ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆದ ಅಂಚೆ

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮಾನವೀಯತೆಗೆ ಬೆಲೆಯಿದೆ

ಬಿ. ಬಸವರಾಜು ಹನೂರು ಅವರ ‘ದೇವರಾದರು ಈ ಸಾಹೇಬರು’ ಲೇಖನ ನಿಷ್ಕಾಮ ಕರ್ಮಕ್ಕೆ ಎಷ್ಟೊಂದು ಬೆಲೆ ಎಂಬುದನ್ನು ತೋರಿಸಿದೆ. ಡಿಸಿಎಫ್ ಅರಣ್ಯಾಧಿಕಾರಿ ಪಿ. ಶ್ರೀನಿವಾಸ ಅವರ ಸೇವೆ ಇಂದಿಗೂ ಜನರ ಮನದಾಳದಲ್ಲಿ ಉಳಿದು, ಅವರು ದೇವರಾಗಿದ್ದುದನ್ನು ಲೇಖನ ಸಮರ್ಥವಾಗಿ ಕಟ್ಟಿಕೊಟ್ಟಿದೆ.

-ಮಲ್ಲಿಕಾರ್ಜುನ ಗಚ್ಚಿ, ಗೋಗಿ

ದೇವರಾದರು ಈ ಸಾಹೇಬರು ಲೇಖನ ಮಾದರಿಯಾಗಿ ಮೂಡಿಬಂದಿದೆ. ‌ಮನುಷ್ಯ ಹುಟ್ಟುವುದು ಸಹಜ, ಸಾಯುವುದು ಸಹಜ. ಆದರೆ ಜೀವಂತವಿದ್ದಾಗ ಸಮಾಜಕ್ಕೆ ಏನು ಮಾಡಿದನು ಎಂಬುದನ್ನು ನೆನಪಿಸಿಕೊಳ್ಳುವಂತಿದೆ.

–ರವಿ ಶಿವಪ್ಪ ಬೀಳಗಿ

ಸರ್ಕಾರಿ ನೌಕರರೆಂದರೆ ಜನಸ್ನೇಹಿ ಎಂಬ ನಂಬಿಕೆ ಕಳೆದುಹೋಗುತ್ತಿರುವ ಸಂದರ್ಭದಲ್ಲಿ ಗೋಪಿನಾಥಂ ಸಮೀಪದ ಎರಕೆಯೆಂ ಅರಣ್ಯ ಪ್ರದೇಶದ ಡಿ.ಸಿ.ಎಫ್ ಶ್ರೀನಿವಾಸ್ ಅವರು ಕರ್ತವ್ಯದ ಪರಿಮಿತಿ ದಾಟಿ ಜನೋಪಕಾರಿ ಕಾರ್ಯಗಳಲ್ಲಿ ತೊಡಗಿದ್ದು ಹೆಮ್ಮೆ ಮೂಡಿಸಿತು. ಜನಮನ ಗೆದ್ದ ಅವರನ್ನು ಜನತೆ ಇಂದಿಗೂ ದೇವರಂತೆ ಆರಾಧಿಸುತ್ತಿರುವ ವಿಷಯ ಆಶ್ಚರ್ಯ. ಹಾಗೆಯೇ ಸರ್ಕಾರಿ ನೌಕರರಿಗೆ ಬಹುದೊಡ್ಡ ಪ್ರೇರಣೆ.

–ಸುಮಂತ ಎಂ.

ಯುವಕರಿಗೆ ಸ್ಫೂರ್ತಿ

ಕೃಷಿ ಕಣಜದಲ್ಲಿ ಪ್ರಕಟವಾದ ‘ಕೃಷಿ ಪಾಠದ ಟೀಚರ್’ (ಮಲ್ಲಿಕಾರ್ಜುನ ಹೊಸಪಾಳ್ಯ) ಲೇಖನ ಓದಿ ಬಹಳ ಸಂತೋಷವಾಯಿತು. ಅರುಣಾ ಟೀಚರ್‌ ಸಾಧನೆ ಮೆಚ್ಚಬೇಕಾದದ್ದೇ. ಇಬ್ಬರು ತಂಗಿಯರಿಗೆ ಜೀವನದ ಹಾದಿ ತೋರಿಸಿ ಜಮೀನಿನಲ್ಲಿ ಅಲ್ಪ ನೀರಿನಲ್ಲಿ ವಿವಿಧ ರೀತಿಯ ಬೆಳೆಯನ್ನು ಬೆಳೆದು ಉತ್ತಮ ರೀತಿ ಆದಾಯ ಗಳಿಸುವಲ್ಲಿ ಸಫಲರಾಗಿರುವುದು ಬೇರೆ ರೈತರಿಗೂ ಮಾದರಿ. ಉದ್ಯೋಗ ಅರಸಿ ಪಟ್ಟಣಕ್ಕೆ ಹೋಗುವ ಯುವಕರಿಗೆ ಅರುಣಾ ಟೀಚರ್ ಕಥೆ ಒಂದು ಪಾಠವಾಗಿದೆ.

–ಸಿ.ಶಿವಾನಂದಪ್ಪ, ಶಿವಮೊಗ್ಗ

ಹಾಸನದ ಕಡೆಯೂ ಇದೆ

ಬಳಕೂರು ವಿ.ಎಸ್. ನಾಯಕ್‌ ಅವರ ಹಿಬ್ಬಡಲು ಕುರಿತ ಲೇಖನ ಓದಿದೆ. ಇದನ್ನು ಹಾಸನದ ಕಡೆ ಚಕ್ಕರಿಕೆ ಎನ್ನುತ್ತಾರೆ. ಕಲ್ಲಂಗಡಿ ಹಣ್ಣಿನಂತೆ ಇದನ್ನು ಬೆಳೆಯಲಾಗುತ್ತದೆ. ವಿಶೇಷವೆಂದರೆ, ಹಣ್ಣು ಮೃದುವಾಗಿರುವುದರಿಂದ ತರಗಿನ ಪಟ್ಟಿಯಿಂದ ಹಣ್ಣನ್ನು ಸುತ್ತಲಾಗಿರುತ್ತದೆ. ಅದು ಹಾಸನದಿಂದ ಕರಾವಳಿಗೆ ಹೋಯಿತೋ ಇಲ್ಲ ಕರಾವಳಿಯಿಂದ ಹಾಸನಕ್ಕೆ ಬಂತೋ ತಿಳಿಯದು.

–ಎಸ್.ಎನ್ ಮಹಾಬಲರಾವ್, ನರಸಿಂಹರಾಜಪುರ

ಕಾಯಕಲ್ಪಕ್ಕೆ ಮುಂದಾಗಲಿ

ಗಣಂಗೂರು ನಂಜೇಗೌಡ ಅವರ ‘ಕುಸಿಯುತ್ತಿದೆ ಟಿಪ್ಪು ಕಟ್ಟಿಸಿದ ಕೋಟೆ’ ಲೇಖನ ಓದಿದೆ. ಬ್ರಿಟಿಷರ ವಿರುದ್ಧ ತೊಡೆತಟ್ಟಿ ಅವರಿಗೆ ಸಿಂಹಸ್ವಪ್ನವಾಗಿದ್ದ ‘ಟಿಪ್ಪುವಿನ ಕೋಟೆ’ ದಿನ ದಿನಕ್ಕೆ ಹೇಳುವವರು ಕೇಳುವವರಿಲ್ಲದೆ ನೆಲ ಹಿಡಿಯುತ್ತಿರುವುದನ್ನು ತಿಳಿದು ಖೇದವೆನಿಸಿತು. ಲೇಖನ ಅಂದಿನಿಂದ ಇಂದಿನವರೆಗಿನ ಏಳು ಬೀಳುಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದೆ.

–ಕೊಹಿಮ, ಬಸರಕೋಡು

ವೀರ ಹೋರಾಟಗಾರ, ಶತ್ರುಸೇನೆಯ ದಾಳಿಯಿಂದ ಅಂತಿಮ ಕ್ಷಣದಲ್ಲಿ ಕುಸಿದುಬಿದ್ದ ಸ್ಥಳವಾದ ವಾಟರ್ ಗೇಟ್ ಸ್ಥಿತಿ ಅಧೋಗತಿಯಲ್ಲಿರುವ ವಿಚಾರವನ್ನು ‘ಕುಸಿಯುತ್ತಿದೆ ಟಿಪ್ಪು ಕಟ್ಟಿಸಿದ ಕೋಟೆ’ ಲೇಖನ ಸಮರ್ಪಕವಾಗಿ ಕಟ್ಟಿಕೊಟ್ಟಿದೆ. ಅದರ ಕಾಯಕಲ್ಪಕ್ಕೆ ಸರ್ಕಾರ ತೀವ್ರ ರೀತಿಯಲ್ಲಿ ಮುಂದುವರೆಯಬೇಕು.

–ಕುಬೇರಪ್ಪ ಎಂ. ವಿಭೂತಿ, ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT