ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿವಸೇನೆ ಜತೆ ಶ್ರೀರಾಮಸೇನೆ ಸಖ್ಯ’

Last Updated 20 ನವೆಂಬರ್ 2017, 7:21 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಹಿಂದೂ ವಿಚಾರಧಾರೆಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಶ್ರೀರಾಮಸೇನೆಯು ರಾಜಕೀಯ ಪ್ರವೇಶಿಸಲು ನಿರ್ಧರಿಸಿದ್ದು, ಮಹಾರಾಷ್ಟ್ರದ ಶಿವಸೇನೆಯೊಂದಿಗೆ ಕೈಜೋಡಿಸಿದೆ’ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ ಹೇಳಿದರು.

ಶ್ರೀರಾಮ ಸೇನೆಯ ನೇತೃತ್ವದಲ್ಲಿ ಜರುಗಿದ ದತ್ತಮಾಲಾ ಅಭಿಯಾನದ ಅಂಗವಾಗಿ ಭಾನುವಾರ ನಗರದ ಬೋಳರಾಮೇಶ್ವರ ದೇಗುಲದ ಆವರಣದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ‘ರಾಜಕೀಯ ಶಕ್ತಿ ಪಡೆದು ದ್ರೋಹ ಮಾಡಿದವರಿಗೆ ಉತ್ತರ ನೀಡಬೇಕಿದೆ. ಈ ನಿಟ್ಟಿನಲ್ಲಿ ರಾಜಕೀಯ ಪ್ರವೇಶ ಅನಿವಾರ್ಯವಾಗಿದೆ. ದತ್ತಪೀಠದ ಸಮಸ್ಯೆಯನ್ನು ಪರಿಹರಿಸಲು ಅನುಕೂಲವಾಗಲಿದೆ’ ಎಂದರು.

‘ದತ್ತ ಪೀಠ ಬೇರೆ, ಬಾಬಾಬುಡನ್‌ ದರ್ಗಾ ಬೇರೆ ಎಂಬುದಕ್ಕೆ, ಇನಾಂ ದತ್ತಾತ್ರೇಯ ಪೀಠ ಎಂದು ಹಳ್ಳಿ ಹೆಸರು ಇರುವುದಕ್ಕೆ ದಾಖಲೆಗಳು ಇವೆ. ಹೀಗಿದ್ದರೂ, ದತ್ತಪೀಠ ಹಿಂದುಗಳದ್ದು ಎಂದು ಕೋರ್ಟ್‌, ಬೀದಿಗಳಲ್ಲಿ ಹೋರಾಟ ಮಾಡಬೇಕಾಗಿದೆ. ದತ್ತಪೀಠದ ಲಾಭ ಪಡೆದು ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿದಿತ್ತು. ಆದರೆ, ದತ್ತಪೀಠ ಸಮಸ್ಯೆಯನ್ನು ಪರಿಹರಿಸಲಿಲ್ಲ. ಕಾಂಗ್ರೆಸ್‌ನವರೂ ಸಮಸ್ಯೆಯನ್ನು ಪರಿಹರಿಸಿಲ್ಲ’ ಎಂದು ದೂರಿದರು.

‘ದೇಶದಲ್ಲಿ ನಮ್ಮದನ್ನು ಪಡೆಯಲು ಹೋರಾಟ ಮಾಡಬೇಕಾದ, ಜೈಲು ಶಿಕ್ಷೆ ಅನುಭವಿಸಬೇಕಾದ ಸ್ಥಿತಿ ಬಂದೊದಗಿದೆ. ದೇಶದ್ರೋಹಿಗಳಿಗೆ ಸಂರಕ್ಷಣೆ, ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದು ದೂಷಿಸಿದರು.

‘ಪಿಎಫ್‌ಐ, ಎಫ್‌ಡಿಪಿಐ, ಕೆಎಫ್‌ಡಿ, ಎಂಐಎಂ ಸಂಘಟನೆಗಳು ದೇಶ ದ್ರೋಹಿ ಚಟುವಟಿಕೆಗಳಲ್ಲಿ ತೊಡಗಿವೆ. ಆದರೂ, ಇಂಥ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ. ದುಷ್ಟಶಕ್ತಿಗಳನ್ನು ಸಂಘಟಿತ ಹೋರಾಟದಿಂದ ಹತ್ತಿಕ್ಕಲು ಸಾಧ್ಯ ಇದೆ’ ಎಂದು ಹೇಳಿದರು.

ಶ್ರೀರಾಮಸೇನೆ ಗೌರವ ಅಧ್ಯಕ್ಷ ಜೇವರ್ಗಿಯ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ದತ್ತಪೀಠವನ್ನು ಹಿಂದುಗಳಿಗೆ ವಹಿಸಬೇಕು ಎಂದು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸರ್ಕಾರ ಕ್ರಮ ವಹಿಸಿಲ್ಲ. ಮುಸ್ಲಿಂ ತುಷ್ಟೀಕರಣದ ನೀತಿ ಅನುಸರಿಸುತ್ತಿದೆ’ ಎಂದು ಆಪಾದಿಸಿದರು.

‘ಹಿಂದು ದೇಗುಲ ಬಳಿ ಮಸೀದಿ, ದರ್ಗಾ ಇರುವುದಿಲ್ಲ. ಇಲ್ಲಿ ಹಿಂದು ದೇಗುಲ ಪಕ್ಕದಲ್ಲಿ ದರ್ಗಾ ಇದೆ ಎಂದರೆ ಅದು ಆಕ್ರಮಣಕಾರಿಯ ಪ್ರತಿಫಲ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದರು.

‘ದತ್ತಪೀಠ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಆದರೆ, ರಾಜ್ಯ ಸರ್ಕಾರ ಸಮಸ್ಯೆ ಇತ್ಯರ್ಥ ಪಡಿಸಲು ಗಮನಹರಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

‘ದತ್ತಪೀಠ ಸಮಸ್ಯೆ ಪರಿಹರಿಸಲು ಬಿಜೆಪಿ ಗಮನಹರಿಸಲಿಲ್ಲ. ಕಾಂಗ್ರೆಸ್‌ ಸರ್ಕಾರ ದತ್ತಪೀಠಕ್ಕೆ ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಇಲ್ಲಿನ ಶಾಸಕರು ದೂಷಿಸಿರುವುದರಲ್ಲಿ ಅರ್ಥವಿಲ್ಲ’ ಎಂದು ಲೇವಡಿ ಮಾಡಿದರು.

ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಗಂಗಾಧರ್ ಕುಲಕರ್ಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀರಾಮ ಸೇನೆ ದಕ್ಷಿಣ ಪ್ರಾಂತ ರಾಜ್ಯಾಧ್ಯಕ್ಷ ಕೆ.ವಿ.ಮಹೇಶ್‌ಕುಮಾರ್‌ ಕಟ್ಟಿನಮನೆ, ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ವಕ್ತಾರ ಹರೀಶ್, ವಕೀಲ ಅಮೃತೇಶ್ ಹಿರೇಮಠ ಇದ್ದರು.

ದತ್ತಭಕ್ತರ ಕಲರವ 
ನಗರದಲ್ಲಿ ಶೋಭಾಯಾತ್ರೆ ಮಗಿಸಿದ ಗಿರಿಗೆ ತೆರಳಿದ ಸಹಸ್ರಾರು ದತ್ತಮಾಲಾಧಾರಿಗಳು ಸಾಲಿನಲ್ಲಿ ತೆರಳಿ ಗುರುದತ್ತಾತ್ರೇಯರ ಪಾದುಕೆ ದರ್ಶನ ಮಾಡಿದರು. ಗದಗ, ಧಾರವಾಡ, ಉಡುಪಿ, ಬೆಳಗಾವಿ, ಶಿವಮೊಗ್ಗ, ಕಲಬುರ್ಗಿ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಬಂದಿದ್ದರು. ವಿವಿಧೆಡೆಗಳಿಂದ ಬಂದಿದ್ದ ನಾಗಸಾಧುಗಳು ದತ್ತಪಾದುಕೆಗೆ ನಮನ ಸಲ್ಲಿಸಿ ಭಜನೆ, ಮಂತ್ರ ಪಠಣ ಮಾಡಿದರು.

ದತ್ತಪೀಠದ ಸಮೀಪದ ಸಭಾಂಗಣದಲ್ಲಿ ದತ್ತ ಹೋಮ, ಗಣ ಹೋಮ, ಪೂರ್ಣಾಹುತಿ, ಹವನ ಕೈಂಕರ್ಯಗಳು ನೆರವೇರಿದವು. ಉದ್ಯಮಿ ದಿವಾಕರ ರೈ ಮತ್ತು ಸವಿತಾ ರೈ ದಂಪತಿ ಪೂರ್ಣಾಹುತಿ ಕೈಂಕರ್ಯ ನೆರವೇರಿಸಿದರು. ಹೋಮ, ಹವನದ ನಂತರ ಧಾರ್ಮಿಕ ಸಭೆ ನಡೆಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಕಟ್ಟೆಚ್ಚರ; ಡ್ರೋನ್ ಬಳಕೆ 
ನಗರದಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ‘ಡ್ರೋಣ್’ ಕ್ಯಾಮೆರಾದಲ್ಲಿ ಶೋಭಾಯಾತ್ರೆ ಚಲನವಲನಗಳನ್ನು ಸೆರೆ ಹಿಡಿಯಲಾಯಿತು. ‘ಡ್ರೋಣ್’ ಹಾರಾಟವನ್ನು ಸಾರ್ವಜನಿಕರು ಕುತೂಹಲದಿಂದ ದಿಟ್ಟಿಸಿದರು. ಅಹಿತಕರ ಘಟನೆಗಳಿಗೆ ಎಡೆಯಾಗದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಎಲ್ಲ ವೃತ್ತಗಳು ಮತ್ತು ದತ್ತ ಪೀಠದ ಮಾರ್ಗದುದ್ದಕ್ಕೂ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು.

ಶೋಭಾಯಾತ್ರೆಯ ಉದ್ದಕ್ಕೂ ಯುವಪಡೆ ಕುಣಿದು ಕಪ್ಪಳಿಸಿ ಸಂಭ್ರಮ ವ್ಯಕ್ತಪಡಿಸಿದರು. ವಿಶ್ವ ಹಿಂದು ಪರಿಷತ್‌ ಮತ್ತು ಬಜರಂಗದಳದ ವತಿಯಿಂದ ಹನುಮಂತಪ್ಪ ವೃತ್ತದಲ್ಲಿ ಮಾಲಾಧಾರಿಗಳಿಗೆ ಪಾನಕ ವ್ಯವಸ್ಥೆ ಮಾಡಲಾಗಿತ್ತು. ದುರ್ಗಾಸೇನೆ ರಾಜ್ಯಾಧ್ಯಕ್ಷೆ ಕಮಲಕ್ಕ ಜೇಡರ್‌, ಜಿಲ್ಲಾಧ್ಯಕ್ಷೆ ಶಾರದಮ್ಮ, ಶ್ರೀರಾಮಸೇನೆಯ ಶಿವಕುಮಾರ ರೆಡ್ಡಿ, ವಿನಯಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT