ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನಕ್ಕಿಂತ ಮನುಷ್ಯತ್ವ ಮೇಲ್ದರ್ಜೆಗೇರಲಿ

ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಅಧ್ಯಾತ್ಮ ಗುರು ಸದ್ಗುರು ಜಗ್ಗಿ ವಾಸುದೇವ ಅಭಿಪ್ರಾಯ
Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಜನರ ಬದುಕು ಮತ್ತು ಮನುಷ್ಯತ್ವವನ್ನು ಉನ್ನತ ಸ್ಥಾನಕ್ಕೇರಿಸದೆ ಬರೀ ತಂತ್ರಜ್ಞಾನವನ್ನಷ್ಟೇ ಮೇಲ್ದರ್ಜೆಗೇರಿಸುತ್ತಿದ್ದರೆ ಅದು ಹಲವು ದುರಂತಗಳಿಗೆ ಎಡೆ ಮಾಡಿಕೊಡುತ್ತದೆ’ ಎಂದು ಸದ್ಗುರು ಜಗ್ಗಿ ವಾಸುದೇವ ಎಚ್ಚರಿಸಿದರು.

ನಗರದಲ್ಲಿ ಸೋಮವಾರ ರಾಮಯ್ಯ ಇಂಡಿಕ್‌ ಸ್ಪೆಷಾಲಿಟಿ ಆಯುರ್ವೇದ (ಆರ್‌ಐಎಸ್‌ಎ) ಪುನರ್‌ ಚಿಕಿತ್ಸಾ ಆಸ್ಪತ್ರೆ ಉದ್ಘಾಟಿಸಿ ನಂತರ ಅವರು, ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇಂದು ಎಲ್ಲರ ಕೈಯಲ್ಲೂ ಫೋನ್‌ಗಳಿವೆ. ಆದರೆ, ಶೇ 97ರಷ್ಟು ಜನರಿಗೆ ಮೊಬೈಲ್‌ಗಳಲ್ಲಿರುವ ಸಾಫ್ಟ್‌ವೇರ್‌ ಬಗ್ಗೆ ಅರಿವಿಲ್ಲ. ಸಣ್ಣಪುಟ್ಟ ಸಮಸ್ಯೆ ಎದುರಾದರೂ ಸರಿಪಡಿಸಿಕೊಳ್ಳುವ ಜ್ಞಾನವಿಲ್ಲ. ಮೊಬೈಲ್‌ಗಳಲ್ಲಿನ ಸಮಸ್ಯೆ ಸರಿಪಡಿಸುವ ಜ್ಞಾನ ಗೊತ್ತಿದ್ದರೆ ಅದು ಶೇ 3ರಷ್ಟು ಜನರಿಗೆ ಮಾತ್ರ’ ಎಂದರು.

‘ಅತ್ಯಾಧುನಿಕ ತಂತ್ರಜ್ಞಾನದ ಐಫೋನ್‌ 8, ಐಫೋನ್‌–10 ಸರಣಿಯ ಸ್ಮಾರ್ಟ್‌ ಫೋನ್‌ಗಳನ್ನು ಪಡೆಯುವುದೇ ನಿಜವಾದ ಸಾಧನೆಯಲ್ಲ. ಐಫೋನ್‌ –4ರ ಸರಣಿಯ ಫೋನ್‌ ಬಳಕೆ ಜ್ಞಾನವನ್ನು ಎಲ್ಲರಿಗೂ ಕಲಿಸಿದ್ದರೆ ಅದೇ ನಿಜವಾದ ಸಾಧನೆಯಾಗುತ್ತಿತ್ತು. ಮನುಷ್ಯರನ್ನು ಮತ್ತು ಅವರ ಬದುಕನ್ನು ಮೊದಲು ಮೇಲ್ದರ್ಜೆಗೇರಿಸದೆ, ತಂತ್ರಜ್ಞಾನ ಮೇಲ್ದರ್ಜೆಗೇರಿಸುತ್ತಾ ಸಾಗುವುದರಿಂದ ಅರ್ಥ ವ್ಯವಸ್ಥೆಯೂ ಬೆಳೆಯದು. ಮಹಾನ್ ದೇಶವನ್ನು ಕಟ್ಟಲೂ ಆಗದು’ ಎಂದರು.

‘ದೇಶದ ಶಿಕ್ಷಣ ವ್ಯವಸ್ಥೆ ಕೂಡ ಕವಲು ಹಾದಿಯಲ್ಲಿದೆ. ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿ ರೂಪಿಸಲಾಗುತ್ತಿದೆ. ಶೇ 98 ಅಂಕ ಗಳಿಸಿದರೂ ಪೋಷಕರು ಬಾಕಿ ಶೇ 2 ಅಂಕ ಎಲ್ಲಿ ಎಂದೇ ಕೇಳುತ್ತಾರೆ. ಮಕ್ಕಳನ್ನು ಬಾಲ್ಯದಿಂದಲೇ ಒತ್ತಡದಲ್ಲಿ ಬೆಳೆಸಲಾಗುತ್ತಿದೆ. 6 ವರ್ಷದಿಂದ 18 ವರ್ಷದೊಳಗೆ ಮಗು ಶಿಕ್ಷಣದಲ್ಲಿ ಎಲ್ಲವನ್ನೂ ಕಲಿಯಬೇಕೆಂದು ಬಯಸುತ್ತೇವೆ. ಶಿಕ್ಷಣವೆಂದರೆ ಇಂತಿಷ್ಟು ಅಂಕ ಸಂಪಾದಿಸಿ ತೇರ್ಗಡೆಯಾಗುವುದು ಎನ್ನುವಂತಾಗಿದೆ. ಶಿಕ್ಷಣದಲ್ಲಿ ನಿಜವಾದ ಬದುಕಿನ ಕಲಿಕೆ ಕಾಣಿಸುತ್ತಿಲ್ಲ’ ಎಂದರು.

‘ಉನ್ನತ ಶಿಕ್ಷಣವನ್ನು ಕೋರ್ಸ್‌ ಅವಧಿಯೊಳಗೆ ಕಲಿಯಲು ಆಗದಿದ್ದಾಗ, ಒಂದೆರಡು ವರ್ಷ ಹೆಚ್ಚು ತೆಗೆದುಕೊಳ್ಳಿ. ಇದರಿಂದ ಜಗತ್ತು ಮುಳುಗಿ ಹೋಗುವುದಿಲ್ಲ. ಗೊತ್ತಿಲ್ಲದ್ದನ್ನು ಕಲಿತು, ಜ್ಞಾನ ವಿಸ್ತರಿಸಿಕೊಂಡು, ಪರಿಪೂರ್ಣರಾಗಿ ಹೊರಹೊಮ್ಮಬೇಕು. ಉತ್ಕೃಷ್ಟ ದರ್ಜೆಯ ಪ್ರಜೆಗಳನ್ನು ರೂಪಿಸುವುದೂ ಶಿಕ್ಷಣದ ಧ್ಯೇಯವಾಗಬೇಕು' ಎಂದರು.

‘ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ 6ನೇ ತಗರತಿಯಿಂದಲೇ ಕಂಪ್ಯೂಟರ್‌ ಮತ್ತು ಇಂಗ್ಲಿಷ್‌ ಕಡ್ಡಾಯವಾಗಿ ಕಲಿಸಬೇಕು. ಇದರಿಂದ ಮುಂದಿನ ಹಂತದ ಶಿಕ್ಷಣ ಮತ್ತು ದೇಶದ ಅರ್ಥ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಲು ರಹದಾರಿ ಒದಗಿಸಿಕೊಟ್ಟಂತಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT