ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿದ ಎಣ್ಣೆ ಬಳಸಿ ಬಯೊ ಡೀಸೆಲ್!

Last Updated 20 ನವೆಂಬರ್ 2017, 6:12 IST
ಅಕ್ಷರ ಗಾತ್ರ

ಬಾಗಲಕೋಟೆ: ಹೋಟೆಲ್‌, ಕಲ್ಯಾಣ ಮಂಟಪಗಳಲ್ಲಿ ಬಳಕೆ ಮಾಡಿದ ಅಡುಗೆ ಎಣ್ಣೆ ತ್ಯಾಜ್ಯವನ್ನು ಬಯೊ ಡೀಸೆಲ್ ಆಗಿ ಪರಿವರ್ತಿಸಿ ಬಳಕೆ ಮಾಡುವ ಇಲ್ಲಿನ ನಗರಸಭೆ ಆಡಳಿತದ ಪ್ರಯತ್ನಕ್ಕೆ ರಾಜ್ಯ ಜೈವಿಕ ಇಂಧನ ಮಂಡಳಿ ಮನ್ನಣೆ ನೀಡಿದೆ.

ಈ ಪ್ರಯೋಗವನ್ನು ರಾಜ್ಯಾದ್ಯಂತ ಅಳವಡಿಕೆ ಮಾಡಲು ಆರೋಗ್ಯ ಸಚಿವ ರಮೇಶ್‌ಕುಮಾರ ಅವರಿಗೆ ಮಂಡಳಿಯ ಅಧ್ಯಕ್ಷ ಎಸ್‌.ಆರ್.ಪಾಟೀಲ (ಬ್ಯಾಡಗಿ) ಪತ್ರ ಬರೆದಿದ್ದಾರೆ.

ಏನಿದು ಬಯೊ ಡೀಸೆಲ್‌: ಇಲ್ಲಿನ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಬಯೊ ಟೆಕ್ನಾಲಜಿ ವಿಭಾಗದ ಸಹಯೋಗದಲ್ಲಿ ನಗರಸಭೆ ಪರಿಸರ ವಿಭಾಗ ಈ ಕಾರ್ಯಕ್ಕೆ ಕೈ ಹಾಕಿ ಯಶಸ್ಸು ಕಂಡಿದೆ.

ನಗರದ ಹೋಟೆಲ್ ಹಾಗೂ ಕಲ್ಯಾಣಮಂಟಪಗಳಲ್ಲಿ ಖಾದ್ಯಗಳನ್ನು ಕರಿದ ನಂತರ ಉಳಿಯುವ ಎಣ್ಣೆಯ ತ್ಯಾಜ್ಯವನ್ನು ಖರೀದಿ ಮಾಡಿ ಅದನ್ನು ಜೈವಿಕ ಇಂಧನವಾಗಿ ಪರಿವರ್ತಿಸಿ ಪುನರ್ಬಳಕೆ ಮಾಡಲಾಗುತ್ತಿದೆ.

‘ಕರಿದ ಎಣ್ಣೆಯನ್ನು ಪ್ರತಿ ಲೀಟರ್‌ಗೆ ₹ 10ರಂತೆ ಹೋಟೆಲ್‌ಗಳಿಂದ ಖರೀದಿಸುತ್ತಿದ್ದೇವೆ. ದಿನಕ್ಕೆ 50ರಿಂದ 100 ಲೀಟರ್‌ವರೆಗೆ ಸಂಗ್ರಹವಾಗುತ್ತಿದೆ. ಅದನ್ನು ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಬಯೊ ಟೆಕ್ನಾಲಜಿ ವಿಭಾಗದ ಘಟಕದಲ್ಲಿ ಬಯೊ ಡೀಸೆಲ್ ಆಗಿ ರೂಪಿಸಿ ನಂತರ ಪ್ರತಿ ಲೀಟರ್‌ಗೆ ₹ 50ರಂತೆ ಮಾರಾಟ ಮಾಡುತ್ತಿದ್ದೇವೆ’ ಎಂದು ನಗರಸಭೆ ಪರಿಸರ ಅಧಿಕಾರಿ ಹನುಮಂತ ಕಲಾದಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೋಟೆಲ್‌ಗಳಲ್ಲಿ ಕರಿದ ಎಣ್ಣೆಯನ್ನು ಮತ್ತೆ ತಿನಿಸು ತಯಾರಿಸಲು ಬಳಕೆ ಮಾಡುವುದು ಗ್ರಾಹಕರ ಆರೋಗ್ಯಕ್ಕೆ ಅಪಾಯಕಾರಿ. ಹಾಗಾಗಿ ಅದನ್ನು ಚೆಲ್ಲುವ ಬದಲು ನಮಗೆ ಮಾರಾಟ ಮಾಡಿದಲ್ಲಿ ಅದನ್ನು ಡೀಸೆಲ್‌ ಆಗಿ ಪರಿವರ್ತಿಸಲಾಗುವುದು’ ಎಂದು ಕಲಾದಗಿ ಹೇಳುತ್ತಾರೆ.

‘ಇಲ್ಲಿಯವರೆಗೂ ಹೊಂಗೆ, ಬೇವು, ಹಿಪ್ಪೆ ಬಳಸಿ ಬಯೊ ಡೀಸೆಲ್‌ ತಯಾರಿಸಲಾಗುತ್ತಿತ್ತು. ಈಗ ಕರಿದ ಅಡುಗೆ ಎಣ್ಣೆಯ ಜೊತೆಗೆ ವಾಹನಗಳಲ್ಲಿ ಬಳಕೆ ಮಾಡಿದ ವೇಸ್ಟ್ ಆಯಿಲ್ ಕೂಡ ಡೀಸೆಲ್‌ ಆಗಿ ರೂಪಾಂತರವಾಗುತ್ತದೆ. ಆ ನಿಟ್ಟಿನಲ್ಲಿ ಸರ್ವಿಸ್ ಸೆಂಟರ್‌ಗಳಿಂದ ವೇಸ್ಟ್ ಆಯಿಲ್ ಸಂಗ್ರಹಿಸುವ ಕಾರ್ಯಕ್ಕೂ ಮುಂದಾಗಿದ್ದೇವೆ. ಈ ಪ್ರಾಯೋಗಿಕ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದೇವೆ’ ಎಂದು ಕಲಾದಗಿ ಮಾಹಿತಿ ನೀಡುತ್ತಾರೆ.

ಸಣ್ಣ ಹೋಟೆಲ್‌ಗಳಲ್ಲಿ ವಾರಕ್ಕೆ ಎರಡು ದಿನ, ದೊಡ್ಡ ಹೋಟೆಲ್‌ಗಳಲ್ಲಿ ಪ್ರತಿ ನಿತ್ಯ ಕರಿದ ಎಣ್ಣೆಯ ತ್ಯಾಜ್ಯವನ್ನು ಸಂಗ್ರಹಿಸಲಾಗುವುದು. ಹೋಟೆಲ್‌ ಮಾಲೀಕರಿಗೆ ಸ್ಥಳದಲ್ಲಿಯೇ ಹಣ ಪಾವತಿಸಲಾಗುವುದು ಎಂದರು.

‘ಬಾಗಲಕೋಟೆ ಮಾದರಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವಂತೆ’ ಆರೋಗ್ಯ ಸಚಿವರಿಗೆ ಪತ್ರದ ಮೂಲಕ ಕೋರಿಕೆ ಸಲ್ಲಿಸಿರುವ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ‘ಹೋಟೆಲ್‌ಗಳಲ್ಲಿ ಕರಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಕೆ ಮಾಡುವುದಕ್ಕೆ ನಿಷೇಧ ವಿಧಿಸಿ ಅದೇಶ ಹೊರಡಿಸಲು’ ಮನವಿ ಮಾಡಿದೆ.

* * 

ಅಡುಗೆ ಎಣ್ಣೆಯನ್ನು ಒಮ್ಮೆ ಇಲ್ಲವೇ ಎರಡು ಬಾರಿ ಮಾತ್ರ ಕರಿಯಲು ಬಳಕೆ ಮಾಡಬಹುದು. ಮತ್ತೆ ಮತ್ತೆ ಉಪಯೋಗಿಸಿದರೆ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಲಿದೆ.
ಹನುಮಂತ ಕಲಾದಗಿ, ನಗರಸಭೆ ಪರಿಸರ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT