ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ನಿರ್ಮಾಣವಾಗದ ಹೂವಿನ ಮಾರುಕಟ್ಟೆ

Last Updated 20 ನವೆಂಬರ್ 2017, 10:18 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರ ಪಾಲಿಕೆ ಜಾಗದಲ್ಲಿ ಹೂವಿನ ಮಾರುಕಟ್ಟೆ ನಿರ್ಮಿಸುವ ಭರವಸೆ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ. ಸುಸಜ್ಜಿತ ಮಳಿಗೆಯಲ್ಲಿ ಹೂವಿನ ವ್ಯಾಪಾರ ನಡೆಸುವ ವ್ಯಾಪಾರಿಗಳ ಕನಸು ನನಸಾಗಿಲ್ಲ.

ಮಾರುಕಟ್ಟೆ ನಿರ್ಮಾಣಕ್ಕಾಗಿ ನಗರದ ಸವಾರ್‌ಲೈನ್‌ ರಸ್ತೆ ಮತ್ತು ಗಾರ್ಡನ್‌ ಏರಿಯಾಗೆ ಹೊಂದಿಕೊಂಡಿರುವ ಪಾಲಿಕೆಯ 500X200 ವಿಸ್ತೀರ್ಣದ ಜಾಗ ಗುರುತಿಸಲಾಗಿತ್ತು. ಪಾಲಿಕೆಯ ಹಿಂದಿನ ಆಯುಕ್ತ ರವಿ ಅವರು ಹೂವಿನ ವ್ಯಾಪಾರಸ್ಥರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಮಾರುಕಟ್ಟೆಯ ನೀಲನಕ್ಷೆಯ ಸಹಿತ ಮಳಿಗೆ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ್ದರು. ಆ ಸ್ಥಳದಲ್ಲಿದ್ದ ಕಟ್ಟಡಗಳನ್ನು ತೆರವುಗೊಳಿಸಿ ಒಂದು ವರ್ಷವಾದರೂ ಈವರೆಗೂ ಕಾಮಗಾರಿ ಆರಂಭಗೊಂಡಿಲ್ಲ.

ಹೂವಿನ ಮಾರುಕಟ್ಟೆ ಸ್ಥಳಾಂತರ: ಮೊದಲು ನೆಹರೂ ರಸ್ತೆ ಬಳಿಯಲ್ಲಿ ಹೂವಿನ ಮಾರುಕಟ್ಟೆ ಇತ್ತು. 30–40 ವರ್ಷಗಳಿಂದ ಹೂವಿನ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಶಿವಪ್ಪ ನಾಯಕ ಸೂಪರ್ ಮಾರ್ಕೆಟ್‌ (ಮಾಲ್) ನಿರ್ಮಾಣ ಮಾಡಲೆಂದು ಹಳೇ ತಾಲ್ಲೂಕು ಕಚೇರಿ ಸ್ಥಳಕ್ಕೆ ಹೂವಿನ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿತ್ತು.

ಈಡೇರದ ಭರವಸೆ: ‘ಸೂಪರ್ ಮಾರ್ಕೆಟ್‌ ನಿರ್ಮಾಣದ ನಂತರ ಅಲ್ಲಿಯೇ ನೆಲಮಳಿಗೆಗಳನ್ನು ನಿರ್ಮಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಡುವುದಾಗಿ ಜನಪ್ರತಿನಿಧಿ ಗಳು ಭರವಸೆ ನೀಡಿದ್ದರು. ಮಾರುಕಟ್ಟೆ ಸ್ಥಳಾಂತರಗೊಂಡು 9 ವರ್ಷ ಕಳೆದಿದೆ. ಸೂಪರ್ ಮಾರ್ಕೆಟ್‌ ಸಹ ಪ್ರಾರಂಭವಾಗಿದೆ. ಆದರೆ, ವ್ಯಾಪಾರ ಮಳಿಗೆಗಳು ನಿರ್ಮಾಣಗೊಂಡಿಲ್ಲ. ವ್ಯಾಪಾರಸ್ಥರು ಕೇಳಲು ಹೋದರೆ ಈಗ ಅಲ್ಲಿ ಮಾರುಕಟ್ಟೆಗೆ ಜಾಗ ನೀಡಲು ಸಾಧ್ಯವಾಗುವುದಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡಿದರು’ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.

ವ್ಯಾಪಾರಕ್ಕೆ ಅನುಕೂಲ: ಈಗಿರುವ ಹೂವಿನ ಮಾರುಕಟ್ಟೆಯಲ್ಲಿ ಒಟ್ಟು 138 ಮಳಿಗೆಗಳಿವೆ. ಆ ಪೈಕಿ ಕೆಲವು ಹಣ್ಣಿನ ಅಂಗಡಿಗಳೂ ಇವೆ. ಸದ್ಯ 100 ಮಂದಿ ಹೂವಿನ ಮಳಿಗೆಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಶಿವಪ್ಪ ನಾಯಕ ವೃತ್ತಕ್ಕೆ ಸಮೀಪವಿರುವುದರಿಂದ ಜನದಟ್ಟಣೆ ಹೆಚ್ಚಾಗಿರುತ್ತದೆ. ಹಾಗಾಗಿ ವ್ಯಾಪಾರಕ್ಕೆ ಪ್ರತಿಕೂಲ ವಾತಾವರಣವಿದೆ. ಅಧಿಕ ವ್ಯಾಪಾರಿಗಳಿರುವ ಕಾರಣ ಕೆಲವೊಮ್ಮೆ ಪೈಪೋಟಿ ಉಂಟಾಗುತ್ತದೆ.

ಹಬ್ಬದ ದಿನಗಳಲ್ಲಿ ವ್ಯಾಪಾರ ಜೋರಾಗಿಯೇ ಇರುತ್ತದೆ. ಸ್ವಚ್ಛತೆಗಾಗಿ ಪಾಲಿಕೆ ಸ್ವಲ್ಪ ಮೊತ್ತದ ಹಣವನ್ನು ತೆಗೆದುಕೊಳ್ಳುತ್ತದೆ. ಆದರೂ ಪಾಲಿಕೆ ಈಗಾಗಲೇ ನಿಗದಿ ಮಾಡಿರುವ ಸ್ಥಳಕ್ಕೆ ಹೂವಿನ ವ್ಯಾಪಾರಿಗಳು ಹೋಗಲು ಸಿದ್ಧರಿದ್ದಾರೆ. ಸವಾರ್‌ಲೈನ್‌ ರಸ್ತೆಯು ಬಸ್‌ನಿಲ್ದಾಣಕ್ಕೆ, ಬಿ.ಎಚ್. ರಸ್ತೆ, ಗೋಪಿ ವೃತ್ತಕ್ಕೆ ಸಮೀಪವಾಗುವುದರಿಂದ
ಅಲ್ಲಿಯೂ ವ್ಯಾಪಾರಕ್ಕೆ ಸೂಕ್ತ ವಾತಾವರಣವಿದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯ.

ವಾಹನ ದಟ್ಟಣೆ ಅಧಿಕ: ಈಗಿರುವ ತಾತ್ಕಾಲಿಕ ಮಾರುಕಟ್ಟೆ ಸಮೀಪ ವಾಹನ ನಿಲುಗಡೆಗೆ ಸ್ಥಳವಿಲ್ಲ. ಹೀಗಾಗಿ ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸುತ್ತಾರೆ. ಈ ರಸ್ತೆಯಲ್ಲಿ ಬಸವೇಶ್ವರ ಶಾಲೆ ಮತ್ತು ಕಾಲೇಜು ಇರುವುದರಿಂದ ಶಾಲಾ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಆಗ ವಾಹನ ದಟ್ಟಣೆ ಅಧಿಕವಾಗುತ್ತದೆ. ಈ ರಸ್ತೆಯು ಗೋಪಿ ವೃತ್ತ, ಪಾಲಿಕೆಗೆ ಸಂಪರ್ಕ ಕಲ್ಪಿಸುವುದರಿಂದ ಬೆಳಿಗ್ಗೆ ಮತ್ತು ಸಂಜೆ ವಾಹನ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತದೆ. ಇನ್ನು ಹಬ್ಬಗಳ ಸಮಯದಲ್ಲಿ ಈ ರಸ್ತೆಯಲ್ಲಿ ಕಾಲಿಡಲೂ ಸಾಧ್ಯವಾಗದಷ್ಟು ದಟ್ಟಣೆ ಉಂಟಾಗುತ್ತದೆ.

‘ಈಗಾಗಲೇ ಒಂದು ಬಾರಿ ಸ್ಥಳಾಂತರಗೊಂಡು, ಹಳೆ ತಾಲ್ಲೂಕು ಕಚೇರಿ ಜಾಗಕ್ಕೆ ಬಂದಿದ್ದೇವೆ. ಶಾಶ್ವತ ಮಾರುಕಟ್ಟೆ ನಿರ್ಮಾಣ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿಯೇ ಆರಂಭಿಸಬೇಕು’ ಎಂಬುದು ವ್ಯಾಪಾರಿಗಳ ಮನವಿ.

* * 

₹ 5.65 ಕೋಟಿ ವೆಚ್ಚದಲ್ಲಿ ಹೂವಿನ ಮಾರುಕಟ್ಟೆ ನಿರ್ಮಾಣವಾಗಲಿದೆ. ಪಾಲಿಕೆ ಹಲವು ಬಾರಿ ಟೆಂಡರ್ ಕರೆದರೂ ನಿರೀಕ್ಷಿತ ಅರ್ಜಿಗಳು ಬರದೆ, ಕಾರ್ಯ ತಡವಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು.
ಏಳುಮಲೈ, ಮೇಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT