ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡ–ಮಳೆ: ದ್ರಾಕ್ಷಿ ಬೆಳೆಗೆ ರೋಗ ಉಲ್ಬಣ ಭೀತಿ

Last Updated 20 ನವೆಂಬರ್ 2017, 10:40 IST
ಅಕ್ಷರ ಗಾತ್ರ

ವಿಜಯಪುರ: ಹವಾಮಾನದಲ್ಲಿ ಏಕಾಏಕಿ ಬದಲಾವಣೆ ಆಗಿದ್ದರಿಂದ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದೆ. ಇಂಥ ವಾತಾವರಣದಿಂದ ದ್ರಾಕ್ಷಿ ಬೆಳೆಗೆ ರೋಗ ಕಟ್ಟಿಟ್ಟ ಬುತ್ತಿ. ಸಾಲದೆಂಬಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಮಳೆಯಾಗಿದ್ದು, ಬೆಳೆಗಾರರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಅ. 17ರ ಬಳಿಕ ಮಳೆ ಸಂಪೂರ್ಣ ಬಿಡುವು ನೀಡಿತ್ತು. ಶುಭ್ರ ಆಗಸವಿದ್ದುದರಿಂದ ಈ ತಿಂಗಳ ಅವಧಿಯಲ್ಲಿ ದ್ರಾಕ್ಷಿ ಬೆಳೆ ಚೇತರಿಸಿಕೊಂಡಿತ್ತು.ಅಲ್ಲದೇ ಬೆಳೆಗಾರರಲ್ಲಿ ಸಾಕಷ್ಟು ಭರವಸೆಯನ್ನೂ ಮೂಡಿಸಿತ್ತು. ಆದರೆ, ಇದೀಗ ಏಕಾಏಕಿ ಮೋಡ ಮುಸುಕಿದೆ. ಸೋಮವಾರ–ಮಂಗಳವಾರವೂ ಮಳೆ ಸುರಿಯುವ ಸಾಧ್ಯತೆ ಇದೆ. ಜತೆಗೆ ವಾರಪೂರ್ತಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂಬ ಹವಾಮಾನ ಮುನ್ಸೂಚನೆ ಅವರನ್ನು ಅಧೀರರನ್ನಾಗಿ ಮಾಡಿದೆ.

‘ಮೋಡ ಕವಿದ ವಾತಾವರಣ ಮುಂದುವರಿದರೆ, ದ್ರಾಕ್ಷಿ ಬೆಳೆಗಾರರು ಸಂಪೂರ್ಣ ನೆಲಕಚ್ಚಿದಂತೆಯೇ. ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ಸುರಿದ ವ್ಯಾಪಕ ಮಳೆಗೆ ಶೇ 30ರಷ್ಟು ಬೆಳೆ ಹಾನಿಯಾಗಿತ್ತು. ಉಳಿದದ್ದು ಚೇತರಿಸಿಕೊಳ್ಳುವ ಹೊತ್ತಿಗೆ ಮತ್ತೆ ಸಂಕಷ್ಟ ಎದುರಾಗಿದೆ’ ಎಂದು ಬಸವನಬಾಗೇವಾಡಿ ತಾಲ್ಲೂಕು ಕೊಲ್ಹಾರದ ದ್ರಾಕ್ಷಿ ಬೆಳೆಗಾರ ಸಿದ್ದಪ್ಪ ದುಂಡಪ್ಪ ಬಾಲಗೊಂಡ ಅಳಲು ತೋಡಿಕೊಂಡರು.

‘ಈ ವಾತಾವರಣದಿಂದ ದ್ರಾಕ್ಷಿಗೆ ಬಲುಬೇಗ ರೋಗ ಬಾಧಿಸುತ್ತದೆ. ಒಮ್ಮೆ ದವಣಿ ರೋಗ ಕಂಡುಬಂದರೆ ಬುರಿ ಬಾಧೆಯೂ ಹೆಚ್ಚುತ್ತದೆ. ಇದರ ಜತೆಗೆ ಕೀಟಪೀಡೆಯೂ ಹೆಚ್ಚಾಗಲಿದೆ’ ಎಂದು ವಿಜಯಪುರ ತಾಲ್ಲೂಕು ಉಪ್ಪಲದಿನ್ನಿಯ ಸೋಮನಾಥ ಬಿರಾದಾರ ಹೇಳಿದರು.

‘ದ್ರಾಕ್ಷಿ ಬೆಳೆಗಾರರ ತ್ರಾಸು ತಪ್ಪದು. ದವಣಿಯು ಎಲೆಗಳಿಗೆ, ಗೊನೆಗೆ ತಗುಲುವುದರಿಂದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಬುರಿ ಬಾಧೆ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕೀಡೆಯು ಗೊನೆಯಲ್ಲಿನ ದ್ರಾಕ್ಷಿ ಕಾಯಿ ತಿಂದು ಹಾಳು ಮಾಡುತ್ತದೆ. ಎಷ್ಟೇ ಔಷಧಿ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುವುದಿಲ್ಲ’ ಎಂದರು.

‘ಸತತ ನಷ್ಟವನ್ನೇ ಅನುಭವಿಸಿದ್ದೆ. ಈ ಸಲದ ಬೆಳೆ ಮಳೆ–ಮೋಡದ ವಾತಾವರಣಕ್ಕೆ ಸಿಲುಕಬಾರದು ಎಂದು ತಡವಾಗಿ ಅಕ್ಟೋಬರ್‌ ಅಂತ್ಯಕ್ಕೆ ಚಾಟ್ನಿ ಮಾಡಿದ್ದೆ. ಗಿಡದಲ್ಲಿ ಹೂವು ಕೂಡ ಚೆನ್ನಾಗಿ ಬಂದಿತ್ತು. ವಾತಾವರಣ ಬದಲಾಗಿದ್ದು, ಗಿಡಕ್ಕೆ ದವಣಿ, ಕೀಡೆ ಬಾಧಿಸುತ್ತಿದೆ. ವ್ಯಾಪಕ ಪ್ರಮಾಣದಲ್ಲಿ ಹೂವು ಉದುರುತ್ತಿದೆ’ ಎಂದು ಇಂಡಿ ತಾಲ್ಲೂಕಿನ ಕಪನಿಂಬರಗಿ ಗ್ರಾಮದ ದಾದಾಗೌಡ ಖಾನಾಪುರ ಆತಂಕ ವ್ಯಕ್ತಪಡಿಸಿದರು.

‘ಗೊನೆಯ ತುದಿ ಒಣಗಿ ಮುರುಟಿಗೊಳ್ಳುತ್ತಿದೆ. ಇಂಥ ವಾತಾವರಣದಲ್ಲಿ ಎಷ್ಟು ಔಷಧಿ ಸಿಂಪಡಿಸಿದರೂ ನಾಟುವುದಿಲ್ಲ. ನಿತ್ಯ ₹ 5000ದಿಂದ ₹ 10,000 ಖರ್ಚು ಮಾಡಿ ಔಷಧಿ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಮುನ್ನೆಚ್ಚರಿಕೆ ಕ್ರಮ
‘ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆಗೆ ರೋಗ ಹೆಚ್ಚು. ವಾತಾವರಣದಲ್ಲಿ ಕೊಂಚ ಏರುಪೇರಾದರೂ ರೋಗ ಉಲ್ಬಣಿಸುತ್ತದೆ. ಬೆಳೆಗಾರರು, ಈಗ ಸಿಂಪಡಿಸುತ್ತಿರುವ ಔಷಧಿಗಳ ಜತೆಗೆ ಮತ್ತಷ್ಟು ಔಷಧಿ ಸಿಂಪಡಿಸಿ, ನಿಯಂತ್ರಣಕ್ಕೆ ಮುಂದಾಗಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಸ್‌.ಆರ್‌.ಕುಮಾರಸ್ವಾಮಿ ತಿಳಿಸಿದರು.

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಲಹೆಯಂತೆ, ರೋಗ ನಿಯಂತ್ರಣದ ಮಾಹಿತಿಯನ್ನು ಈಗಾಗಲೇ ರೈತರಿಗೆ ನೀಡಲಾಗಿದೆ ಎಂದೂ ಹೇಳಿದರು.

* * 

ಈಗ ಯಾವ ಬೆಳೆಗೂ ಮಳೆ ಬೇಕಿರಲಿಲ್ಲ; ಬಂದು ತ್ರಾಸು ಹೆಚ್ಚಿಸಿತು. ಪ್ರಕೃತಿಯ ಮುಂದೆ ನಾವು ಅಸಹಾಯಕರು
ಸಿದ್ದಪ್ಪ ದುಂಡಪ್ಪ ಬಾಲಗೊಂಡ, ಕೊಲ್ಹಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT