ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದನೋ ಕಲಾಧರ...

Last Updated 21 ನವೆಂಬರ್ 2017, 4:48 IST
ಅಕ್ಷರ ಗಾತ್ರ

ಭಾಗವತಿಕೆಯನ್ನು ನಿಮ್ಮ ವೃತ್ತಿಯನ್ನಾಗಿ ಯಾಕೆ ಆಯ್ಕೆ ಮಾಡಿಕೊಂಡಿರಿ? 

ನಾನು ರಂಗಭೂಮಿ ಕಲಾವಿದ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಕಲಿತಿದ್ದೇನೆ. ನನ್ನ ತಂದೆ ಹವ್ಯಾಸಿ ಯಕ್ಷಗಾನ ಕಲಾವಿದ. ಹೀಗಾಗಿ ಭಾಗವತಿಕೆಯನ್ನು ನನ್ನ ವೃತ್ತಿಯಾಗಿ ಆಯ್ಕೆ ಮಾಡಿಕೊಂಡೆ.

ಯಾರ ಬಳಿ ನೀವು ಭಾಗವತಿಕೆಯನ್ನು ಅಭ್ಯಾಸ ಮಾಡಿದ್ದು?

ನಾರಾಯಣ ಉಪ್ಪೂರರು ನನ್ನ ಗುರುಗಳು. ಅವರ ಬಳಿ ಕಲಿಯುವ ಅವಕಾಶ ಸಿಕ್ಕಿದ್ದೇ ನನ್ನ ಜೀವನದಲ್ಲಿ ನಡೆದ ಒಂದು ಕುತೂಹಲಕಾರಿ ಘಟನೆ. ಅದೇನೆಂದರೆ, ಉಪ್ಪೂರರು ನಡೆಸುತ್ತಿದ್ದ ಶಾಲೆಗೆ ಸೇರಬೇಕು ಎಂದರೆ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಬೇಕು. ನಂತರ ಒಂದುವಾರ ತರಬೇತಿ ನೀಡುತ್ತಾರೆ. ತರಬೇತಿ ಮುಗಿದ ಬಳಿಕ ಸಂದರ್ಶನ ಇರುತ್ತದೆ. ಇದೆಲ್ಲವನ್ನೂ ದಾಟಿದರೆ ಶಾಲೆ ಒಳಗೆ ಪ್ರವೇಶ. ಆದರೆ, ನಾನು ಸಂದರ್ಶನದಲ್ಲಿ ಪಾಸಾಗಲಿಲ್ಲ. ಹಾಗಿದ್ದರೂ, ಸಂದರ್ಶನಕಾರರಾಗಿದ್ದ ಉಪ್ಪೂರರು ಹಾಗೂ ಕಾಳಿಂಗ ನಾವುಡರು ನನ್ನ ಸಂಗೀತ ಜ್ಞಾನವನ್ನು ಗುರುತಿಸಿದರು. ಹೀಗೆ ಶಾಲೆಗೆ ಪ್ರವೇಶ ಪಡೆದೆ. ಅಲ್ಲಿಂದ ನನ್ನ ಭಾಗವತಿಕೆಯ ಜೀವನ ಪ್ರಾರಂಭವಾಯಿತು.

ಭಾಗವತಿಕೆಯ ಅನುಭವ...

ನಾನು 40 ವರ್ಷಗಳಿಂದ ಭಾಗವತಿಕೆ ಮಾಡುತ್ತಿದ್ದೇನೆ. ಎರಡು ಪೀಳಿಗೆಯ ಒಡನಾಟ ನನಗೆ ಸಿಕ್ಕಿದೆ. ಸಾಕಷ್ಟು ಕಲಿಕೆಯೂ ಸಾಧ್ಯವಾಗಿದೆ. ಏಳು–ಬೀಳುಗಳೊಂದಿಗೆ ಇಷ್ಟು ಮುಂದೆ ಸಾಗಿಬಂದಿದ್ದೇನೆ. ಜನರು ನನ್ನನ್ನು ಪ್ರೋತ್ಸಾಹಿಸಿದ್ದಾರೆ, ಮೆಚ್ಚಿಕೊಂಡಿದ್ದಾರೆ. ಒಬ್ಬ ಕಲಾವಿದನಿಗೆ ಇದಕ್ಕಿಂತ ಹೆಚ್ಚಿನದು ಏನೂ ಇಲ್ಲ.

ಯಕ್ಷಗಾನ ಮತ್ತು ತಾಳಮದ್ದಲೆಯಲ್ಲಿ ನಿಮಗೆ ಯಾವುದು ಹೆಚ್ಚು ಇಷ್ಟ?

ಯಕ್ಷಗಾನದಲ್ಲಿ ಪದ್ಯವನ್ನು ನಾಟ್ಯದ ಮೂಲಕ ಹೇಳಲು ಸಾಧ್ಯವಿದೆ. ತಾಳಮದ್ದಲೆಯಲ್ಲಿ ತರ್ಕಬದ್ಧ ಸಂಭಾಷಣೆಗಳು ಇರುತ್ತವೆ. ಇದು ನಮ್ಮ ಜ್ಞಾನವನ್ನು ವಿಸ್ತರಿಸುತ್ತದೆ. ತಾಳಮದ್ದಲೆಯ ಸಂಭಾಷಣೆಗಳನ್ನು ಯಕ್ಷಗಾನದಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ.

ಬೆಂಗಳೂರಿನ ಬಗ್ಗೆ ಏನು ಹೇಳ್ತೀರಿ?

ಇಲ್ಲಿನ ಜನರು ಯಕ್ಷಗಾನವನ್ನು ಈಗ ಮೊದಲಿಗಿಂತಲೂ ಹೆಚ್ಚು ಇಷ್ಟಪಡುತ್ತಿದ್ದಾರೆ. ಆದರೆ, ನನಗೆ ತೋರುವ ಒಂದು ಕೊರತೆಯನ್ನು ಹೇಳಿಬಿಡುತ್ತೇನೆ. ಈಗಿನ ಪ್ರೇಕ್ಷಕರಲ್ಲಿ ಚಪ್ಪಾಳೆ ಹೊಡೆಯುವ ಪ್ರವೃತ್ತಿ ಹೆಚ್ಚಾಗಿದೆ. ಮೊದಲೆಲ್ಲಾ, ಜನರು ಪ್ರಸಂಗವನ್ನು ಆಸ್ವಾದಿಸುತ್ತಿದ್ದರು. ಪ್ರಸಂಗದಲ್ಲಿ ತಲ್ಲೀನರಾಗಿರುತ್ತಿದ್ದರು. ಎಷ್ಟೋ ಬಾರಿ ಅವರಿಗೆ ಚಪ್ಪಾಳೆಯ ನೆನಪೂ ಬರುತ್ತಿರಲಿಲ್ಲ. ಆಗೆಲ್ಲಾ ಜನ ಚಪ್ಪಾಳೆ ಹೊಡೆದರು ಎಂದರೆ ನಮಗೆ ಸ್ವರ್ಣಪದಕ ಸಿಕ್ಕ ಖುಷಿ. ಆದರೆ, ಈಗ ಜನ ಎಲ್ಲದಕ್ಕೂ ಚಪ್ಪಾಳೆ ಹೊಡೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT