ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲೇಟ್‌ಲೆಟ್‌: ಅರ್ಜಿ ಸಲ್ಲಿಸದ ರೋಗಿಗಳು

ಬಡರೋಗಿಗಳ ನೆರವಿಗೆ ಮುಂದಾಗಿದ್ದ ಬಿಬಿಎಂಪಿ
Last Updated 19 ನವೆಂಬರ್ 2017, 19:57 IST
ಅಕ್ಷರ ಗಾತ್ರ

ಬೆಂಗಳೂರು: ಡೆಂಗಿ ಚಿಕಿತ್ಸೆಗಾಗಿ ರಕ್ತದ ಪ್ಲೇಟ್ಲೆಟ್‌ ಮರುಪೂರಣಕ್ಕೆ ಬಡರೋಗಿಗಳು ಖರ್ಚು ಮಾಡಿರುವ ಮೊತ್ತವನ್ನು ಭರಿಸಲು ಬಿಬಿಎಂಪಿ ಮುಂದಾಗಿದ್ದರೂ ಇದಕ್ಕಾಗಿ ಒಬ್ಬ ರೋಗಿಯೂ ಅರ್ಜಿ ಸಲ್ಲಿಸಿಲ್ಲ.

‘ಬಡ ರೋಗಿಗಳ ಹಿತದೃಷ್ಟಿಯಿಂದ ಪ್ಲೇಟ್ಲೆಟ್‌ ವೆಚ್ಚ ಪಾವತಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ. ಮೇಯರ್‌ ನಿಧಿಯಿಂದ ಈ ಹಣ ಭರಿಸಲಾಗುತ್ತದೆ. ಈ ಕುರಿತು ಆದೇಶ ಹೊರಡಿಸಿ ಎರಡೂವರೆ ತಿಂಗಳು ಕಳೆದಿವೆ. ಆದರೆ, ಇದರ ಪ್ರಯೋಜನ ಪಡೆಯಲು ಈವರೆಗೆ ಒಬ್ಬರೂ ಮುಂದೆ ಬಂದಿಲ್ಲ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಎಂ.ಎನ್‌.ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಪ್ಲೇಟ್ಲೆಟ್‌ ಮರುಪೂರಣಕ್ಕೆ ₹5,000ರಿಂದ ₹20 ಸಾವಿರದವರೆಗೆ ಶುಲ್ಕ ವಿಧಿಸಲಾಗುತ್ತಿದೆ.

‘ಸಾಕ್ರ ಆಸ್ಪತ್ರೆಗೆ ಪ್ರತಿದಿನ ಸರಾಸರಿ 15 ಡೆಂಗಿ ರೋಗಿಗಳು ದಾಖಲಾಗುತ್ತಾರೆ. ಈ ತಿಂಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಆಗಿದೆ. ಜುಲೈ, ಆಗಸ್ಟ್‌ನಲ್ಲಿ ಪ್ರತಿದಿನ ಸರಾಸರಿ 60 ರೋಗಿಗಳು ದಾಖಲಾಗುತ್ತಿದ್ದರು. ಒಳರೋಗಿಗಳಾಗಿ ದಾಖಲಾಗುವ ಎಲ್ಲರಿಗೂ ಪ್ಲೇಟ್ಲೆಟ್‌ ಮರುಪೂರಣ ಮಾಡುವುದಿಲ್ಲ. ರೋಗಿಯ ಪ್ಲೇಟ್ಲೆಟ್‌ಗಳ ಸಂಖ್ಯೆ 2 ಲಕ್ಷದಿಂದ 50 ಸಾವಿರಕ್ಕೆ ಕುಸಿದಾಗ, ಇದರ ಮರುಪೂರಣಕ್ಕೆ ಸೂಚಿಸುತ್ತೇವೆ’ ಎಂದು ಆಸ್ಪತ್ರೆಯ ಆಂತರಿಕ ಚಿಕಿತ್ಸಾ ವಿಭಾಗದ ನಿರ್ದೇಶಕ ಡಾ.ಎಸ್‌.ಮನೋಹರ್‌ ಹೇಳಿದರು.

‘ನನಗೆ ಡೆಂಗಿ ಜ್ವರ ಇರುವುದು ದೃಢಪಟ್ಟಾಗ ರಕ್ತದಲ್ಲಿ 1.25 ಲಕ್ಷ ಪ್ಲೇಟ್ಲೆಟ್‌ಗಳಿದ್ದವು. ಎರಡನೇ ದಿನಕ್ಕೆ ಅದು 75 ಸಾವಿರಕ್ಕೆ ಕುಸಿಯಿತು. ಮೂರನೇ ದಿನಕ್ಕೆ 15 ಸಾವಿರಕ್ಕೆ ಇಳಿಯಿತು. ಕೂಡಲೇ ಮಣಿಪಾಲ್‌ ಆಸ್ಪತ್ರೆಗೆ ದಾಖಲಾದೆ. ಅಂದು ರಾತ್ರಿ ನನ್ನ ರಕ್ತದಲ್ಲಿ 9,000 ಪ್ಲೇಟ್ಲೆಟ್‌ಗಳಿದ್ದವು. ಸ್ನೇಹಿತರೊಬ್ಬರ ರಕ್ತದಿಂದ ಪಡೆದ ಪ್ಲೇಟ್ಲೆಟ್‌ಗಳನ್ನು ನನಗೆ ಮರುಪೂರಣ ಮಾಡಲಾಯಿತು. ಆದರೆ, ಅದನ್ನು ದೇಹ ಸ್ವೀಕರಿಸಲಿಲ್ಲ. ಹೀಗಾಗಿ ಅದರ ಸಂಖ್ಯೆ 6,000ಕ್ಕೆ ಕುಸಿಯಿತು. ಅಲರ್ಜಿ ಶುರುವಾಯಿತು’ ಎಂದು ಸುಜೀಶ್‌ ತಮ್ಮ ಅನುಭವ ಹಂಚಿಕೊಂಡರು.

‘ವೈದ್ಯರು ಚಿಕಿತ್ಸೆಯನ್ನು ಮುಂದುವರಿಸಿದ್ದರು. 2–3 ದಿನಗಳಲ್ಲಿ ಅದರ ಸಂಖ್ಯೆ ವೃದ್ಧಿಸಿತ್ತು. ಇದರ ಮರುಪೂರಣಕ್ಕಾಗಿ ₹10 ಸಾವಿರ ಶುಲ್ಕ ಪಾವತಿಸಿದ್ದೇನೆ’ ಎಂದರು.

ಕೌನ್ಸಿಲ್‌ ಸಭೆಯಲ್ಲಿ ಒತ್ತಾಯ: ‘ಪ್ಲೇಟ್ಲೆಟ್‌ ಮರುಪೂರಣಕ್ಕೆ ದುಬಾರಿ ಹಣ ವ್ಯಯಿಸಬೇಕಾಗಿದೆ. ಬಡವರು ಶುಲ್ಕ ಕಟ್ಟಲಾಗದೆ ಸಾಯುತ್ತಿದ್ದಾರೆ. ಪಾಲಿಕೆಯಿಂದ ಚಿಕಿತ್ಸಾ ವೆಚ್ಚ ಭರಿಸಬೇಕು’ ಎಂದು ಜುಲೈ 31ರಂದು ನಡೆದ ಕೌನ್ಸಿಲ್‌ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದ್ದರು.

ಇದಕ್ಕೆ ಸ್ಪಂದಿಸಿದ್ದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಖಾಸಗಿ ಆಸ್ಪತ್ರೆಯಲ್ಲಿ ಪ್ಲೇಟ್ಲೆಟ್‌ ಮರುಪೂರಣ ಮಾಡಿದ ಬಿಲ್‌ ನೀಡಿದರೆ, ಅದರ ಮೊತ್ತವನ್ನು ಪಾಲಿಕೆಯಿಂದ ಭರಿಸುತ್ತೇವೆ’ ಎಂದು ಭರವಸೆ ನೀಡಿದ್ದರು.

ಡೆಂಗಿ ಪ್ರಕರಣಗಳ ಸಂಖ್ಯೆ ಇಳಿಕೆ: ‘ನಗರದಲ್ಲಿ ನಿರಂತರವಾಗಿ ಮಳೆ ಬಿದ್ದಿದ್ದರಿಂದ ಡೆಂಗಿ ಪ್ರಕರಣಗಳು ಕಡಿಮೆ ಆಗಿವೆ. ಆಗಸ್ಟ್‌ನಲ್ಲಿ 2,019 ಪ್ರಕರಣಗಳು ದೃಢಪಟ್ಟಿದ್ದರೆ, ಸೆಪ್ಟೆಂಬರ್‌ನಲ್ಲಿ 1,400, ಅಕ್ಟೋಬರ್‌ನಲ್ಲಿ 993 ಪ್ರಕರಣಗಳು ಕಂಡುಬಂದಿದ್ದವು’ ಎಂದು ಡಾ.ಲೋಕೇಶ್‌
ತಿಳಿಸಿದರು.

‘ಜನವರಿಯಿಂದ ಅಕ್ಟೋಬರ್‌ ವರೆಗೆ ಪೂರ್ವ ವಲಯದಲ್ಲಿ ಅತಿಹೆಚ್ಚು 2,470, ದಕ್ಷಿಣ ವಲಯದಲ್ಲಿ 1,289 ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ದಾಸರಹಳ್ಳಿಯಲ್ಲಿ ಕಡಿಮೆ ಡೆಂಗಿ ಪ್ರಕರಣಗಳು (48) ದಾಖಲಾಗಿವೆ’ ಎಂದು ಅವರು ವಿವರಿಸಿದರು.

ಅರ್ಜಿ ಸಲ್ಲಿಕೆ ಹೇಗೆ?
‘ಡೆಂಗಿ ಪ್ರಕರಣಗಳಲ್ಲಿ ಪ್ಲೇಟ್ಲೆಟ್‌ಗಳ ಸಂಖ್ಯೆ 20 ಸಾವಿರಕ್ಕಿಂತ ಕಡಿಮೆ ಇದ್ದರೆ ಮತ್ತು ರಕ್ತಸ್ರಾವ ಕಂಡು ಬಂದರೆ, ಮರುಪೂರಣ ಮಾಡಬೇಕಾಗುತ್ತದೆ. ಬಡರೋಗಿಗಳು ಪ್ಲೇಟ್‌ಲೆಟ್‌ಗೆ ವೆಚ್ಚ ಮಾಡಿರುವ ಮೊತ್ತವನ್ನು ಪಡೆಯಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಆರೋಗ್ಯ ವೈದ್ಯಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಬೇಕು.

ವೆಚ್ಚದ ದಾಖಲೆಗಳನ್ನೂ ಸಲ್ಲಿಸಬೇಕು. ವಾರ್ಡ್‌ನ ಹಿರಿಯ ಪರಿವೀಕ್ಷಕರು ಮಹಜರು ನಡೆಸಿದ ಬಳಿಕ, ವೈದ್ಯಾಧಿಕಾರಿಯು ಈ ಬಗ್ಗೆ ದೃಢೀಕರಿಸುತ್ತಾರೆ. ಪಾಲಿಕೆಯ ವೈದ್ಯಕೀಯ ಮಂಡಳಿಯ ಅನುಮೋದನೆ ಪಡೆದು ಮರುಪಾವತಿ ಮಾಡಲಾಗುತ್ತದೆ’ ಎಂದು ಡಾ.ಲೋಕೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT