ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಧಾರಾಕಾರ ಮಳೆ

Last Updated 20 ನವೆಂಬರ್ 2017, 8:39 IST
ಅಕ್ಷರ ಗಾತ್ರ

ಧಾರವಾಡ: ನಗರದಲ್ಲಿ ಭಾನುವಾರ ಬೆಳಿಗ್ಗೆ ಸುರಿದ ಧಾರಾಕಾರ ಮಳೆಯಿಂದಾಗಿ ಇಲ್ಲಿನ ಎಸ್‌ಕೆಎಸ್‌ ಕಾಲೊನಿ, ತುಂಗಭದ್ರ ಹೌಸಿಂಗ್ ಸೊಸೈಟಿ ಬಡಾವಣೆ, ಗಾಂಧಿಚೌಕ್‌, ಜನ್ನತ್‌ನಗರ, ಸಿ.ಬಿ.ನಗರದಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿ ಜನ ತೊಂದರೆ ಅನುಭವಿಸಿದರು. ಬೆಳಿಗ್ಗೆಯಿಂದ ಮೋಡ ಮುಸುಕಿದ ವಾತಾವರಣ ಇತ್ತು. ಬೆಳಿಗ್ಗೆ 10.30 ಮಧ್ಯಾಹ್ನ 12.30 ರವರೆಗೆ ಧಾರಾಕಾರ ಮಳೆ ಸುರಿಯಿತು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ಪ್ರೊ. ಕರಿಸಿದ್ದಪ್ಪ, ‘ಎಸ್‌ಕೆಎಸ್‌ ಕಾಲೊನಿ ಹಾಗೂ ತುಂಗಭದ್ರ ಹೌಸಿಂಗ್ ಸೊಸೈಟಿಯ ಬಡಾವಣೆಯಲ್ಲಿ ಈ ಹಿಂದೆ ಎಲ್ಲ ಚರಂಡಿಗಳಲ್ಲಿನ ನೀರು ಬಡಾವಣೆಯ ಉತ್ತರಕ್ಕೆ ಇರುವ ಅಭಿಮಾನ ಸೊಸೈಟಿಯ ಬಡಾವಣೆಯ ಪಕ್ಕದಲ್ಲಿ ಹರಿದು ಮುಖ್ಯ ಗಟಾರಿನ ಮೂಲಕ ಕೆಲಗೇರಿ ಕೆರೆಗೆ ಸೇರುತ್ತಿತ್ತು.

ಜತೆಗೆ ಇಲ್ಲಿಯ ರಸ್ತೆಗಳು ಸ್ಥಳೀಯರ ಸಂಚಾರಕ್ಕೆ ಮುಕ್ತವಾಗಿದ್ದವು. ಆದರೆ, ಕಳೆದ 5–6 ತಿಂಗಳಿಂದ ಹೊಸ ಬಡಾವಣೆ ಕಟ್ಟಲು ಮುಂದಾಗಿರುವ ಅಭಿಮಾನ ಸೊಸೈಟಿಯವರು ಈ ಚರಂಡಿ, ಗಟಾರು ಹಾಗೂ ರಸ್ತೆಗಳಿಗೆ ಅಡ್ಡಲಾಗಿ ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಹೀಗಾಗಿ ಗಟಾರು ಹಾಗೂ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.

ಈ ಕುರಿತು ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಭಾನುವಾರ ಸುರಿದ ಮಳೆಯಿಂದ ಧಾರವಾಡದಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸಿಲ್ಲ. ಜತೆಗೆ ಮನೆಗಳಿಗೆ ಚರಂಡಿ ಹಾಗೂ ಮಳೆಯ ನೀರು ನುಗ್ಗಿದ ಕುರಿತು ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲೂ ಭಾನುವಾರ ದಿನಪೂರ್ತಿ ದಟ್ಟವಾದ ಮೋಡ ಕವಿದ ವಾತಾವರಣ ಇತ್ತು. ಬೆಳಿಗ್ಗೆ ನಗರದ ಕೆಲ ಪ್ರದೇಶಗಲ್ಲಿ 10 ನಿಮಿಷಗಳ ಕಾಲ ತುಂತುರು ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT