ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಬದಲಿಸಿತು ಮಗಳ ನಗು

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನನ್ನ ಮಗಳು ಹುಟ್ಟಿ ಮೂರು ತಿಂಗಳಾಗಿದೆ. ಅವಳ ಆಟ-ಚಲನವಲನಗಳನ್ನು ಈಗಷ್ಟೇ ಎಂಜಾಯ್ ಮಾಡುತ್ತಿದ್ದೇನೆ. ನನ್ನ ಮಗಳು ನನಗೆ ಮೊದಲು ಕಲಿಸಿದ್ದು ತಾಳ್ಮೆಯ ಪಾಠ. ಹಾಗಂತ ನನಗೆ ತಾಳ್ಮೆ ಇರಲಿಲ್ಲ ಅಂತಲ್ಲ. ಮಗಳು ಹುಟ್ಟಿದ ಮೇಲೆ ತಾಯಿಯಾಗಿ ನನ್ನ ತಾಳ್ಮೆ ದುಪ್ಪಟ್ಟಾಯಿತು.

ಇನ್ನು ಎರಡನೆಯ ಪಾಠ ಅಂದರೆ ತ್ಯಾಗದ ಮನೋಭಾವ. ಅವಳು ನನ್ನ ಹೊಟ್ಟೆಯಲ್ಲಿದ್ದಾಗಲೇ ತ್ಯಾಗದ ಮನೋಭಾವ ರೂಢಿಯಾಯಿತು. ಬಹುಶಃ ಎಲ್ಲಾ ತಾಯಂದಿರಿಗೂ ಈ ಮನೋಭಾವ ಗೊತ್ತಿಲ್ಲದಂತೆಯೇ ಬಂದುಬಿಡುತ್ತೆ ಅನಿಸುತ್ತೆ. ಈ ಹಿಂದೆ ಬರೀ ನನ್ನ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ಆದರೆ, ಈಗ ಹಾಗಲ್ಲ. ಮನೆಯಲ್ಲಿರುವ ಎಲ್ಲರ ಬಗ್ಗೆಯೂ ಗೊತ್ತಿಲ್ಲದಂತೆಯೇ ಕಾಳಜಿ ಬಂದುಬಿಟ್ಟಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಮಗುವೊಂದು ಮನೆಯಲ್ಲಿ ಇದ್ದರೆ ಮನುಷ್ಯನ ಮಾನಸಿಕ ಸ್ಥಿತಿಯಲ್ಲಿ (ಸೈಕಾಲಜಿ) ಏನೇನು ಬದಲಾವಣೆ ಆಗುತ್ತೆ ಅನ್ನೋದು ತಿಳಿಯುತ್ತಿದೆ. ನನ್ನಪ್ಪ ಅಮ್ಮ ಈಗ ಅಜ್ಜ-ಅಜ್ಜಿಯಾಗಿದ್ದಾರೆ. ಅವರಿಬ್ಬರೂ ನನ್ನ ಮಗಳನ್ನು ಆಡಿಸುವುದನ್ನು ನೋಡಿದಾಗ ಅರೆ, ಅಪ್ಪ, ಅಮ್ಮ ಹೀಗೆಲ್ಲಾ ಮಾಡ್ತಾರಾ ಅಂತ ಅಚ್ಚರಿ ಅನಿಸುತ್ತೆ. ನನ್ನ ಅಪ್ಪನಂತೂ ಮೊಮ್ಮಗಳನ್ನು ಬಿಟ್ಟಿರೋದೇ ಇಲ್ಲ. ಅಷ್ಟೊಂದು ಹಚ್ಚಿಕೊಂಡು ಬಿಟ್ಟಿದ್ದಾರೆ. ಅವಳನ್ನು ‘ಸ್ಮೈಲಿಂಗ್ ಕ್ವೀನ್’ ಅಂತಾನೇ ಕರೀತಾರೆ.

ನನ್ನ ಮಗಳೇ ಈಗ ನನಗೆ ಗುರುವಾಗಿಬಿಟ್ಟಿದ್ದಾಳೆ. ‘ಮನುಜಂಗೆ ಮಗು ತಂದೆ’ ಅನ್ನುವ ಮಾತು ನಿಜವಾಗುತ್ತಿದೆ. ಅದರ ಅನುಭೂತಿ ಹಂತಹಂತವಾಗಿ ಆಗುತ್ತಿದೆ. ಸಿನಿಮಾರಂಗ ನನಗೆ ಮೊದಲೇ ಸಹನೆಯ ಪಾಠ ಕಲಿಸಿತ್ತು. ಆದರೆ, ಮಗಳು ಇನ್ನಷ್ಟು ಸಹನೆ ಕಲಿಸಿದ್ದಾಳೆ. ಅವಳು ನಮ್ಮ ಬದುಕಿನಲ್ಲಿ ಬರುವುದಕ್ಕಿಂತ ಮುಂಚೆ ನಾವೆಲ್ಲಾ ಒಂದು ರೀತಿಯ ಕಂಫರ್ಟ್ ಜೋನ್ ಅಂತಾರಲ್ಲ, ಆ ಥರ ಇದ್ವಿ. ಆದರೆ, ಅವಳಿಂದಾಗಿ ಈಗ ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಬಂದುಬಿಟ್ಟಿದೆ.

ನನಗೆ ಹೆರಿಗೆ ಆದ ತಕ್ಷಣವೇ ಆ ಭಾವ ಬಂದುಬಿಟ್ಟಿದೆ ಅನ್ನಿಸುತ್ತೆ. ಹೆರಿಗೆಯಾದ ಮೂರು ದಿನಗಳ ಕಾಲ ನಾನು ಸರಿಯಾಗಿ ನಿದ್ದೆಯನ್ನೂ ಮಾಡಲಾಗಿರಲಿಲ್ಲ. ನನ್ನ ತಾಯಿ ಆತಂಕಗೊಂಡುಬಿಟ್ಟಿದ್ದರು. ಕನಿಷ್ಠ ಹತ್ತು ನಿಮಿಷವಾದರೂ ಮಲಗಮ್ಮ ಅಂತ ಹೇಳುತ್ತಿದ್ದರು. ಆದರೆ, ನನಗೋ ಸದಾ ಮಗಳದ್ದೇ ಧ್ಯಾನ. ಅವಳ ಪ್ರತಿಕ್ಷಣವನ್ನೂ ಕಣ್ತುಂಬಿಕೊಳ್ಳುವ ಬಯಕೆ. ರೆಪ್ಪೆ ಮುಚ್ಚದೇ ಅವಳನ್ನು ನೋಡುವುದೇ ನನ್ನ ಕಾಯಕವಾಗಿಬಿಟ್ಟಿತ್ತು. ಅವಳಿಗೆ ಹಾಲು ಕುಡಿಸುವುದು, ಮುದ್ದು ಮಾಡುವುದರಲ್ಲಿ ನಿದ್ದೆಯ ಪರಿವೆಯೇ ಇರಲಿಲ್ಲ. ಆ ಸಂಭ್ರಮದಲ್ಲಿ ನನ್ನ ಹೆರಿಗೆಯ ನೋವೆಲ್ಲಾ ಮಾಯವಾಗಿ ತಾಯ್ತನದ ಸಂತಸ ಆವರಿಸಿತ್ತು. ಪ್ರಕೃತಿ ತಾಯಿಯೊಳಗೆ ಇಂಥ ಅದ್ಭುತ ಶಕ್ತಿಯನ್ನು ಕೊಟ್ಟಿದೆಯಲ್ಲಾ ಅಂತ ಅಚ್ಚರಿ ಆಯಿತು.

ದೇವರ ದಯೆಯೋ, ನನ್ನ ಅದೃಷ್ಟವೋ ಗೊತ್ತಿಲ್ಲ. ನನ್ನ ಮಗಳು ಸದಾ ನಗುತ್ತಲೇ ಇರುತ್ತಾಳೆ. ಸೌಮ್ಯವಾದ ಮಗು. ಪ್ರತಿಸಲವೂ ಮಲಗಿ ಏಳುವಾಗ ನಗುತ್ತಲೇ ಏಳುತ್ತಾಳೆ. ಇತರ ಮಕ್ಕಳು ಅತ್ತು ರಂಪ ಮಾಡುತ್ತಾ ಎದ್ದರೆ ಇವಳದ್ದು ಸದಾ ನಗುಮುಖ. ಗೊತ್ತಿದ್ದವರು, ಸಂಬಂಧಿಕರು ಮಕ್ಕಳ ಬಗ್ಗೆ ಏನೋನೊ ಹೇಳಿಬಿಟ್ಟಿದ್ದರು. ಅದನ್ನೆಲ್ಲಾ ಕೇಳಿ ಗಾಬರಿ ಆಗಿದ್ದೆ. ಆದರೆ, ಇವಳು ತುಂಬಾ ಜಾಣೆ. ನನಗೆ ತೊಂದರೆ ಕೊಟ್ಟಿಲ್ಲ. ಇವಳಿಂದಾಗಿ ಜೀವನ ಎಷ್ಟೊಂದು ಸುಂದರವಾಗಿದೆ ಅನಿಸತೊಡಗಿದೆ. ನಾನಷ್ಟೇ ಅಲ್ಲ ನನ್ನ ಗಂಡನ ನಡವಳಿಕೆಯಲ್ಲೂ ಇವಳು ಬದಲಾವಣೆ ತಂದಿದ್ದಾಳೆ ಗೊತ್ತಾ? ನನ್ನ ಗಂಡ ಅಂತೂ ಮೊದಲೇ ತಾಯಿ ಮನಸಿನವರು. ಮಗಳಿಂದಾಗಿ ಅವರು ಮತ್ತಷ್ಟು ಪ್ರಬುದ್ಧರಾಗಿದ್ದಾರೆ.

‘ಅಯ್ಯೋ, ನಾನೂ ಹಾಲು ಕುಡಿಸುವಂತಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು’ ಅಂತಾರೆ. ಅವರೀಗ ಒಳ್ಳೆಯ ಅಪ್ಪ.

ಮಗುವಿನ ಜವಾಬ್ದಾರಿಯನ್ನು ಇಬ್ಬರೂ ಸರಿಸಮವಾಗಿ ನಿರ್ವಹಿಸುತ್ತಿದ್ದೇವೆ. ಅದೆಲ್ಲಾ ಹೇಳಿಕೊಟ್ಟು ಬಂದಿಲ್ಲ. ಸಹಜವಾಗಿಯೇ ನಮಗೆ ಗೊತ್ತಿಲ್ಲದಂತೆಯೇ ಬಂದುಬಿಟ್ಟಿದೆ. ಎಷ್ಟೋ ಬಾರಿ ನಾನು ಏಳಿಸುವುದಕ್ಕಿಂತ ಮುಂಚೆಯೇ ಅವರೇ ಎದ್ದು, ನೀನು ಮಲಗು, ನಾನು ಮಗುವನ್ನು ನೋಡಿಕೊಳ್ತೀನಿ ಅಂತಾರೆ ಪತಿ ಶ್ರೀವಾತ್ಸವ. ಸಾಮಾನ್ಯವಾಗಿ ಮಗು ಹುಟ್ಟಿದ ಮೇಲೆ ಗಂಡನ ಮೇಲಿನ ಪ್ರೀತಿ ಕಡಿಮೆಯಾಗುತ್ತದೆ ಅನ್ನುತ್ತಾರೆ. ಆದರೆ, ನನಗಂತೂ ಮಗಳು ಹುಟ್ಟಿದ ಮೇಲೆ ಗಂಡನ ಮೇಲಿನ ಪ್ರೀತಿ ದುಪ್ಪಟ್ಟಾಗಿದೆ.

ಮಗಳಿಂದಾಗಿ ನಾನು, ನನ್ನ ಗಂಡ ಇಬ್ಬರೂ ಎಷ್ಟೊಂದು ಬದಲಾಗಿಬಿಟ್ಟಿದ್ದೇವೆ. ನಮಗೀಗ ಯಾವ ಮಗುವನ್ನೇ ನೋಡಲಿ ನಮ್ಮ ಮಗುವನ್ನೇ ನೋಡಿದಂತೆ ಭಾಸವಾಗುತ್ತದೆ. ಮಗು ಇರದೇ ಇದ್ದಾಗ ಜೀವನ ಹೇಗೋ ನಡೆದು ಹೋಗುತ್ತಿತ್ತು. ಆದರೆ, ಈಗ ಹಾಗಲ್ಲ. ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂದು ಯೋಚಿಸುತ್ತೇವೆ. ಈ ಎಲ್ಲವೂ ಮೊದಲೇ ಇತ್ತು. ಆದರೆ, ಈಗ ಅದೆಲ್ಲಾ ಹೈಲೈಟ್ ಆಗುತ್ತಿದೆ. ಅದು ಮನವರಿಕೆ ಆಗುತ್ತಿದೆ. ಜೀವನದ ಬಗ್ಗೆ ಮನವರಿಕೆ ಆಗುವುದು ತುಂಬಾ ಮುಖ್ಯ. ಜೀವನ ಇಷ್ಟೊಂದು ಸುಂದರವಾಗಿದೆ ಎಂದು ಮನವರಿಕೆ ಮಾಡಿಕೊಟ್ಟ ನಮ್ಮ ಮುದ್ದು ಗುಂಡಮ್ಮ, ಗೋಲುಗೆ ಥ್ಯಾಂಕ್ಸ್... ಲವ್ ಯೂ ಮಗಳೇ... ಲವ್ ಯೂ ಜಿಂದಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT