ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಕರ ಸಮಸ್ಯೆ ಬಗೆಹರಿಸದ ಸಿದ್ದರಾಮಯ್ಯ ಸರ್ಕಾರ’

Last Updated 20 ನವೆಂಬರ್ 2017, 7:28 IST
ಅಕ್ಷರ ಗಾತ್ರ

ಹಿರಿಯೂರು: ಶಿಕ್ಷಣ ಕ್ಷೇತ್ರ ಸಮಸ್ಯೆಗಳ ಆಗರವಾಗಿದೆ. ಸ್ಥಗಿತಗೊಂಡಿರುವ ಕಾಲ್ಪನಿಕ ವೇತನದ ಆದೇಶ ಶಿಕ್ಷಕರು ಹಾಗೂ ಉಪನ್ಯಾಸಕರ ಬಹುಮುಖ್ಯ ಬೇಡಿಕೆಯಾಗಿದ್ದು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಬಗೆಹರಿಯುವ ವಿಶ್ವಾಸ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಹೇಳಿದರು.

ನಗರದ ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ವಾಗ್ದೇವಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಕ್ಷಕರ ಜತೆಗಿನ ಸಂವಾದದಲ್ಲಿ ಅವರು ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು.

‘ವಿಧಾನಸೌಧದಲ್ಲಿ ಎಲ್ಲ ಪಕ್ಷಗಳ ವಿಧಾನ ಪರಿಷತ್ ಸದಸ್ಯರು ಹಿರಿಯ ಶಾಸಕ ಬಸವರಾಜಹೊರಟ್ಟಿ ನೇತೃತ್ವದಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಸಂಬಂಧಿಸಿದ ೩೭ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟ ಧರಣಿ ನಡೆಸಿದ್ದೆವು. ನಮ್ಮ ಜತೆ ಮಾತನಾಡಿದ್ದ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿ 37ರಲ್ಲಿ 35 ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಅವುಗಳಲ್ಲಿ ಪ್ರಮುಖವಾಗಿ ಕಾಲ್ಪನಿಕ ವೇತನ ಹಾಗೂ ವೇತನ ತಾರತಮ್ಯ ಸಮಸ್ಯೆಗಳು ಸದ್ಯಕ್ಕೆ ಬಗೆಹರಿಯುವಂತೆ ಕಂಡುಬರುತ್ತಿಲ್ಲ’ ಎಂದು ಅವರು ತಿಳಿಸಿದರು.

‘ರಾಜ್ಯದಲ್ಲಿ ೧೯೯೫ರ ನಂತರ ಅನುದಾನಕ್ಕೆ ಒಳಪಟ್ಟ ಶಾಲಾ ಕಾಲೇಜುಗಳ ಅನುದಾನ ತಡೆಯಲಾಗಿದ್ದು, ಅವುಗಳ ನಿಯಮ ಸರಳೀಕರಣಗೊಳಿಸಿ ಸಮಸ್ಯೆ ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಇದ್ದ ನಿಯಮಗಳನ್ನು ಸರಳೀಕರಣಗೊಳಿಸಿದೆ. ಶಿಕ್ಷಕರು ಜ್ಯೋತಿ ಸಂಜೀವಿನಿ ಬೇಡಿಕೆಯನ್ನು ಇಟ್ಟಿದ್ದು, ಅದನ್ನು ಸಂಪೂರ್ಣವಾಗಿ ರದ್ದುಪಡಿಸಿ ಅನುದಾನಿತ ಸಿಬ್ಬಂದಿಯನ್ನೂ ಒಳಗೊಳ್ಳುವಂತಹ ಯೋಜನೆ ಜಾರಿಗೊಳಿಸುವ ಭರವಸೆ ಸಿಕ್ಕಿದೆ. ಶಿಕ್ಷಕರ ಪರವಾಗಿ ನಿರಂತರ ಹೋರಾಟ ನಡೆಸುತ್ತಿದ್ದು, ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಪರಿಷತ್ತಿನ ಎಲ್ಲ ಸದಸ್ಯರು ಪಕ್ಷ ಭೇದ ಮರೆತು ಹೋರಾಡುತ್ತೇವೆ’ ಎಂದು ರಮೇಶ್ ಬಾಬು ತಿಳಿಸಿದರು.

ಬುರುಜಿನರೊಪ್ಪ ಶಾಲೆಯ ಶಿಕ್ಷಕರು ತಮಗೆ ಆರು ತಿಂಗಳಿಂದ ಬೇರೆ ಬೇರೆ ಕಾರಣಗಳಿಗಾಗಿ ವೇತನ ತಡೆ ಹಿಡಿಯಲಾಗಿದೆ ಎಂದು ದೂರಿದರೆ, ದೇವರಕೊಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಮುಖ್ಯಶಿಕ್ಷಕರ ಹುದ್ದೆಯನ್ನೇ ಮಂಜೂರು ಮಾಡಿಲ್ಲ ಎಂದು ಅಲವತ್ತುಕೊಂಡರು.

ಪ್ರಾಂಶುಪಾಲ ಡಾ. ಧರಣೇಂದ್ರಯ್ಯ, ಹಿರಿಯ ಉಪನ್ಯಾಸಕರಾದ ಎಂ.ಜಿ. ರಂಗಸ್ವಾಮಿ, ಅನಿಲ್ ಕುಮಾರ್, ನಾಗಣ್ಣ, ಚಂದ್ರಯ್ಯ, ರಾಮಕೃಷ್ಣ ಹಾಗೂ ತಾಲ್ಲೂಕಿನ ಶಿಕ್ಷಕರು, ಉಪನ್ಯಾಸಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT