ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷ್ಯಕ್ಕೀಡಾದ ಗಂಗಜ್ಜಿಯ ‘ಗಂಗೋತ್ರಿ’

Last Updated 20 ನವೆಂಬರ್ 2017, 8:37 IST
ಅಕ್ಷರ ಗಾತ್ರ

ಧಾರವಾಡ: ಹಿಂದೂಸ್ತಾನಿ ಸಂಗೀತದ ಮೇರು ಗಾಯಕಿ ಡಾ. ಗಂಗೂಬಾಯಿ ಹಾನಗಲ್‌ ಹುಟ್ಟಿ ಬೆಳೆದ ಮನೆ, ‘ಗಂಗೋತ್ರಿ’ ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ.ನಗರದ ಶುಕ್ರವಾರಪೇಟೆಯ ಆ ಮನೆ ಅತ್ತ ಕುಟುಂಬದವರ ಒಡೆತನದಲ್ಲೂ ಇಲ್ಲದೆ, ಇತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಿರ್ವಹಣೆಯನ್ನೂ ಕಾಣದೆ ಅನಾಥವಾಗಿದೆ. ಚಾವಣಿ ಕುಸಿದಿದ್ದು ಕಟ್ಟಡದ ಒಳಗೆ ಹುಲ್ಲು, ಗಿಡಗಳು ಬೆಳೆದಿವೆ. ಗೋಡೆಗೆ ತಾಗಿಕೊಂಡೇ ಆಲದಮರ ಬೆಳೆಯುತ್ತಿದೆ. ಗೇಟ್‌ ಕಳ್ಳರ ಪಾಲಾಗಿದೆ. ರಕ್ಷಣೆ ಇಲ್ಲದ ಮನೆಯು ಬೀದಿ ನಾಯಿಗಳ ಆವಾಸ ಸ್ಥಾನವಾಗಿದೆ.

ಶತಮಾನಕ್ಕೂ ಹಳೆಯದಾದ ಈ ಮನೆಯಲ್ಲಿ ಬಿದಿರು ಹಾಗೂ ಮರಮುಟ್ಟುಗಳ ಬಳಕೆ ಹೆಚ್ಚಾಗಿದೆ. ವಸ್ತುಸಂಗ್ರಹಾಲಯಕ್ಕಾಗಿ ಈ ಮನೆಯನ್ನು ಖರೀದಿಸಿ, ದುರಸ್ತಿಗೊಳಿಸಲೆಂದು 2007ರಲ್ಲಿ ರಾಜ್ಯ ಸರ್ಕಾರ  ₹25 ಲಕ್ಷ ನೀಡಿತ್ತು. ಇಂಟ್ಯಾಕ್ ವತಿಯಿಂದ ದುರಸ್ತಿ ನಡೆದಿತ್ತು. ನಂತರ ಅದರ ನಿರ್ವಹಣೆಯ ಹೊಣೆಯನ್ನು ಗಂಗೂಬಾಯಿ ಕುಟುಂಬದವರಿಗೆ ನೀಡಲಾಗಿತ್ತು. ಆದರೆ, 2010ರಲ್ಲಿ ಹುಬ್ಬಳ್ಳಿಯಲ್ಲಿ ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಟ್ರಸ್ಟ್‌ ಆರಂಭದ ನಂತರ ಸರ್ಕಾರ ಮತ್ತು ಕುಟುಂಬದವರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಈ ಮನೆಯ ನಿರ್ವಹಣೆ ಇಲ್ಲದಂತಾಯಿತು.

ವಸ್ತುಸಂಗ್ರಹಾಲಯದ ಈ ಸ್ಥಿತಿಯಿಂದ ಗಂಗೂಬಾಯಿ ಅವರ ಅಭಿಮಾನಿಗಳು ನೊಂದುಕೊಂಡಿದ್ದರೆ, ಗೋಡೆ ಕುಸಿದು ತಮ್ಮ ಮನೆಗೂ ಹಾನಿಯಾದೀತೆಂಬ ಆತಂಕ ಅಕ್ಕಪಕ್ಕದ ಮನೆಯವರದು.

ಈ ಬಗ್ಗೆ ಪ್ರತಿಕ್ರಿಯಿಸಿದ ಗಂಗೂಬಾಯಿ ಹಾನಗಲ್ ಅವರ ಮೊಮ್ಮಗ ಮನೋಜ ಹಾನಗಲ್‌, ‘ಮನೆಯನ್ನು ನಾವೇ ನಿರ್ವಹಣೆ ಮಾಡುತ್ತಿದ್ದೆವು. ಇಬ್ಬರು ಕಾವಲುಗಾರರನ್ನೂ ನೇಮಿಸಿದ್ದೆವು. ಆದರೆ 2010ರಲ್ಲಿ ಸ್ಥಾಪನೆಯಾದ ಗಂಗೂಬಾಯಿ ಹಾನಗಲ್‌ ಹೆಸರಿನ ಸಂಗೀತ ಗುರುಕುಲ ಟ್ರಸ್ಟ್‌ನಲ್ಲಿ, ಕುಟುಂಬದ ಒಬ್ಬರನ್ನೂ ಸೇರಿಸಿಕೊಳ್ಳದೇ ಅಪಮಾನ ಮಾಡಲಾಗಿದೆ. ಹೀಗಾಗಿ ಟ್ರಸ್ಟ್‌ ಒಡೆತನದಲ್ಲಿರುವ ಮನೆಯಿಂದಲೂ ನಾವು ಹೊರಬಂದೆವು. ಈಗ ಅದು ಸರ್ಕಾರದ ಸ್ವತ್ತು, ಅವರ ಜವಾಬ್ದಾರಿ’ ಎಂದರು.

‘ವಿವಿಧ ಸಾಧಕರ ಹೆಸರಿನಲ್ಲಿ ರಾಜ್ಯದಲ್ಲಿ 33 ಟ್ರಸ್ಟ್‌ಗಳಿವೆ. ಅವುಗಳೆಲ್ಲೆಲ್ಲ ಆ ವ್ಯಕ್ತಿಯ ಕುಟುಂಬದವರಿಗೆ ಸ್ಥಾನ ಕಲ್ಪಿಸಲಾಗಿದೆ. ಹುಬ್ಬಳ್ಳಿ–ಧಾರವಾಡದಲ್ಲಿನ ಸಂಗೀತ ದಿಗ್ಗಜರ ಹೆಸರಿನ ಟ್ರಸ್ಟ್‌ಗಳಲ್ಲೂ ಅವರ ಕುಟುಂಬದವರು ಇದ್ದಾರೆ. ಆದರೆ ಗಂಗೂಬಾಯಿ ಹಾನಗಲ್‌ ಹೆಸರಿನ ಟ್ರಸ್ಟ್‌ನಲ್ಲಿ ಮಾತ್ರ ಕುಟುಂಬದವರಿಗೆ ಅವಕಾಶ ನೀಡಿಲ್ಲ. ಇದು ನಮಗೆ ತೀವ್ರ ಬೇಸರ ತರಿಸಿದೆ’ ಎಂದು ಆರೋಪಿಸಿದರು.

‘2010ರಲ್ಲಿ ಟ್ರಸ್ಟ್ ಸ್ಥಾಪನೆಯಾದ ನಂತರ, ಸಂಗೀತ ತರಗತಿ ನಡೆಸುತ್ತಿದ್ದ ಮನೆಯ ಕೀಲಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಿದೆವು. ಗಂಗೂಬಾಯಿ ಅವರ ಜನ್ಮದಿನವಾದ ಮಾರ್ಚ್‌ 5 ಹಾಗೂ ಜುಲೈ 21ರಂದು ಪುಣ್ಯತಿಥಿಯ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಅವರೇ ನೆರವೇರಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಕುಟುಂಬದವರ ಪಾತ್ರ ಏನೂ ಇಲ್ಲ’ ಎಂದರು.

‘ಗುರುಕುಲಕ್ಕೆ ಪ್ರತಿ ವರ್ಷ ₹1.25ಕೋಟಿ ಅನುದಾನವಿದೆ. ಇದರಲ್ಲಿ ₹65ಲಕ್ಷ ಮಾತ್ರ ಖರ್ಚು ಮಾಡುತ್ತಿದ್ದಾರೆ. ಮನೆಯ ನಿರ್ವಹಣೆ ಹೊಣೆ ಹೊತ್ತಿರುವ ಸರ್ಕಾರಕ್ಕೆ ಮನೆಯನ್ನು ಸುಸ್ಥಿತಿಯಲ್ಲಿಡುವುದು ಕಷ್ಟವೇ? ಈ ಕುರಿತಂತೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತ ಹಾಗೂ ಜಿಲ್ಲಾಧಿಕಾರಿಗೆ ಹಲವು ಬಾರಿ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮನೆಯ ದುಃಸ್ಥಿತಿಗೆ ಸರ್ಕಾರವೇ ನೇರ ಹೊಣೆ’ ಎಂದು ಮನೋಜ ಆರೋಪ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಕೆ. ರಂಗಣ್ಣವರ, ‘ವಸ್ತು ಸಂಗ್ರಹಾಲಯ ನಿರ್ಮಿಸಿ, ಅದರ ನಿರ್ವಹಣೆ ಹೊಣೆಯನ್ನು ಮನೋಜ ಹಾನಗಲ್‌ ಅವರಿಗೆ ಒಪ್ಪಿಸಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಅಂದಿನ ಜಿಲ್ಲಾಧಿಕಾರಿ ಎಂ.ಎಸ್‌. ಶ್ರೀಕರ ಹಾಗೂ ಮನೋಜ ಅವರ ನಡುವಿನ ಒಪ್ಪಂದ ಪತ್ರವೂ ಇದೆ. ಮನೋಜ ಅವರು ನಿರ್ವಹಣೆ ಹೊಣೆಯನ್ನು ವಾಪಸ್‌ ಮಾಡಿದ್ದಾಗಿ ಹೇಳುತ್ತಾರೆ. ಆದರೆ, ಅದು ಈಗಲೂ ಅವರ ಹೊಣೆಯಲ್ಲಿಯೇ ಇದೆ ಎಂಬುದಾಗಿ ಇಲಾಖೆಯ ದಾಖಲೆಗಳು ಹೇಳುತ್ತವೆ’ ಎಂದರು.

ಅಲ್ಲದೇ, ವಸ್ತುಸಂಗ್ರಹಾಲಯದ ಸ್ಥಿತಿ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಾಗೂ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದ್ದು, ನವೀಕರಣಕ್ಕೂ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT