ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಪ್ರಧಾನಿಯಾದರೆ ಅಚ್ಚರಿಪಡಬೇಕಿಲ್ಲ– ಧರ್ಮಸೇನ

Last Updated 20 ನವೆಂಬರ್ 2017, 5:49 IST
ಅಕ್ಷರ ಗಾತ್ರ

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದರೆ ರಾಹುಲ್‌ ಗಾಂಧಿ ಪ್ರಧಾನಿ ಹುದ್ದೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟರೆ ಅಚ್ಚರಿಪಡಬೇಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ತಿಳಿಸಿದರು. ಇಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಇಂದಿರಾ ಗಾಂಧಿ 100ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಿರೋಧ ಪಕ್ಷಗಳು ಸಿದ್ದರಾಮಯ್ಯ ಪ್ರಧಾನಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ವ್ಯಂಗ್ಯ ಮಾಡುತ್ತಿವೆ. ಆದರೆ, ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ ಎಂದು ಯಾರಾದರೂ ಕನಸು ಕಂಡಿದ್ದರಾ? ಪ್ರಧಾನಿ ಹುದ್ದೆಗೆ ಏರುವ ಎಲ್ಲ ಸಾಮರ್ಥ್ಯ ಸಿದ್ದರಾಮಯ್ಯ ಅವರಲ್ಲಿದೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಕುರಿತು ಬಿಜೆಪಿಯಲ್ಲಿ ಭಯ: ‘ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಶಾಸಕರು ಊಟದ ವೇಳೆ ಮಾತನಾಡುತ್ತಾ, ಗುಜರಾತ್ ಸೇರಿದಂತೆ ಇತರೆ ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು ಸುಲಭವಾಗಲಿದೆ. ಆದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಇರುವುದರಿಂದ ಗೆಲುವು ಕಷ್ಟ. ಒಂದು ವೇಳೆ ಸಿದ್ದರಾಮಯ್ಯ ಇಲ್ಲದಿದ್ದರೆ ಗೆಲುವು ಸುಲಲಿತವಾಗುತ್ತಿತ್ತು ಎಂದು ಹೇಳಿದರು. ಇದು ಸಿದ್ದರಾಮಯ್ಯ ಅವರನ್ನು ಕುರಿತು ಬಿಜೆಪಿಗಿರುವ ಭೀತಿಯನ್ನು ತೋರ್ಪಡಿಸುತ್ತದೆ’ ಎಂದು ಧರ್ಮಸೇನ ತಿಳಿಸಿದರು.

‘ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುತ್ತಾ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕನಿಷ್ಠ 100 ಸ್ಥಾನ ಬರಬಹುದು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಕನಿಷ್ಠ 120 ಸ್ಥಾನ ಬರಲಿದೆ ಎಂದು ಹೇಳಿದರು. ಇದು ಸಿದ್ದರಾಮಯ್ಯ ಅವರಲ್ಲಿರುವ ವಿಶ್ವಾಸವನ್ನು ತೋರಿಸುತ್ತದೆ’ ಎಂದರು.

ಅನಂತಕುಮಾರ್ ಹೆಗಡೆ ಅಯೋಗ್ಯ– ಧರ್ಮಸೇನ
ಸಂಸದ ಅನಂತಕುಮಾರ್ ಹೆಗಡೆ ಅಯೋಗ್ಯ. ಮುಖ್ಯಮಂತ್ರಿ ಕುರಿತು ಅವರು ಹೇಳಿರುವ ಮಾತುಗಳು ಮತದಾರರಿಗೆ ಮಾಡಿದ ಅವಮಾನ ಎಂದು ಧರ್ಮಸೇನ ಕಿಡಿಕಾರಿದರು.

‘ಅಟಲ್‌ ಬಿಹಾರಿ ವಾಜಪೇಯಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂದು ಕಾಂಗ್ರೆಸ್‌ ಸಹ ಸ್ವಾಗತಿಸುತ್ತದೆ. ಇದು ನಮ್ಮ ಪಕ್ಷದ ಸಂಸ್ಕೃತಿ. ಆದರೆ, ಸಿದ್ದರಾಮಯ್ಯ ಮಾಡಿರುವ ಒಳ್ಳೆಯ ಕಾರ್ಯಕ್ರಮಗಳನ್ನು ಬಿಜೆಪಿ ಸ್ವಾಗತಿಸುತ್ತಿಲ್ಲ. ಬದಲಿಗೆ, ಕೀಳು ಮಾತಿನಲ್ಲಿ ನಿಂದಿಸುತ್ತಿದೆ. ಇದು ಅವರ ಪಕ್ಷದ ಸಂಸ್ಕೃತಿ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT