ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಲಪಂಥೀಯರ ವಿಜೃಂಭಣೆಯಿಂದ ಅಪಾಯ’

Last Updated 20 ನವೆಂಬರ್ 2017, 5:28 IST
ಅಕ್ಷರ ಗಾತ್ರ

ಮಂಗಳೂರು: ‘ಈಗ ಬಲಪಂಥೀ ಯರು ವಿಜೃಂಭಿಸುತ್ತಿದ್ದು, ಜಗತ್ತನ್ನು ತಮ್ಮ ಕಪಿಮುಷ್ಟಿಗೆ ತೆಗೆದು ಕೊಳ್ಳಲು ಹವಣಿಸುತ್ತಿದ್ದಾರೆ. ಇದರಿಂದ ದುಡಿಯುವ ವರ್ಗಗಳಿಗೆ ಅಪಾಯ ಎದುರಾಗಿದೆ’ ಎಂದು ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ವಸಂತ ಆಚಾರಿ ಹೇಳಿದರು.

ಜಪ್ಪಿನಮೊಗರುವಿನಲ್ಲಿ ಭಾನುವಾರ ನಡೆದ ಸಿಪಿಎಂ ಮಂಗಳೂರು ನಗರ ದಕ್ಷಿಣ ಘಟಕದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಬಲಪಂಥೀಯ ಶಕ್ತಿಗಳ ನೇತೃತ್ವವನ್ನು ಅಮೆರಿಕದ ಸಾಮ್ರಾಜ್ಯಷಾಹಿಗಳು ವಹಿಸಿದ್ದು, ಜಗತ್ತನ್ನು ಹಿಡಿತಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ. ಈ ಸಂಚಿನಲ್ಲಿ ಭಾರತವನ್ನು ಕಿರಿಯ ಪಾಲುದಾರನಂತೆ ಮಾಡಿಕೊಂಡು ನಮ್ಮ ರಾಷ್ಟ್ರವನ್ನೂ ಆಕ್ರಮಿಸುವ ಹುನ್ನಾರ ನಡೆಯುತ್ತಿದೆ’ ಎಂದರು.

‘ಅಮೆರಿಕಕ್ಕೆ ಭಾರತದ ಅಭಿವೃದ್ಧಿ ಬೇಕಿಲ್ಲ. ಆ ದೇಶದ ಕುತಂತ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಲಿಯಾಗಿದೆ. ಪರಿಣಾಮವಾಗಿ ದೇಶದ ಸಾರ್ವಜನಿಕ ಉದ್ದಿಮೆಗಳು ನಾಶವಾಗುತ್ತಿವೆ. ಸೇವಾ ವಲಯವೂ ಅಪಾಯದ ಅಂಚಿನತ್ತ ಸಾಗುತ್ತಿದೆ’ ಎಂದು ಹೇಳಿದರು.

ಪ್ರಧಾನಿ ವಿಫಲ: ‘ನರೇಂದ್ರ ಮೋದಿಯವರು ಪ್ರಧಾನಿಯಾಗಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಕಪ್ಪು ಹಣ ಪತ್ತೆ, ಭಯೋತ್ಪಾದನೆ ನಿಗ್ರಹ, ಉದ್ಯೋಗ ಸೃಷ್ಟಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಭರವಸೆ ಈಡೇರಿಸಲು ವಿಫಲವಾಗಿದ್ದಾರೆ. ಉದ್ಯೋಗ ಸೃಷ್ಟಿಯ ಬದಲಿಗೆ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಎಂ ಮಂಗಳೂರು ನಗರ ದಕ್ಷಿಣ ಘಟಕದ ಕಾರ್ಯದರ್ಶಿ ಸುನೀಲ್‌ ಕುಮಾರ್ ಬಜಾಲ್‌, ‘ಮಂಗಳೂರು ನಗರ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿದೆ. ಆದರೆ, ಈ ಯೋಜನೆಯಡಿ ಸಾಮಾನ್ಯ ಜನರ ಜೀವನಮಟ್ಟ ಸುಧಾರಣೆಗೆ ಯಾವ ಕಾರ್ಯಕ್ರಮವನ್ನೂ ರೂಪಿಸಿಲ್ಲ. ಸಾಮಾನ್ಯ ಜನರ ಜೀವನ ಸುಧಾರಣೆಗೆ ಪೂರಕವಾಗಿ ಯೋಜನೆ ರೂಪಿಸುವಂತೆ ಆಗ್ರಹಿಸಿ ನಾವು ಹೋರಾಟ ಮುಂದು ವರಿಸಬೇಕಿದೆ’ ಎಂದರು.

ಪಕ್ಷದ ಮುಖಂಡರಾದ ವಾಸುದೇವ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ.ಬಾಲಕೃಷ್ಣ ಶೆಟ್ಟಿ, ಮುಖಂಡರಾದ ಜಯಂತಿ ಬಿ.ಶೆಟ್ಟಿ, ಯೋಗೀಶ್ ಜೆಪ್ಪಿನಮೊಗರು, ಸಂತೋಷ್‌ ಶಕ್ತಿನಗರ, ಸಂತೋಷ್‌ ಬಜಾಲ್, ಪ್ರೇಮನಾಥ್ ಜಲ್ಲಿಗುಡ್ಡೆ, ದಿನೇಶ್‌ ಶೆಟ್ಟಿ ವೇದಿಕೆಯಲ್ಲಿದ್ದರು.

ಕಾರ್ಯದರ್ಶಿಯಾಗಿ ಪುನರಾಯ್ಕೆ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಂಗಳೂರು ನಗರ ದಕ್ಷಿಣ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸುನೀಲ್‌ಕುಮಾರ್ ಬಜಾಲ್‌ ನಾಲ್ಕನೇ ಬಾರಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಸಿಪಿಎಂ ಕಾಸರಗೋಡು ಜಿಲ್ಲಾ ಘಟಕದ ಮುಖಂಡ ಶಂಕರ್‌ ರೈ ಮಾಸ್ಟರ್‌ ಪ್ರಧಾನ ಭಾಷಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT