ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೋಲಿ ಗ್ಯಾಲರಿಯಲ್ಲಿ ಕಲಾಕೃತಿ ವೈವಿಧ್ಯ

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಎಂ.ಜಿ.ರಸ್ತೆಯ ರಂಗೋಲಿ ವಿಸ್ಮಯ ಆರ್ಟ್ ಗ್ಯಾಲರಿನಲ್ಲಿ ಈಚೆಗೆ ‘ಕಲರ್ಸ್ ಆಫ್ ಲೈಫ್’ ಶೀರ್ಷಿಕೆಯಡಿ ತೈಲವರ್ಣ ಮತ್ತು ಜಲವರ್ಣ ಕಲಾಕೃತಿಗಳು ಪ್ರದರ್ಶನಗೊಂಡವು. ನಗರದ ವೈಜಯಂತಿ ಬಿ.ದೇಸಾಯಿ, ಮುಂಬೈನ ಜಿತೇಂದ್ರ ರಮೇಶ್ ದಿವಟೆ, ಕೋಲ್ಕತ್ತದ ಕಲ್ಪರೂಪ್ ಪೌಲ್ ಅವರ ಕಲಾಕೃತಿಗಳೂ ಪ್ರದರ್ಶನದಲ್ಲಿದ್ದವು.

ಪ್ರದರ್ಶನದಲ್ಲಿದ್ದ ವೈಜಯಂತಿ ಅವರ ಹಲವು ಕಲಾಕೃತಿಗಳ ಪೈಕಿ ವಿವಿಧ ಬಣ್ಣಗಳ ಎಲೆಗಳಿದ್ದ ಮರವೊಂದರ ಚಿತ್ರ ಎಲ್ಲರ ಗಮನ ಸೆಳೆಯಿತು. ಹಸಿರ ಉಸಿರಿನಲ್ಲಿ ಮೈದಳೆದು ನಿಂತಿರುವ ಮರಗಳು, ತಳಿರು ತೋರಣದಂತೆ ಶುಭ ಕೋರುವ ರೆಂಬೆಕೊಂಬೆಗಳ ಚೆಲುವು, ಗಿಡಗಳು ನಾಟ್ಯ ಮಾಡಿದಂತೆ ನಳನಳಿಸುವ ವರ್ಣಮಯ ಸೊಬಗು ಮನಸಿಗೆ ಆಹ್ಲಾದ ನೀಡಿತು.

ಅಮೆರಿಕದ ಶೀತ ವಲಯದಲ್ಲಿರುವ ಹಸಿರಸಿರಿಯನ್ನು ಅವರು ಕುಂಚದಲ್ಲಿ ಸುಂದರವಾಗಿ ಸೆರೆಹಿಡಿದಿದ್ದಾರೆ. ತೈಲವರ್ಣ ಚಿತ್ರಗಳು ನೋಡುವ ಕಣ್ಣುಗಳಿಗೆ ಹಬ್ಬವೇ ಸರಿ. ಅವರ ಕಲಾಕೃತಿಗಳು ರಾಜ್ಯದ ವಿವಿಧೆಡೆ ಈಗಾಗಲೇ ಪ್ರದರ್ಶನಗೊಂಡು ಕಲಾರಸಿಕರ ಮೆಚ್ಚುಗೆ ಗಳಿಸಿವೆ. ಇವರ ಹಲವು ಕಲಾಕೃತಿಗಳಿಗೆ ಪ್ರಶಸ್ತಿಗಳೂ ಲಭಿಸಿವೆ.

ಈ ಕಲಾಕೃತಿಗಳನ್ನು ತಕ್ಷಣ ನೋಡಿದಾಗ ಛಾಯಾಚಿತ್ರಗಳಂತೆ ಭಾಸವಾಗುತ್ತವೆ. ವರ್ಣ ಸಂಯೋಜನೆಯಲ್ಲಿ ಸೂಕ್ಷ್ಮತೆ ಮತ್ತು ಸ್ಥಿರತೆಯನ್ನು ಕಾಯ್ದುಕೊಂಡಿದ್ದಾರೆ ವೈಜಯಂತಿ. ಬಾಲ್ಯದಿಂದಲೂ ಅವರಿಗೆ ಚಿತ್ರಕಲೆ ಹವ್ಯಾಸ. ಗುರುಗಳ ಮೂಲಕ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದವರಲ್ಲ. ಗಮನಿಸುವುದು ಮತ್ತು ಅನುಭವದಿಂದ ಕಲೆಯ ಮೆಟ್ಟಿಲುಗಳನ್ನು ಏರಿದರು. ತೈಲವರ್ಣ, ಜಲವರ್ಣ ಮಾಧ್ಯಮಗಳಲ್ಲಿ ಕಲಾಕೃತಿಗಳನ್ನು ಬಿಡಿಸುತ್ತಾರೆ. ಲ್ಯಾಂಡ್‌ಸ್ಕೇಪ್ ಅವರ ನೆಚ್ಚಿನ ಆಯ್ಕೆ.

ಮುಂಬೈನ ಜಿತೇಂದ್ರ ರಮೇಶ್ ದಿವಟೆ ಅವರು ಜಲವರ್ಣದಲ್ಲಿ ಪರಿಸರ, ಹಳೆಯ ಮನೆಗಳು, ಕಟ್ಟಡಗಳು, ವಾಯುವಿಹಾರ, ದೇವಸ್ಥಾನಗಳನ್ನು, ಚಿತ್ರಿಸಿದ್ದಾರೆ. ಸುತ್ತಲ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುವ ಅವರ ತಾಳ್ಮೆ ಮತ್ತು ಸೃಜನಶೀಲತೆ ಗಮನ ಸೆಳೆಯುತ್ತದೆ. ಬಿಡಿಸಿರುವ ಕಲಾಕೃತಿಗಳು ಕಟ್ಟಿಕೊಡುವ ಸೂಕ್ಷ್ಮವಿವರಗಳ ಕಾರಣ ಛಾಯಾಚಿತ್ರದಂತೆ ಪರಿಣಾಮ ಉಂಟುಮಾಡುತ್ತವೆ.

ಕೋಲ್ಕತ್ತದ ಕಲಾವಿದ ಕಲ್ಪರೂಪ ಪೌಲ್ ಅವರ ಕಲಾಕೃತಿಗಳಲ್ಲಿ ಹಳೆಯ ಕಟ್ಟಡಗಳು, ಇಕ್ಕಟ್ಟಾದ ಗೂಡ್‌ಶೆಡ್‌ಗಳು, ಅಂಕುಡೊಂಕುಗಳಾದ ಕಿರುದಾರಿಗಳು ಮೈದಳೆದಿವೆ. ಅಜ್ಜಿಯೊಬ್ಬರ ಚಿತ್ರ ಮತ್ತು ನಿತ್ಯ ಜೀವನದ ಹಲವು ಸನ್ನಿವೇಶಗಳು ಮತ್ತೆಮತ್ತೆ ನೋಡಬೇಕು ಎನಿಸುವಷ್ಟು ಸೊಗಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT