ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಂಗಡಣೆಗೆ ಕೂಡಿ ಬಾರದ ಮುಹೂರ್ತ

Last Updated 20 ನವೆಂಬರ್ 2017, 7:37 IST
ಅಕ್ಷರ ಗಾತ್ರ

ದಾವಣಗೆರೆ: ‘ಸುಂದರ ನಗರಿ’ ಎನಿಸಿಕೊಳ್ಳಲು ಒಣ ಹಾಗೂ ಹಸಿ ಕಸವನ್ನು ಮೂಲದಲ್ಲಿಯೇ ವಿಂಗಡಿಸುವಂತಾಗಬೇಕು ಎಂಬ ನಾಗರಿಕರ ಆಶಯ ಈಡೇರಲು ಕಾಲ ಇನ್ನೂ ಕೂಡಿ ಬಂದಿಲ್ಲ. ಈ ವಿಷಯದಲ್ಲಿ ನಗರ ‘ಸ್ಮಾರ್ಟ್‌’ ಆಗಲು ಕ್ರಮಿಸಬೇಕಾದ ಹಾದಿ ಇನ್ನೂ ಬಹಳ ದೂರವಿದೆ ಎಂದು ದೂರುಗಳು ಕೇಳಿ ಬರುತ್ತಿವೆ.

ಐದೂವರೆ ತಿಂಗಳ ಹಿಂದೆ ವಿಶ್ವ ಪರಿಸರ ದಿನವನ್ನು ಆಚರಿಸಿದ್ದ ಮಹಾನಗರ ಪಾಲಿಕೆಯು ಕೆಲವು ನಾಗರಿಕರಿಗೆ ಎರಡು ಕಸದಬುಟ್ಟಿಗಳನ್ನು ನೀಡಿ, ಮನೆ ಮನೆಗೆ ಬರುವ ಪೌರಕಾರ್ಮಿಕರಿಗೆ ಒಣ ಹಾಗೂ ಹಸಿ ಕಸವನ್ನು ಪ್ರತ್ಯೇಕವಾಗಿ ನೀಡುವ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿತ್ತು. ಕೆಲವು ದಿನಗಳಲ್ಲಿಯೇ ನಗರದ ಪ್ರತಿ ಕುಟುಂಬಕ್ಕೂ ತಲಾ ಒಂದೊಂದು ಹಸಿರು (ಹಸಿ ಕಸಕ್ಕೆ) ಹಾಗೂ ನೀಲಿ (ಒಣ ಕಸಕ್ಕೆ) ಬಣ್ಣದ ಕಸದಬುಟ್ಟಿಗಳನ್ನು ಉಚಿತವಾಗಿ ನೀಡಲು ಯೋಜನೆ ರೂಪಿಸಿತ್ತು. ಆದರೆ, ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ನಗರದಲ್ಲಿ ನಿತ್ಯ ಸುಮಾರು 150 ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರ ನಿರ್ವಹಣೆ ಪಾಲಿಕೆಗೆ ದೊಡ್ಡ ಸವಾಲಾಗಿದೆ. ಮನೆಯಲ್ಲೇ ಜನ ಕಸ ವಿಂಗಡಿಸಿ ನೀಡಿದರೆ ನಿರ್ವಹಣೆ ಸುಲಭವಾಗಲಿದೆ ಎಂಬ ಕಾರಣಕ್ಕೆ ನಗರದಲ್ಲಿರುವ ಸುಮಾರು 82 ಸಾವಿರ ಕುಟುಂಬಗಳಿಗೂ ಕಸವನ್ನು ಹಾಕಲು ಕಸದಬುಟ್ಟಿಗಳನ್ನು ನೀಡಲು ಮುಂದಾಗಿತ್ತು.

‘ನಾವು ಕಸವನ್ನು ವಿಂಗಡಿಸಿ ಕೊಡಲು ಸಿದ್ಧರಿದ್ದೇವೆ. ಆದರೆ, ಮನೆ ಬಾಗಿಲಿಗೆ ಬರುವ ಪಾಲಿಕೆಯ ವಾಹನದಲ್ಲಿ ಈ ಸೌಲಭ್ಯ ಇಲ್ಲ. ಎಲ್ಲ ಬಗೆಯ ಕಸವನ್ನೂ ಒಂದರಲ್ಲೇ ಹಾಕಿಕೊಂಡು ಹೋಗುತ್ತಿದ್ದಾರೆ’ ಎಂಬುದು ಡಿಸಿಎಂ ಟೌನ್‌ಷಿಪ್‌ನ ಸಂತೋಷ್‌ ಪಾಟೀಲ್‌ ಅವರ ಆಕ್ಷೇಪ.

‘ಯಾರೂ ಒಣ ಹಾಗೂ ಹಸಿ ಕಸವನ್ನು ನಮಗೆ ಬೇರೆ ಮಾಡಿ ಕೊಡುತ್ತಿಲ್ಲ. ಪ್ಲಾಸ್ಟಿಕ್‌, ಒಡೆದ ಗಾಜು, ಕಬ್ಬಿಣದ ತುಂಡುಗಳನ್ನೂ ಪ್ಲಾಸ್ಟಿಕ್‌ನಲ್ಲಿ ಕಟ್ಟಿ ನಮ್ಮ ಟಿಪ್ಪರ್‌ಗೆ ಹಾಕುತ್ತಿದ್ದಾರೆ. ಟಿಪ್ಪರ್‌ನ ಲಿಫ್ಟ್‌ ಹಾಳಾಗಿದೆ. ಮೇಲೆ ನಿಂತು ನಾವು ಕಸವನ್ನು ಎಳೆದು ಹಾಕಬೇಕಾಗುತ್ತಿದೆ. ಕಾಲಿಗೆ ಗಾಜು ಚುಚ್ಚಿ ಹಲವು ಬಾರಿ ಗಾಯ
ಗಳಾಗಿವೆ’ ಎಂದು ಕಸ ಸಂಗ್ರಹಿಸುವ ಪಾಲಿಕೆಯ ಆಟೊ ಟಿಪ್ಪರ್‌ನ
ಸಿಬ್ಬಂದಿ ರಾಜೇಶ್‌ ತಮ್ಮ ಕಷ್ಟ ಹೇಳಿಕೊಂಡರು.

‘ಜನ ಹಾಕಿದ ಕಸದಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ ಬಾಟಲಿ, ಹಾಲಿನ ಪ್ಯಾಕೆಟ್‌ಗಳನ್ನು ನಾವು ಹುಡುಕಿ ತೆಗೆದಿಟ್ಟುಕೊಳ್ಳುತ್ತೇವೆ. ಕಸ ನೀಡುವಾಗಲೇ ಅವುಗಳನ್ನು ಪ್ರತ್ಯೇಕಿಸಿಕೊಟ್ಟರೆ ನಮಗೂ ಅನುಕೂಲವಾಗಲಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಪ್ರಜ್ಞೆಯ ಕೊರತೆ: ‘ಕಸ ವಿಂಗಡಿಸಿ ನೀಡುವುದು ನಾಗರಿಕರ ಜವಾಬ್ದಾರಿ. ಈ ಬಗ್ಗೆ ಎನ್‌.ಜಿ.ಒಗಳ ಮೂಲಕ ಜನಜಾಗೃತಿ ಮೂಡಿಸಿದ್ದೇವೆ. ಆದರೆ, ಹಳೆ ದಾವಣಗೆರೆ ಭಾಗದಲ್ಲಿ ಜನ ಸ್ಪಂದಿಸುತ್ತಿಲ್ಲ. ಕಸದಬುಟ್ಟಿ ನೀಡಿದರೂ ಸರಿಯಾಗಿ ಬಳಸುತ್ತಾರೆ ಎಂಬ ವಿಶ್ವಾಸ ಮೂಡಲಿಲ್ಲ. ಹಣ ದುಂದುವೆಚ್ಚ ಮಾಡಿದಂತಾಗಬಾರದು ಎಂಬ ಕಾರಣಕ್ಕೆ ಕಸದಬುಟ್ಟಿ ನೀಡುವ ಯೋಜನೆ ಕಾರ್ಯರೂಪಕ್ಕೆ ತಂದಿಲ್ಲ. ಕಸ ನಿರ್ವಹಣೆ ಬಗ್ಗೆ ನಮ್ಮ ಜನರಲ್ಲಿ ಪ್ರಜ್ಞೆ ಇಲ್ಲ’ ಎಂದು ಪಾಲಿಕೆ ಆಯುಕ್ತ ಬಿ.ಎಚ್‌. ನಾರಾಯಣಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಸಮಗ್ರವಾಗಿ ತ್ಯಾಜ್ಯ ನಿರ್ವಹಣೆಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಒಯ್ದ ಕಸವನ್ನು ಯಂತ್ರದ ಸಹಾಯದಿಂದ ವಿಂಗಡಣೆ ಮಾಡಲು ಚಿಂತನೆ ನಡೆಸಲಾಗಿದೆ. ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಈಗಾಗಲೇ ಸುಮಾರು 10 ಟನ್‌ ತ್ಯಾಜ್ಯಗಳಿಂದ ಕಾಂಪೋಸ್ಟ್‌ ಗೊಬ್ಬರ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಲಿದೆ. ನಾಗರಿಕರೂ ತಮ್ಮ ಮನೆ, ಅಪಾರ್ಟ್‌ಮೆಂಟ್‌ಗಳಲ್ಲಿ ಹಸಿ ಕಸಗಳಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಸಿ ಗಾರ್ಡನ್‌ಗಳಿಗೆ ಬಳಕೆ ಮಾಡಿಕೊಂಡರೆ ತ್ಯಾಜ್ಯ ನಿರ್ವಹಣೆ ಮಾಡುವುದು ಸುಲಭವಾಗಲಿದೆ’ ಎಂದು ಅವರು ಸಲಹೆ ಕೊಟ್ಟರು.

32 ಟಾಟಾ ಏಸ್‌ ಖರೀದಿಗೆ ಚಿಂತನೆ
ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸಲು ಪಾಲಿಕೆ ಬಳಿ ಸದ್ಯ ಮೂರು ಚಕ್ರದ 20 ಆಟೊ ಟಿಪ್ಪರ್‌ಗಳಿವೆ. ನಗರದ 41 ವಾರ್ಡ್‌ಗಳಲ್ಲೂ ಸಮರ್ಪಕವಾಗಿ ಕಸ ಸಂಗ್ರಹಿಸಲು ಹೆಚ್ಚಿನ ಸಾಮರ್ಥ್ಯ ಹೊಂದಿರುವ 32 ಟಾಟಾ ಏಸ್‌ ವಾಹನವನ್ನು ಖರೀದಿಸಲು ಯೋಜನೆ ಸಿದ್ಧಪಡಿಸಿ ಪೌರಾಡಳಿತ ನಿರ್ದೇಶನಾಲಯಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಶೀಘ್ರದಲ್ಲೇ ಅದಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ ಎಂದು ಆಯುಕ್ತ ನಾರಾಯಣಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT