ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೂ ಗುಣಮಟ್ಟದ ಆರೋಗ್ಯ ಸೇವೆ: ಸಿ.ಎಂ

Last Updated 20 ನವೆಂಬರ್ 2017, 10:32 IST
ಅಕ್ಷರ ಗಾತ್ರ

ಉಡುಪಿ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯು ಸರ್ಕಾರಿ ಆಸ್ಪತ್ರೆಯಾಗಿಯೇ ಮುಂದುವರೆಯಲಿದೆ. ಬಡವರಿಗೆ ಗುಣಮಟ್ಟದ ಸಂಪೂರ್ಣ ಉಚಿತ ಚಿಕಿತ್ಸೆ ಲಭ್ಯವಾಗಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ನಗರದ ಬೋರ್ಡ್‌ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು.

‘ಬಡಜನರಿಗೂ ಗುಣಮಟ್ಟದ ವೈದ್ಯಕೀಯ ಸೇವೆ ಸಿಗಬೇಕು ಎಂಬ ಒಂದೇ ಉದ್ದೇಶದಿಂದ ಉದ್ಯಮಿ ಬಿ.ಆರ್. ಶೆಟ್ಟಿ ಅವರ ಸಹಭಾಗಿತ್ವದಲ್ಲಿ ಪ್ರಸ್ತುತ 70 ಹಾಸಿಗೆ ಇರುವ ಆಸ್ಪತ್ರೆಯನ್ನು 200 ಹಾಸಿಗೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಶೆಟ್ಟರು ಕೇವಲ ಆಸ್ಪತ್ರೆಯನ್ನು ನಿರ್ವಹಣೆ ಮಾಡುವಂತಹ ಕೆಲಸ ಮಾಡುವರೇ ವಿನಾ, ಅದು ಅವರ ಆಸ್ಪತ್ರೆಯಲ್ಲ’ ಎಂದರು.

ಈಗ ಉದ್ಘಾಟನೆಯಾಗಿರುವ ಆಸ್ಪತ್ರೆಯಲ್ಲಿ ಜನವರಿ 15ರಿಂದ ಸೇವೆ ಲಭ್ಯವಾಗಲಿದೆ. ಇನ್ನು ನಿರ್ಮಾಣಗೊಳ್ಳಬೇಕಿರುವ 400 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬರುವ ಆದಾಯದಿಂದ ಈ ಆಸ್ಪತ್ರೆಯನ್ನು ನಿರ್ವಹಣೆ ಮಾಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವ ಬಡವರಿಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ ಎಂದು ಅವರು ಹೇಳಿದರು.

ಉಡುಪಿಯ ಇಂದಿರಾ ಕ್ಯಾಂಟೀನ್‌ಗೆ ಶಿಲಾನ್ಯಾಸ ನೆರವೇರಿಸಿದ ಅವರು, ‘ಜನವರಿ 1ರಿಂದ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಒಟ್ಟು 500 ಇಂದಿರಾ ಕ್ಯಾಂಟೀನ್ ಆರಂಭವಾಗಲಿವೆ. ಹಸಿವು ಮುಕ್ತ ಕರ್ನಾಟಕ ನಮ್ಮ ಗುರಿ’ ಎಂದರು.

ಆರೋಗ್ಯ ಸಚಿವ ರಮೇಶ್ ಕುಮಾರ್ ಮಾತನಾಡಿ, ‘ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ಜನಪರ ಕಾರ್ಯದ ಒಂದು ಭಾಗ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಂತಹ ಕೆಲಸವನ್ನು ವಿರೋಧಿಸುತ್ತಿವೆ. ಅನ್ನ ಭಾಗ್ಯ ಯೋಜನೆ ಜಾರಿಗೊಳಿಸಿದಾಗಲೂ ಜನರು ಸೋಮಾರಿಗಳಾಗುತ್ತಾರೆ. ರಾಜ್ಯದ ಖಜಾನೆ ಖಾಲಿ ಆಗುತ್ತದೆ ಎಂದು ಅಪಪ್ರಚಾರ ಮಾಡಿದ್ದರು’ ಎಂದು ಹೇಳಿದರು.

ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ‘ಈ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ತೊಂದರೆಯಾದರೆ ಅಥವಾ ಚಿಕಿತ್ಸೆ ನಿರಾಕರಿಸಿದರೆ ನಾನೇ ಮೊದಲು ಧರಣಿ ನಡೆಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ಮೀನುಗಾರರ ಸಬ್ಸಿಡಿಗೆ ₹12 ಕೋಟಿ ಬಿಡುಗಡೆ
‘ಮಹಿಳಾ ಮೀನುಗಾರರ ಸಾಲದ ಮೊತ್ತದ ಮೇಲಿನ ಸಬ್ಸಿಡಿಗಾಗಿ ₹12 ಕೋಟಿಯನ್ನು ಈ ಕೂಡಲೇ ಬಿಡುಗಡೆ ಮಾಡಲಾಗುವುದು. ಮೀನುಗಾರ ಸಮುದಾಯಕ್ಕಾಗಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಯಾವುದೇ ಕಾರ್ಯಕ್ರಮ ರೂಪಿಸಿ ಪ್ರಸ್ತಾವನೆ ಸಲ್ಲಿಸಿದರೂ ಅದಕ್ಕೆ ಒಪ್ಪಿಗೆ ನೀಡುತ್ತೇನೆ. ಮೀನುಗಾರರಿಗೆ ಪಿಂಚಣಿ ನೀಡುವ ಬಗ್ಗೆ ಪರಿಶೀಲನೆ ಮಾಡಲಾಗುವುದು. ಮಾತು ಕೊಟ್ಟ ಮೇಲೆ ಅದನ್ನು ಮಾಡಿ ತೋರಿಸುವ ಬದ್ಧತೆ ನನ್ನದು’ ಎಂದು ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ ಏರ್ಪಡಿಸಿದ್ದ ಮಹಿಳಾ ಮೀನುಗಾರರ ಸಮಾವೇಶದಲ್ಲಿ ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಬೆಂಕಿ ಹಾಕುವುದನ್ನು ಬಿಟ್ಟು ಪರಿವರ್ತನೆಯಾಗಲಿ
ಉಡುಪಿ: ‌ಧರ್ಮ– ಜಾತಿಗಳ ಮಧ್ಯೆ ಬೆಂಕಿ ಹಾಕುವ ಬಿಜೆಪಿ ನಾಯಕರು ಮೊದಲು ಪರಿವರ್ತನೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ‘ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವುದಾಗಿ ಹೇಳಿ ಬಿಜೆಪಿ ಪರಿವರ್ತನಾ ಯಾತ್ರೆ ನಡೆಸುತ್ತಿದೆ. ಮನುಷ್ಯರನ್ನು ದ್ವೇಷಿಸುವ ಬಿಜೆಪಿ ಮುಖಂಡರು, ಮಾನವೀಯತೆ ಬೆಳೆಸಿಕೊಂಡು ಪರಿವರ್ತನೆಯಾಗಬೇಕು. ಸಹಬಾಳ್ವೆಗೆ ಅವಕಾಶ ನೀಡಿರುವ ನಾವು ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಕೆಲಸ ಮಾಡುತ್ತಿದ್ದೇವೆ’ ಎಂದರು.

ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡದಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕೃಷ್ಣ ಮಠಕ್ಕೆ ಈ ಹಿಂದೆ ಹೋಗಿದ್ದೆ, ಈಗ ಹೋಗುತ್ತಿಲ್ಲ. ನನ್ನನ್ನು ಯಾರೂ ಕರೆದಿಲ್ಲ. ದೇವಸ್ಥಾನಕ್ಕೆ ಹೋಗುವುದು ಅವರವರ ನಂಬಿಕೆಗೆ ಬಿಟ್ಟ ವಿಷಯ. ಉದ್ದೇಶ ಪೂರ್ವಕವಾಗಿಯೇ ಮಠಕ್ಕೆ ಹೋಗುತ್ತಿಲ್ಲ ಎಂಬುದರಲ್ಲಿ ಸತ್ಯ ಇಲ್ಲ. ನಾನೂ ಕೃಷ್ಣ, ಈಶ್ವರ ಭಕ್ತನೇ’ ಎಂದರು. ಮದ್ಯ ನಿಷೇಧದ ಪ್ರಸ್ತಾವನೆ ಇಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT