ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಸಜ್ಜೆ, ನವಣೆ ಕೃಷಿ ದುಪ್ಪಟ್ಟು

Last Updated 20 ನವೆಂಬರ್ 2017, 7:31 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಈ ವರ್ಷ ತಾಲ್ಲೂಕಿನಲ್ಲಿ ಸಿರಿಧಾನ್ಯಗಳ ಪೈಕಿ ನವಣೆ ಹಾಗೂ ಸಜ್ಜೆ ಕೃಷಿ ದುಪ್ಪಟ್ಟಾಗಿದೆ. ಕೃಷಿ ಇಲಾಖೆ ಮೂಲಗಳ ಪ್ರಕಾರ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಮಳೆಯಾಶ್ರಿತ ಕೃಷಿ ಪೈಕಿ ಶೇಂಗಾ ಪ್ರಥಮ ಸ್ಥಾನದಲ್ಲಿದ್ದು, ನಂತರ ಸ್ಥಾನದಲ್ಲಿ ಸಿರಿಧಾನ್ಯ ಬಿತ್ತನೆ ಮಾಡಲಾಗುತ್ತಿದೆ.

ಬಹುತೇಕ ಅಕ್ಕಡಿಗೆ ಸೀಮಿತವಾಗಿದ್ದ ಸಿರಿಧಾನ್ಯಗಳನ್ನು ಕಳೆದ ವರ್ಷದಿಂದ ಅನೇಕರು ಪೂರ್ಣ ಪ್ರಮಾಣಬೆಳೆಯಾಗಿ ಬಿತ್ತನೆ ಮಾಡಿದ್ದಾರೆ. ಇದಕ್ಕೆ ಬಿತ್ತನೆ ವೇಳೆ ಹದ ಹಸಿ ಕೊರತೆ ಹಾಗೂ ಶೇಂಗಾ ಬೀಜ ದರ ವಿಪರೀತ ಏರಿಕೆಯೂ ಕಾರಣವಾಗಿದೆ.

ಇಲಾಖೆ ಅಂಕಿ–ಅಂಶ ಪ್ರಕಾರ ಕಳೆದ ವರ್ಷ ನವಣೆಯನ್ನು 650 ಹೆಕ್ಟೇರ್‌ ಗುರಿ ಇದ್ದರೂ 800 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು, ಈ ವರ್ಷ 850
ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು, ಆದರೆ 1,350 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಸಜ್ಜೆಯನ್ನು 700 ಹೆಕ್ಟೇರ್‌ ಗುರಿಗೆ 1,050 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

ತಾಲ್ಲೂಕಿನ ದೇವಸಮುದ್ರ ಹೋಬಳಿಗೆ ಹೋಲಿಕೆ ಮಾಡಿದಲ್ಲಿ ಮೊಳಕಾಲ್ಮುರು ಕಸಬಾ ಹೋಬಳಿಯಲ್ಲಿ ನವಣೆ, ಸಜ್ಜೆ ಹೆಚ್ಚು ಬಿತ್ತನೆ ಮಾಡಲಾಗಿದೆ. ಪ್ರಸ್ತುತ ಕಟಾವು ಪ್ರಕ್ರಿಯೆ ಅನೇಕ ಗ್ರಾಮಗಳಲ್ಲಿ ನಡೆಯುತ್ತಿದೆ. ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಕಾರ್ಯ ವಿಳಂಬವಾಗುತ್ತಿರುವ ದೂರುಗಳು ಕೇಳಿ ಬಂದಿವೆ.

ಇದಕ್ಕಾಗಿ ಕೃಷಿ ಇಲಾಖೆ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಸ್ಥಾಪಿಸಿರುವ ರಿಯಾಯ್ತಿ ದರದಲ್ಲಿ ಬಾಡಿಗೆ ಕೃಷಿ ಉಪಕರಣಗಳ ಕೇಂದ್ರದ ಉಪಯೋಗ ಮಾಡಿಕೊಳ್ಳಬೇಕು ಎಂದು ಪ್ರಚಾರ ಮಾಡಲಾಗುತ್ತಿದೆ ಎಂದು ತಾಲ್ಲೂಕು ಕೃಷಿ ಅಧಿಕಾರಿ ರವಿ ಹೇಳಿದರು.

ಪ್ರತಿ ಎಕರೆಗೆ 3–5 ಕ್ವಿಂಟಲ್‌ ಇಳುವರಿ ಸಾಧ್ಯತೆ ಗುರುತಿಸಲಾಗಿದೆ. ‘ಫಸಲ್‌ ಬಿಮಾ ಯೋಜನೆ’ ಅಡಿ ಬೆಳೆ ವಿಮೆ ದಾಖಲು ಕಾರ್ಯ ಪ್ರಗತಿಯಲ್ಲಿದೆ. ಬೆಳೆ ಕಟಾವು ಅಂತಿಮ ಹಂತವನ್ನು ವರದಿಯಲ್ಲಿ ದಾಖಲಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT