ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಮೈ ಕೊರೆಯುವ ಚಳಿ

Last Updated 20 ನವೆಂಬರ್ 2017, 11:04 IST
ಅಕ್ಷರ ಗಾತ್ರ

ಬೆಳಗಾವಿ: ಕಾಲ ಚಕ್ರ ತಿರುಗಿದೆ. ಮಳೆಗಾಲ ಮುಗಿದು, ಚಳಿಗಾಲ ಬಂದಿದೆ. ಅಕ್ಟೋಬರ್‌ನಲ್ಲಿ ಚಳಿಗಾಲ ಪ್ರವೇಶಿಸಿದ್ದರೂ ಚಳಿಯ ಅನುಭವ ಜನರಿಗೆ ಈಗ ಆಗುತ್ತಿದೆ. ಕಳೆದ 4–5 ದಿನಗಳಲ್ಲಿ ತಾಪಮಾನವು ಕನಿಷ್ಠ 10 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಚಳಿ ಯಿಂದ ರಕ್ಷಣೆ ಪಡೆಯಲು ಜನರು ಹರಸಾಹಸ ಪಡುತ್ತಿದ್ದಾರೆ.

ಮೈ ಕೊರೆಯುವ ಚಳಿಗೆ ಸಿಲುಕಿರುವ ಜನರು ದೇಹವನ್ನು ಬೆಚ್ಚಗಿಟ್ಟುಕೊಳ್ಳಲು ವಿವಿಧ ಮಾರ್ಗ ಗಳನ್ನು ಅನುಸರಿಸುತ್ತಿದ್ದಾರೆ. ಬೆಚ್ಚನೆಯ ಉಡುಪು ಖರೀದಿಸಲು ಮುಂದಾಗಿ ದ್ದಾರೆ. ಸ್ವೇಟರ್‌, ಜರ್ಕಿನ್‌, ಸಾಕ್ಸ್‌, ಕೈಗವಸು ಧರಿಸುತ್ತಿದ್ದಾರೆ.

ಪೇಟೆಯಲ್ಲೀಗ ಇವುಗಳ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಬ್ರಾಂಡೆಡ್‌ ಕಂಪೆನಿಗಳ ಮಳಿಗೆಗಳಲ್ಲಿ ಹಾಗೂ ಬೀದಿ ಬದಿ ಮಾರಾಟ ಮಾಡುವವರ ಬಳಿಯೂ ವ್ಯಾಪಾರ ಜೋರಾಗಿದೆ. ಅಸ್ಸಾಂ, ಟಿಬೆಟ್‌ನಿಂದ ಬಂದಿರುವವರು ಮಾರಾಟ ಮಾಡುವ ಸ್ವೇಟರ್‌, ಜರ್ಕಿನ್‌ಗಳಿಗೆ ಹೆಚ್ಚಿನ ಡಿಮ್ಯಾಂಡ್‌ ಇದೆ. ಹುತ್ಮಾತ ಚೌಕ ಬಳಿ ಇರುವ ಇವರ ಅಂಗಡಿಗಳಿಗೆ ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ₹ 800 ದಿಂದ ₹ 5,000ವರೆಗೆ ವಿವಿಧ ಶೈಲಿಯ ಉಡುಪುಗಳು ಇಲ್ಲಿವೆ.

ಚಳಿಯಿಂದ ರಕ್ಷಣೆ ಪಡೆಯಲು ಜನರು ಕುಡಿಯಲು, ಸ್ನಾನ ಮಾಡಲು ಸೇರಿದಂತೆ ವಿವಿಧ ಬಳಕೆಗೆ ಬಿಸಿ ನೀರು ಬಳಸುತ್ತಿದ್ದಾರೆ. ಮನೆಯಲ್ಲಿ ಬೆಂಕಿ ಕೆಂಡ ಕಾಯಿಸುತ್ತಿದ್ದಾರೆ. ಮನೆಯ ಬಾಗಿಲು, ಕಿಟಕಿ ಹಾಕಿಕೊಂಡು ಬೆಚ್ಚಗಿರಲು ಪ್ರಯತ್ನಿಸುತ್ತಿದ್ದಾರೆ. ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರು ವವರು ಹೆಚ್ಚಿನ ಕಷ್ಟವನ್ನು ಅನುಭವಿಸುತ್ತಿದ್ದಾರೆ. ದೇಹವನ್ನು ಬೆಚ್ಚಗಿಟ್ಟಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.

ರಾತ್ರಿ ಹಾಗೂ ಬೆಳಗಿನ ಜಾವ ಬೀದಿಗಳಲ್ಲಿ ಜನರು ಕಸ– ಕಡ್ಡಿಗಳನ್ನು ಗುಡ್ಡಿ ಹಾಕಿ ಬೆಂಕಿ ಹಚ್ಚಿ ಮೈ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಬೀದಿ ಬದಿಯ ಚಹಾ ಅಂಗಡಿಗಳಲ್ಲಿ ಚಹಾ ಹೀರುವ ಮೂಲಕ ದೇಹದ ತಾಪಮಾನ ಹೆಚ್ಚಿಸಿಕೊಳ್ಳುತ್ತಿದ್ದಾರೆ. ರಾತ್ರಿಯಾದರೆ, ಮದ್ಯದ ಅಂಗಡಿಗಳಲ್ಲಿ ಜನದಟ್ಟಣೆ ಕಾಣುವಂತಾಗಿದೆ.

ರಾತ್ರಿ ಸಂಚಾರ ಇಳಿಮುಖ: ರಾತ್ರಿ ವೇಳೆ ಹೆಚ್ಚು ಚಳಿ ಇರುವುದರಿಂದ ಜನರು ರಾತ್ರಿ ಸಂಚಾರಿಸುವುದು ಕಡಿಮೆ ಮಾಡಿದ್ದಾರೆ. ಹೀಗಾಗಿ ಖಡೇ ಬಜಾರ್‌, ಕಿರ್ಲೋಸ್ಕರ್‌ ರೋಡ್‌, ಮಾರ್ಕೆಟ್‌ನಲ್ಲಿ ಜನಸಂದಣಿ ಕಡಿಮೆ ಯಾಗಿದೆ. ರಾತ್ರಿ 9 ಗಂಟೆಯ ಸಿನಿಮಾ ನೋಡುವವರ ಸಂಖ್ಯೆಯೂ ಕಡಿಮೆ ಯಾಗಿದೆ.

ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವವರ ಸಂಖ್ಯೆಯೂ ಕಡಿಮೆ ಯಾಗಿದೆ. ಅಲ್ಲೊಬ್ಬರು, ಇಲ್ಲೊ ಬ್ಬರು  ಹೋಗುವವರು ಕೂಡ ಪೂರ್ಣ ಸಿದ್ಧತೆ ಜೊತೆ ಹೋಗುತ್ತಿದ್ದಾರೆ. ಟೊಪ್ಪಿಗೆ, ಕುತ್ತಿಗೆಗೆ ಸ್ಕಾರ್ಪ್‌, ಸಾಕ್ಸ್‌,  ಬೂಟ್‌, ಕೈಗವುಸು ಧರಿಸಿ ರಸ್ತೆಗೆ ಹೋಗುತ್ತಿದ್ದಾರೆ ಎಂದು ಸದಾಶಿವ ನಗರದ ನಿವಾಸಿ ಸುನೀಲ ಪಾಟೀಲ ಹೇಳಿದರು.

ಆಟದ ಮೈದಾನದಲ್ಲೂ ಚಳಿ ಪ್ರಭಾವ ಕಾಣುವಂತಾಗಿದೆ. ಬೆಳಗಾ ದರೆ ಅಭ್ಯಾಸದಲ್ಲಿ ತೊಡಗಿರುತ್ತಿದ್ದ ಕ್ರೀಡಾಪ್ರೇಮಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಅಲ್ಲೊಂದು ಇಲ್ಲೊಂದು ಯುವಕರ ತಂಡಗಳು ಬ್ಯಾಟ್‌, ಸ್ಟಂಪ್‌ ಹಿಡಿದು ಮೈದಾನಕ್ಕೆ ಇಳಿದಿರುತ್ತಾರೆ. ಸ್ಕೂಟರ್‌– ಕಾರ್‌ ಚಲಿಸಲು ಕಲಿಯುವವರು ಕಾಣಿಸಿ ಕೊಳ್ಳುತ್ತಾರೆ.

ನಗರದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬಂದಿರುವ ಜನಪ್ರತಿನಿಧಿಗಳು, ಅಧಿಕಾರಿಗಳಿಗೂ ಚಳಿಯ ಅನುಭವ ತಟ್ಟಿದೆ. ‘ಬೆಂಗಳೂರಿನಲ್ಲಿ ಇಷ್ಟೊಂದು ಚಳಿ ಇಲ್ಲಾ ಕಣ್ರೀ.. ಮಧ್ಯಾಹ್ನ 11 ಗಂಟೆಯಾದರೂ ಮೈ ನಡು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT