ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆರೆ ಅಭಿವೃದ್ಧಿಗೆ ₹800 ಕೋಟಿ ಕೊಟ್ಟರೂ ಬಳಸಿಲ್ಲ’– ಜಾವಡೇಕರ್‌

Last Updated 19 ನವೆಂಬರ್ 2017, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ₹800 ಕೋಟಿ ಕೊಟ್ಟರೂ ರಾಜ್ಯ ಸರ್ಕಾರ ಅದನ್ನು ಬಳಕೆ ಮಾಡಿಲ್ಲ’ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರೂ ಆದ, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಆರೋಪಿಸಿದರು.

ಬಿಜೆಪಿ ಪ್ರಣಾಳಿಕೆ ಸಮಿತಿಯಿಂದ ಬಸವನಗುಡಿಯ ಬಿಎಂಎಸ್ ಕಾಲೇಜಿನಲ್ಲಿ ಭಾನುವಾರ ನಡೆದ ‘ನವಕರ್ನಾಟಕ ನಿರ್ಮಾಣಕ್ಕಾಗಿ ಪ್ರಣಾಳಿಕೆ ರಚನೆಯ ಪೂರ್ವಭಾವಿ ಅಭಿಯಾನ’ದಲ್ಲಿ ಅವರು ಮಾತನಾಡಿದರು.

‘ಬೆಳ್ಳಂದೂರು ಕೆರೆಯಲ್ಲಿ ನೊರೆಯಿಂದ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿನ ಸುತ್ತಮುತ್ತಲಿನ ಜನ ನಿತ್ಯವೂ ಆತಂಕದಲ್ಲಿಯೇ ಓಡಾಡುತ್ತಾರೆ. ಹಿಂದೆ ವೆಂಕಯ್ಯನಾಯ್ಡು ನಗರಾಭಿವೃದ್ಧಿ ಸಚಿವರಾಗಿದ್ದಾಗ, ನಾನು ಪರಿಸರ ಸಚಿವನಾಗಿದ್ದೆ. ಆಗ ಇಲ್ಲಿನ ಕೆರೆಗಳ ಅಭಿವೃದ್ಧಿಗೆ ಹಣ ನೀಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ಆ ಹಣ ಬಳಿಸಿಕೊಂಡು ಕೆರೆಗಳ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ’ ಎಂದು ದೂರಿದರು.

‘ಬೆಂಗಳೂರಿನ ನಾಗರಿಕರಿಗೆ ರಸ್ತೆ ಗುಂಡಿಗಳೇ ದೊಡ್ಡ ಸಮಸ್ಯೆಯಾಗಿವೆ. ಈ ಸರ್ಕಾರಕ್ಕೆ ಕನಿಷ್ಠ ಗುಂಡಿ ಮುಚ್ಚುವುದಕ್ಕೂ ಸಾಧ್ಯವಾಗಿಲ್ಲ. ಇದು ಸರ್ಕಾರಕ್ಕೇ ಕಪ್ಪುಚುಕ್ಕೆಯಾಗಿದೆ’ ಎಂದು ಜಾವಡೇಕರ್ ಹೇಳಿದರು.

‘ಡಿವೈಎಸ್‌ಪಿ ಗಣಪತಿ ಪ್ರಕರಣದಲ್ಲಿ ಸಚಿವ ಕೆ.ಜೆ. ಜಾರ್ಜ್‌ ನಂ.1 ಆರೋಪಿ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಹೇಳಿದೆ. ಇದುವರೆಗೂ ಅವರು ನೇಣು ಹಾಕಿಕೊಂಡಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಇತ್ತೀಚೆಗೆ ಅವರ ಕೋಣೆಯಲ್ಲಿ ಬುಲೆಟ್ ಪತ್ತೆಯಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದರೂ ಜಾರ್ಜ್ ಸಚಿವರಾಗಿ ಮುಂದುವರಿದಿದ್ದಾರೆ. ಇದು ಸರಿಯಲ್ಲ. ಕೂಡಲೇ ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರಕ್ಕೆ ಯಾವುದೇ ಅಭಿವೃದ್ಧಿ ವಿಚಾರಗಳು ಬೇಕಿಲ್ಲ. ಕೇವಲ ಭ್ರಷ್ಟಾಚಾರ ಮತ್ತು  ಅಧಿಕಾರಕ್ಕಾಗಿ ಹವಣಿಸುತ್ತಿದೆ. ಇಂತಹ ಸರ್ಕಾರವನ್ನು ಜನರು ಕೊನೆಗಾಣಿಸಬೇಕು ಎಂದರು.

ಜನಾಭಿಪ್ರಾಯಕ್ಕೂ ಮನ್ನಣೆ: ‘ಪ್ರಣಾಳಿಕೆ ರಚನೆ ಸಂದರ್ಭದಲ್ಲಿ ಜನಾಭಿಪ್ರಾಯಕ್ಕೂ ಮನ್ನಣೆ ನೀಡುತ್ತೇವೆ. ಎಲ್ಲರ ಸಲಹೆಗಳನ್ನು ಪಡೆದು ಉತ್ತಮ ಅಂಶಗಳನ್ನು ಸೇರಿಸಿಕೊಳ್ಳುತ್ತೇವೆ. ಈ ಸಂಬಂಧ ರಾಜ್ಯದಾದ್ಯಂತ ಪ್ರಣಾಳಿಕೆಯ ಪೂರ್ವ ಸಭೆಗಳನ್ನು ನಡೆಸಲಾಗುವುದು’ ಎಂದು ಜಾವಡೇಕರ್ ಹೇಳಿದರು.

ಶಾಸಕ ಸಿ.ಎನ್. ಅಶ್ವತ್ಥನಾರಾಯಣ, ‘224 ವಿಧಾನಸಭಾ ಕ್ಷೇತ್ರಗಳು, 30 ಜಿಲ್ಲೆಗಳಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿ ಜನರ ಅಭಿಪ್ರಾಯ ಕೇಳಲಾಗುವುದು. ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ ಸೇರಿ 40 ಕ್ಷೇತ್ರಗಳ ಪ್ರಮುಖರ ಸಲಹೆಗಳನ್ನೂ ಪಡೆಯಲಾಗುವುದು’ ಎಂದು ಅವರು ಹೇಳಿದರು.

ಬಿಜೆಪಿ ಪ್ರಣಾಳಿಕೆಗೆ ಜನರು ಸಲಹೆಗಳನ್ನು ನೀಡಲು ಅನುಕೂಲವಾಗುವಂತಹ ವೆಬ್‌ಸೈಟ್‌ಗೆ (http://www.navakarnatakabjp.com) ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT