ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬಂತು ಕೊಲೊಟಸ್‌

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಫ್ಯಾಷನ್‌ ಕ್ಷೇತ್ರ ಎಷ್ಟೇ ವೇಗ ಪಡೆದುಕೊಂಡಿದ್ದರೂ, ಧರಿಸಲು ಆರಾಮವೆನ್ನಿಸುವ ಉಡುಪುಗಳಿಗೇ ಪ್ರಾಧಾನ್ಯ. ಅದು ಹಳೆಯ ಕಾಲದ ಫ್ಯಾಷನ್‌ ಆಗಿದ್ದರೂ, ಹೊಸ ರೂಪದೊಂದಿಗೆ ಮಾರುಕಟ್ಟೆಗೆ ಬರುತ್ತದೆ. ಅಂತಹ ಉಡುಪುಗಳಲ್ಲಿ ಕೊಲೊಟಸ್‌ ಸಹ ಒಂದು.

ನೋಡಲು ಸ್ಕರ್ಟ್‌ನಂತೆ ಕಾಣುವ ಆದರೆ ಸ್ಕರ್ಟ್‌ ಅಲ್ಲದ, ಪಾಲಾಜೊ ರೀತಿಯಲ್ಲಿಯೇ ಇದ್ದರೂ, ಅದಕ್ಕಿಂತಲೂ ಭಿನ್ನವಾದ ಉಡುಪಿದು. ಋತುಮಾನದ ಹಂಗಿಲ್ಲದೆ ಎಲ್ಲಾ ಕಾಲಕ್ಕೂ ಸಲ್ಲುವುದೇ ಇದರ ಹೆಗ್ಗಳಿಕೆ.

ಮಂಡಿಯ ಅಥವಾ ಅದಕ್ಕಿಂತ ಸ್ವಲ್ಪ ಕೆಳಗೆ ದೊಗಲೆಯಾಗಿರುವ ಇದು ಸ್ಕರ್ಟ್‌ನಂತೆಯೂ ಕಾಣುತ್ತದೆ. ಫ್ಯಾಷನ್‌ ಕ್ಷೇತ್ರಕ್ಕೆ ಪಾಶ್ಚಿಮಾತ್ಯರ ಕೊಡುಗೆ ಅನನ್ಯ. ಇದು ಕೂಡ ಅವರದೇ ಕೊಡುಗೆ. ವಿದೇಶಗಳಲ್ಲಿ ಈ ರೀತಿಯ ಪ್ಯಾಂಟ್‌ ಸಿಕ್ಕಾಪಟ್ಟೆ ಟ್ರೆಂಡ್‌ ಸೃಷ್ಟಿಸಿದೆ.

ಕುಲೋಟ್ಟಿ ಎಂದರೆ ಫ್ರೆಂಚ್‌ನಲ್ಲಿ ಜೋಡಿ ಎಂದರ್ಥ. ಅಲ್ಲಿಂದಲೇ ಈ ಶೈಲಿಯ ಉಡುಪು ಪ್ರಚುರತೆ ಪಡೆಯಿತು. 1789ರಲ್ಲಿ ಫ್ರೆಂಚ್‌ ಕ್ರಾಂತಿಕಾರಿಗಳು ಈ ರೀತಿಯ ಪ್ಯಾಂಟ್‌ನ್ನು ಹೆಚ್ಚಾಗಿ ಧರಿಸುತ್ತಿದ್ದರು. ಯುರೋಪಿನ ಮಿಲಿಟರಿ ಉಡುಪು ಕೂಡ ಇದನ್ನೇ ಹೋಲುವಂತಿತ್ತು. ವಿಕ್ಟೋರಿಯಾ ರಾಣಿಯ ಕಾಲದಲ್ಲಿ ಇದು ತನ್ನ ಸ್ವರೂಪ ಬದಲಿಸಿಕೊಂಡು ಮಹಿಳೆಯರ ಉಡುಪಾಯಿತು. ಸ್ಕರ್ಟ್‌ ಧರಿಸಿ ಕುದುರೆ ಸವಾರಿ ಮಾಡುವುದು ಕಷ್ಟವಾದ್ದರಿಂದ ಆಗಿನ ಹೆಂಗಳೆಯರು ಈ ಪ್ಯಾಂಟಿನ ಸೆಳೆತಕ್ಕೆ ಒಳಗಾದರು.

ಹೀಗೆ ಜನಪ್ರಿಯತೆ ಗಳಿಸಿಕೊಂಡ ಇದು, ಹದಿನೆಂಟನೇ ಶತಮಾನದ ನಂತರ ಹೆಚ್ಚು ಬಳಕೆಗೆ ಬಂದಿತು. ಹಾಲಿವುಡ್‌ನ ಹಲವು ನಟಿಯರು ಇದರ ಮೋಡಿಗೆ ಒಳಗಾದವರೇ. ನೋಡಲು ಸರಳವಾಗಿದ್ದರೂ, ಶ್ರೀಮಂತ ನೋಟವನ್ನು ಇದು ನೀಡುತ್ತದೆ.

ಕೊಲೊಟಸ್‌ ಅನ್ನೇ ಬ್ರಿಟನ್ನಿನ್ ಕೆಲವು ಶಾಲೆಗಳಲ್ಲಿ ಮಕ್ಕಳ ಸಮವಸ್ತ್ರವನ್ನಾಗಿ ಮಾಡಿರುವುದು ವಿಶೇಷ. ಇದು ಆಧುನಿಕ ಮತ್ತು ಸಾಂಪ್ರದಾಯಿಕ ಎರಡೂ ಬಗೆಗೂ ಹೊಂದಿಕೊಳ್ಳುತ್ತದೆ. ಆಧುನಿಕ ನೋಟ ಬೇಕೆಂದರೆ ಈ ಪ್ಯಾಂಟ್‌ಗೆ ಕೋಲ್ಡ್‌ಶೋಲ್ಡರ್‌ ಅಥವಾ ಆಫ್‌ಶೋಲ್ಡರ್‌ ಶರ್ಟ್‌ ಧರಿಸಬಹುದು. ಕ್ಯಾಶುವಲ್‌ ನೋಟಕ್ಕೆ ತುಂಬುತೋಳಿನ ಶರ್ಟ್‌ ಹಾಕಿಕೊಳ್ಳಬಹುದು. ಪಾರ್ಟಿಗಳಿಗೂ ಇದನ್ನು ಧರಿಸಬಹುದು.

ಪಾರ್ಟಿ, ಕಚೇರಿ, ಶಾಪಿಂಗ್‌ ಹೀಗೆ ಎಲ್ಲಾ ಸಂದರ್ಭಗಳಿಗೂ ಹೊಂದಿಕೆಯಾಗುವ ಜೊತೆಗೆ ಕ್ರೀಡಾಪಟುಗಳಿಗೆ ಹೊಂದಿಕೆಯಾಗುವಂತಹ ಕೊಲೊಟಸ್‌ ಇವೆ. ಲೈನಿನ್, ಕ್ರೇಪ್, ಲೈಕ್ರಾ, ಶಿಫಾನ್, ಜರ್ಸಿಯಂತಹ ಹಿತವಾದ ಫ್ಯಾಬ್ರಿಕ್‌ಗಳಲ್ಲಿ ಇದು ತಯಾರಾಗುತ್ತದೆ. ಟಾಪ್‌ಗಳನ್ನು ಇನ್‌ ಮಾಡಿದರೂ ಚೆಂದ ಕಾಣುತ್ತದೆ.

ರಿಪ್ಡ್‌ , ಫ್ರಿಲ್‌, ನ್ಯಾರೊ ಸಿಲೌಟ್‌, ಜಂಪ್‌ ಸೂಟ್‌, ಕಾಂಪ್ಲೆಕ್ಸ್‌ ಡಿಟೇಲಿಂಗ್‌ ಹೀಗೆ ಹಲವು ವಿನ್ಯಾಸಗಳಲ್ಲಿ, ಬಣ್ಣಗಳಲ್ಲಿ, ಬಂದಿರುವ ಹೊಸ ರೂಪದ ಪ್ಯಾಂಟ್‌ಗಳಲ್ಲಿ ನಿಮಗೊಪ್ಪುವ ಆಯ್ಕೆಯನ್ನು ಮಾಡಿಕೊಳ್ಳಬಹುದು. ಪ್ಯಾಂಟ್‌ಗೆ ತಕ್ಕಂತೆ ಶರ್ಟ್‌ ಆಯ್ಕೆ ಮಾಡಿಕೊಳ್ಳುವುದು ಜಾಣ್ಮೆ. ಸಾಂಪ್ರದಾಯಿಕ ನೋಟ ಬೇಕಾದರೆ ರೇಷ್ಮೆ ವಸ್ತ್ರವನ್ನು ಹೋಲುವ ಪ್ಯಾಂಟ್‌ ಆಯ್ಕೆಮಾಡಬಹುದು.

ಸ್ಕರ್ಟ್‌ ಹಾಕಿಕೊಂಡಾಗ ಸ್ವಲ್ಪ ಎಚ್ಚರದಿಂದಿರಬೇಕು, ಇಲ್ಲವಾದರೆ ಮುಜುಗರಕ್ಕೀಡಾಗುವ ಸಂದರ್ಭ ಎದುರಾಗುತ್ತದೆ. ಆದರೆ ಈ ಪ್ಯಾಂಟ್‌ ಹಾಕಿಕೊಂಡಾಗ ಇಂತಹ ಸಮಸ್ಯೆ ಇರುವುದಿಲ್ಲ. ಇದು ಕೂಡ ಇದರ ಹೆಚ್ಚುಗಾರಿಕೆಗೆ ಕಾರಣ. ಹಾಗೆಯೇ ದಪ್ಪ, ಸಪೂರ ಇರುವವರಿಗೂ ಇದು ಹೊಂದಿಕೆಯಾಗುತ್ತದೆ.

ಹುಡುಗರಿಗೂ ಇದರಲ್ಲಿ ಆಯ್ಕೆಗಳಿವೆ. ಬರ್ಮೊಡಾ ಚಡ್ಡಿಯಂತೆ ಎನಿಸಿದರೂ, ಅದಕ್ಕಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಆದರೆ ವಿದೇಶಗಳಲ್ಲಿರುವಂತೆ ದೇಸಿ ಹುಡುಗರು ಇದರ ಮೋಡಿಗೆ ಒಳಗಾಗಿಲ್ಲ. ಇಲ್ಲಿ ಇದನ್ನು ಹಾಕುವವರು ಕಡಿಮೆಯೇ.

ಬಾಲಿವುಡ್‌ನ ಹಲವು ತಾರೆಯರು ಕುಲೋಟ ದಿರಿಸಿನಲ್ಲಿ ಮಿಂಚುತ್ತಿರುವುದನ್ನು ಹಲವು ಬಾರಿ ಕಂಡಿದ್ದೇವೆ. ಅದರಲ್ಲಿಯೂ ದೀಪಿಕಾ, ಆಲಿಯಾ, ಆತಿಯಾ ಶೆಟ್ಟಿ ಪದೇ ಪದೇ ಕುಲೋಟ ಧರಿಸುವ ಮೂಲಕ ಅದರ ಮೇಲಿನ ತಮ್ಮ ಪ್ರೀತಿಯನ್ನು ಸಾಕ್ಷಿಕರಿಸಿದ್ದಾರೆ.

ಮಕ್ಕಳಿಗಾಗಿಯೇ ವಿಧವಿಧ ಕೊಲ್ಲೋಟಸ್‌ಗಳಿವೆ. ನವೀನ ವಿನ್ಯಾಸದ ಈ ಉಡುಪಿನಲ್ಲಿಯೂ ಮಕ್ಕಳು ಇನ್ನಷ್ಟು ಮುದ್ದಾಗಿ ಕಾಣುವುದಂತೂ ಸತ್ಯ.

ಇದು ಯಾವುದೇ ಒಂದು ವಯಸ್ಸಿಗೆ ಸೀಮಿತವಾದ ಉಡುಗೆ ಅಲ್ಲ. ಹದಿನಾರರ ಯುವತಿಯರಿಂದ ಹಿಡಿದು 40ರ ನಡುವಯಸ್ಸಿನ ಮಹಿಳೆಯರವರೆಗೂ ಇದು ಒಪ್ಪುತ್ತದೆ. ಯುವತಿಯರಿಗಾದರೆ ಈ ಪ್ಯಾಂಟುಗಳ ಜೊತೆಗೆ ಟಿ–ಶರ್ಟ್‌, ಕ್ಯಾಶುವಲ್‌ವೇರ್‌ ಉತ್ತಮವಾಗಿ ಹೊಂದುತ್ತವೆ. ನಡು ವಯಸ್ಸಿನ ಮಹಿಳೆಯರಿಗಾದರೆ ದೊಗಲೆ ಶರ್ಟುಗಳನ್ನು ಆರಿಸಿಕೊಳ್ಳಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT