹಿತಿ ನೀಡುತ್ತಿದ್ದವು. ಲಭ್ಯವಿರುವ ಪುಟ್ಟ ಸ್ಥಳದಲ್ಲಿ ತಮ್ಮದೇ ಆದ ಸಣ್ಣದೊಂದು ಕೈತೋಟ ಮಾಡಿಕೊಳ್ಳುವ ಸರಳ ಉಪಾಯಗಳ ಬಗ್ಗೆ ತಿಳಿದುಕೊಳ್ಳಲು ಹೆಚ್ಚಿನ ಸಂಖ್ಯೆಯ ಜನ ಜಮಾಯಿಸಿದ್ದರು.

ಮನೆಯ ತಾರಸಿ ಮತ್ತು ಕೈತೋಟಗಳಲ್ಲಿ ಬೆಳೆಯಬಹುದಾದ ತರಕಾರಿಗಳು, ಔಷಧ ಗಿಡಗಳು ಹಾಗೂ ಅಲಂಕಾರಿಕ ಗಿಡಗಳ ಬಗ್ಗೆ ಅನೇಕರು ಇಲ್ಲಿ ಮಾಹಿತಿ ಪಡೆದರು. ತಾರಸಿ ಹಾಗೂ ಕೈತೋಟಗಳಿಗೆ ಅಗತ್ಯವಾದ ಪರಿಕರಗಳ ಖರೀದಿಯೂ ಜೋರಾಗಿತ್ತು. ಮನೆಯ ಒಳಾಂಗಣ ವಿನ್ಯಾಸಕ್ಕೆ ತಕ್ಕಂತಹ ಅಲಂಕಾರಿಕ ಗಿಡಗಳ ಬಗ್ಗೆ ಮಹಿಳೆಯರು ಆಸಕ್ತಿಯಿಂದ ವಿಚಾರಿಸಿದರು.

ಕೈತೋಟ, ತಾರಸಿ ತೋಟಗಳಲ್ಲಿ ಕುಂಡ/ಟ್ರೇಗಳಲ್ಲಿ ತರಕಾರಿ ಗಿಡಗಳನ್ನು ಬೆಳಸುವ ಬಗ್ಗೆ ಮಾಹಿತಿ ಒದಗಿಸಲಾ­ಗುತ್ತಿದೆ. ಬಿತ್ತನೆ ಬೀಜ ಮಾಡುವುದು, ಸಸಿಗಳನ್ನು ನಾಟಿ ಮಾಡುವುದು, ನೀರು ಮತ್ತು ಪೋಷಕಾಂಶಗಳ ನಿರ್ವಹಣೆ, ಕೀಟ, ರೋಗಗಳ ನಿವಾರಣೆ ಬಗ್ಗೆಯೂ ಇಲ್ಲಿ ಮಾಹಿತಿ ನೀಡಲಾಗುತ್ತಿತ್ತು.

‘ನಗರದಲ್ಲಿ ಶೇ 60ರಷ್ಟು ಮಂದಿ ತಾರಸಿ ತೋಟ ಮಾಡುತ್ತಿದ್ದಾರೆ. ಏನಿಲ್ಲವೆಂದರೂ ಮನೆಯಲ್ಲಿ ಪುಟ್ಟದಾದ ಗಿಡವೊಂದನ್ನು ಬೆಳೆಯುವುದಲ್ಲಿ ಆಸಕ್ತಿ ತೋರುತ್ತಿದ್ದಾರೆ. ಕೈತೋಟದ ಬಗ್ಗೆ ಆಸಕ್ತಿ ವಹಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ’ ಎಂದು ಗಾರ್ಡನ್‌ ಕೇರ್‌ ಸಂಸ್ಥೆಯ ಗೋಪಾಲಕೃಷ್ಣ ಹೆಗ್ಡೆ ತಿಳಿಸಿದರು.

‘ನಮ್ಮಲ್ಲಿ ಎಲ್ಲಾ ಋತುಮಾನ ಗಿಡಗಳು, ಅಲಂಕಾರಿಕ ಗಿಡಗಳು, ಹುಲ್ಲುಹಾಸುಗಳು, ಜಲಸಸ್ಯಗಳು ದೊರೆಯುತ್ತವೆ. ಅದರೊಟ್ಟಿಗೆ ಗಿಡ ಬೆಳೆಯಲು ಅಗತ್ಯವಾದ ಮಣ್ಣು, ಗೊಬ್ಬರವೂ ನಮ್ಮ ಬಳಿ ಇದೆ. ತರಕಾರಿ, ಹಣ್ಣು ಸಸಿಗಳ ಬೀಜಗಳು ನಮ್ಮಲ್ಲಿ ಸಿಗುತ್ತವೆ’ ಎಂದು ಮಾಹಿತಿ ನೀಡಿದರು.

‘ಈ ಹಿಂದೆ ನಿಮ್ಮ ಹೊಲ–ತೋಟಗಳಲ್ಲಿ ಏನು ಬೆಳೆದಿದ್ದೀರಿ ಎನ್ನುವ ಕಾಲವಿತ್ತು. ಈಗ ಅದು ಬದಲಾಗಿ ನಿಮ್ಮ ತಾರಸಿ ತೋಟದಲ್ಲಿ ಏನು ಬೆಳೆದಿದ್ದೀರಿ ಎನ್ನುವ ಕಾಲ ಬಂದಿದೆ. ಅದಕ್ಕೆ ಅಗತ್ಯವಾದ ಪರಿಕರಗಳನ್ನು ಒದಗಿಸಲು ಇಷ್ಟೊಂದು ಸಂಸ್ಥೆಗಳು ಹುಟ್ಟಿಕೊಂಡಿವೆ ಎಂದು ಈ ಮೇಳದಿಂದಲೇ ತಿಳಿಯಿತು’ ಎಂದು ಮೇಳಕ್ಕೆ ಬಂದಿದ್ದ ರೈತ ಸದಾಶಿವ ತಿಳಿಸಿದರು.

ವೈವಿಧ್ಯಮಯ ತೋಟಗಳು: ‌ಲಂಬಾಕಾರ ತೋಟ, ಹ್ಯಾಂಗಿಂಗ್‌ ತೋಟ, ಗ್ರೋ ಬ್ಯಾಗ್, ಕುಂಡಗಳಲ್ಲಿ ಬೆಳೆಯುವುದು, ಮ್ಯಾಜಿಕ್‌ ಪ್ಲಾಂಟರ್‌ ಬಾಕ್ಸ್‌, ಅಗ್ರಿ ಬ್ಲಾಕ್‌... ಹೀಗೆ ಜಾಗದ ಅನುಕೂಲತೆಗೆ ತಕ್ಕಂತೆ ತರಹೇವಾರಿ ಕುಂಡಗಳು ಮೇಳದಲ್ಲಿದ್ದವು.

ಮನೆಯಲ್ಲಿ ಕುಂಡಗಳನ್ನು ಇಡಲು ಜಾಗ ಆಗದವರಿಗೆ ಕಿಟಕಿಗಳಿಗೆ ‍ಪುಟ್ಟ ಪುಟ್ಟ ಕುಂಡಗಳನ್ನು ನೇತುಹಾಕಿ ಬೆಳೆಯುವ ವಿಧಾನವನ್ನು ಹೇಳುತ್ತಿದ್ದರು. ತಾರಸಿಯಲ್ಲಿ ಸಾಕಷ್ಟು ವಿಶಾಲ ಜಾಗವಿದ್ದವರಿಗೆ ದೊಡ್ಡ ಬಾಕ್ಸ್‌ಗಳಲ್ಲಿ ತರಕಾರಿ, ಸೊಪ್ಪು, ಹಣ್ಣುಗಳನ್ನು ಬೆಳೆಯುವ ವಿಧಾನವನ್ನು ಪರಿಚಯಿಸುತ್ತಿದ್ದರು. ಗೋಡೆಗಳ ಮೇಲೆ ಗಿಡ ಬೆಳೆಸುವ ವಿಧಾನದ ಬಗ್ಗೆಯೂ ಮಾಹಿತಿ ಇತ್ತು.

ನರ್ಸರಿಗಳಲ್ಲಿ ಖರೀದಿ ಹೆಚ್ಚಿದ್ದ ಭರಾಟೆ: ಮೇಳದಲ್ಲಿದ್ದ ನರ್ಸರಿಗಳಲ್ಲಿ ಗಿಡಗಳನ್ನು ಕೊಳ್ಳುವವರ ಸಂಖ್ಯೆ ತುಸು ಹೆಚ್ಚೇ ಇತ್ತು. ಚಂದನಸಿರಿ ನರ್ಸರಿಯಲ್ಲಿ ಶ್ರೀಗಂಧ, ರಕ್ತ ಚಂದನ, ಹೆಬ್ಬೇವು, ಬೀಟೆ, ತೋಟಗಾರಿಕೆ ಸಸ್ಯಗಳು, ಹಣ್ಣಿನ ಗಿಡಗಳು ಹೆಚ್ಚು ಮಾರಾಟವಾಗುತ್ತಿತ್ತು. ವಿವಿಧ ತರಕಾರಿ, ಹಣ್ಣುಗಳ ಬೀಜಗಳನ್ನು ಹೆಚ್ಚಿನವರು ಖರೀದಿಸಿದರು. ಸಾವಯವ ಬೀಜಗಳ ಬಗ್ಗೆಯೂ ಹೆಚ್ಚು ಜನ ಆಸಕ್ತಿಯಿಂದ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT