ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಕೆಲಸ ಖಾಸಗಿ ಶಾಲೆಗಳು ಮಾಡುತ್ತಿವೆ: ಶರಣಪ್ರಕಾಶ

Last Updated 20 ನವೆಂಬರ್ 2017, 9:05 IST
ಅಕ್ಷರ ಗಾತ್ರ

ಸೇಡಂ: ‘ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವುದು ಸರ್ಕಾರದ ಮುಖ್ಯ ಉದ್ದೇಶವಾಗಿದ್ದರೂ ಸಹ ಕೆಲವು ಕಡೆಗಳಲ್ಲಿ ಅದರಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ಕೊಡುವುದರ ಮೂಲಕ ಸರ್ಕಾರದ ಕೆಲಸ ಮಾಡುತ್ತಿವೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ತಾಲ್ಲೂಕಿನ ಬಿಬ್ಬಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ಮಾರ್ಗಮಧ್ಯದಲ್ಲಿ ಶ್ರೀ ಕಾರ್ಯಘಟ್ಟ ಸಿದ್ಧೇಶ್ವರ ಎಜ್ಯುಕೇಕ್ಷನ್ ಟ್ರಸ್ಟ್(ರಿ) ನಿರ್ಮಿಸಿದ ಲಿಂಗೈಕ್ಯ ಶ್ರೀಮತಿ ಎಸ್‌.ಮಹಾದೇವಿ ಮೆಮೋರಿಯಲ್ ಪಬ್ಲಿಕ್ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹೆಚ್ಚಾಗಿ ಖಾಸಗಿ ಶಾಲೆಗಳು ಪಟ್ಟಣ ಮತ್ತು ನಗರಕ್ಕೆ ಮಾತ್ರ ಸೀಮಿತವಾಗಿವೆ. ಆದರೆ, ಈ ಟ್ರಸ್ಟ್ ಗ್ರಾಮೀಣ ಭಾಗದಲ್ಲಿ ನಿರ್ಮಿಸಿರುವುದು ಬಹಳ ಸಂತೋಷಕರ. ಇದರಿಂದ ಗ್ರಾಮೀಣ ಭಾಗದ ಮಕ್ಕಳು ಸಹ ಆಂಗ್ಲಭಾಷೆಯನ್ನು ಕಲಿಯಲು ಅನುಕೂಲವಾಗುತ್ತದೆ’ ಎಂದರು.

‘ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹುಟ್ಟಿದ ಪ್ರತಿಯೊಂದು ಮಗುವಿಗೂ ಸಹ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಂದಾಗಿ ಕಲಂ 371(ಜೆ)ನ್ನು ಪ್ರತಿಯೊಬ್ಬರ ಜೀವನಕ್ಕೂ ಅನ್ವಯವಾಗುವ ನಿಟ್ಟಿನಲ್ಲಿ ಜಾರಿಗೊಳಿಸಲಾಗಿದೆ. ಇದರ ಲಾಭವನ್ನು ಶಿಕ್ಷಣ ಪಡೆದ ಪ್ರತಿಯೊಬ್ಬರು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಮಾತನಾಡಿ, ‘ಇಂದಿನ ಶಿಕ್ಷಣದ ವ್ಯವಸ್ಥೆಯಲ್ಲಿ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ಪಡೆದುಕೊಂಡರೆ ಮಾತ್ರ ಅಕ್ಷರಸ್ಥ ಎನ್ನವಷ್ಟರಮಟ್ಟಿಗೆ ಜನಜನೀತವಾಗಿದೆ. ಆದರೆ, ಹೊಟ್ಟೆ ತುಂಬಿಸುವ ಶಿಕ್ಷಣಕ್ಕಿಂತ ಮಾನವೀಯ ಮೌಲ್ಯಗಳಾಧಾರಿತ ಶಿಕ್ಷಣವನ್ನು ಶಿಕ್ಷಕರು ನೀಡಬೇಕಾಗಿದೆ’ ಎಂದು ಆಶಿಸಿದರು.

ತೊಟ್ನಳ್ಳಿ ಮಹಾಂತೇಶ್ವರ ಮಠದ ತ್ರಿಮೂರ್ತಿ ಶಿವಾಚಾರ್ಯ, ಶಿವಶಂಕರ ಮಠದ ಶಿವಶಂಕರ ಶಿವಾಚಾರ್ಯ, ಜಿ.ಪಂ ಮಾಜಿ ಅಧ್ಯಕ್ಷ ಶಿವಶರಣಪ್ಪ ಪಾಟೀಲ ತೆಲ್ಕೂರ ಮಾತನಾಡಿದರು. ಕಾರ್ಯಘಟ್ಟ ಸಿದ್ಧೇಶ್ವರ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಶ್ರೀಶೈಲ್ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಅಳ್ಳೊಳ್ಳಿ ಮಠದ ರಾಚೂಟಯ್ಯ ಸ್ವಾಮೀಜಿ, ‘ಕಾಡಾ’ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ, ಬಸವರಾಜ ಪಾಟೀಲ ಊಡಗಿ, ಸುದರ್ಶನರೆಡ್ಡಿ ಪಾಟೀಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುರೇಖಾ ರಾಜಶೇಖರ ಪುರಾಣಿಕ್, ಕರೆಪ್ಪ ಪಿಲ್ಲಿ, ವಿಜಯಕುಮಾರ ಶರ್ಮಾ, ಮಹೇಶ ಹಳಿಮನಿ, ಬಸವಂತರೆಡ್ಡಿ ಪಾಟೀಲ, ವಿಷ್ಣುವರ್ಧನರೆಡ್ಡಿ ಇದ್ದರು. ಕಾರ್ಯದರ್ಶಿ ಮಲ್ಲಿಕಾರ್ಜುನ ಮಠಪತಿ ಸ್ವಾಗತಿಸಿದರು. ಗಂಗಾಧರ ಸಾವಳಗಿ ನಿರೂಪಿಸಿದರು. ಪಾರ್ವತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT