ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಕ್ತಿ ಪರಂಪರೆಗೆ ಚಲನಶೀಲ ಗುಣ’

Last Updated 21 ನವೆಂಬರ್ 2017, 5:39 IST
ಅಕ್ಷರ ಗಾತ್ರ

ಮಂಗಳೂರು: ಭಕ್ತಿ ಚಾರಿತ್ರಿಕವಾಗಿ ಮತ್ತು ಸಾಮಾಜಿಕವಾಗಿ ನದಿ ಕೇಂದ್ರಿತ ಕೃಷಿ ವ್ಯವಸ್ಥೆಯ ಅಭಿವ್ಯಕ್ತಿ. ಇದು 10 ನೇ ಶತಮಾನದ ಪೂರ್ವದಲ್ಲಿ ಭಾರತದಲ್ಲಿದ್ದ ಸಾಮಾನ್ಯ ಸಂಸ್ಕೃತಿ. ತಮಿಳು ಭಕ್ತಿಯ ಆಳ್ವಾರರು, ನಾಯನ್ಮಾರರು ಕೃಷಿ ಸಂಸ್ಕೃತಿಯಿಂದ ಬಂದವರು ಎಂದು ದೆಹಲಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಟಿ.ಎಸ್. ಸತ್ಯನಾಥ್ ತಿಳಿಸಿದರು.

ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಸಹೋದಯ ಸಭಾಂಗಣ ದಲ್ಲಿ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನ ಕೇಂದ್ರದ 10ರ ಸಂಭ್ರಮ ಹಾಗೂ ಕನಕ ಜಯಂತಿಯ ಪ್ರಯುಕ್ತ ‘ಭಕ್ತಿ ಪರಂಪರೆ ಲೋಕಯಾನ ಮತ್ತು ಕನಕದಾಸರು ಸಮಕಾಲೀನ ಸಂವಾದ’ ಎಂಬ ಪ್ರಚಾರೋಪನ್ಯಾಸ ಮಾಲಿಕೆಯ ಎರಡನೇ ಕಾರ್ಯಕ್ರಮದಲ್ಲಿ ‘ಭಕ್ತಿ ಒಂದು ಪರ್ಯಾಯ ನೋಟ: ಕನಕದಾಸರಿಗೆ ಸಂಬಂಧಿಸಿದಂತೆ’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

10 ನೇ ಶತಮಾನದ ನಂತರ ಬಂದ ಬಹುತೇಕ ಜನ ಭಕ್ತರು, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಕುಶಲಕರ್ಮಿ ಮತ್ತು ಸೇವಾನಿರತ ವೃತ್ತಿ ಜಾತಿಗಳಿಂದ ಗುರುತಿಸಿಕೊಂಡವರು. ಭಕ್ತಿ ಪರಂಪರೆಯು ಚಲನಶೀಲ ಗುಣವನ್ನು ಹೊಂದಿದ್ದು, ಕಾಲಾಂತರದಲ್ಲಿ ವಿವಿಧ ಮಾರ್ಪಾಡುಗಳೊಂದಿಗೆ ದೇಶದಾದ್ಯಂತ ವಿಸ್ತರಿಸಿದ್ದು ಮಾತ್ರವಲ್ಲದೇ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಇದುವರೆಗೆ ಭಕ್ತಿಯ ಪರಂಪರೆಯ ಕುರಿತು ನಡೆದಿರುವ 150 ವರ್ಷಗಳ ಅಧ್ಯಯನ, ಭಕ್ತಿಯನ್ನು ಯಾವುದೋ ಒಂದು ತಾತ್ವಿಕವಾದ ಚೌಕಟ್ಟಿನಲ್ಲಿ ನೋಡುವ ಪ್ರಯತ್ನವನ್ನು ಮಾಡುತ್ತದೆ. ಭಕ್ತಿಯನ್ನು ರಾಷ್ಟ್ರೀಯವಾದಿ ನೆಲೆಯಲ್ಲಿ ಮಾತ್ರವಲ್ಲ ಮಾರ್ಕ್ಸವಾದಿ, ಸ್ತ್ರೀವಾದಿ ಮತ್ತು ದಲಿತ ಕೇಂದ್ರಿತ ಅಧ್ಯಯನವಾಗಿ ನೋಡಲಾಗಿದೆ. ಇಂತಹ ಪ್ರಯತ್ನಗಳಿಂದ ಸ್ವಲ್ಪವಾದರೂ ಹೊರ ಬಂದು ಬೇರೊಂದು ರೀತಿಯ ಪರ್ಯಾಯ ನೋಟವನ್ನು ಭಕ್ತಿಯ ಅಧ್ಯಯನದಲ್ಲಿ ನಾವಿಂದು ರೂಪಿಸ ಬೇಕಾಗಿದೆ ಎಂದು ಪ್ರತಿಪಾದಿಸಿದರು.

ಕೇವಲ ಸಾಹಿತ್ಯದ ಭಾಗವಾಗಿ ಮಾತ್ರವಲ್ಲದೆ, ಸಂಗೀತ, ನಾಟ್ಯ, ಅಭಿನಯ ಹಾಗೂ ಸಾರ್ವಜನಿಕ ನೆನಪಿನ ಭಾಗವಾಗಿಯೂ ಭಕ್ತಿ ಅಧ್ಯಯನದ ಪರ್ಯಾಯವನ್ನು ಕಂಡುಕೊಳ್ಳಬೇಕಾಗಿದೆ ಎಂದರು.

ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ಬಿ. ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಧ್ಯಾತ್ಮವು ಲೋಕದ ಗುರುತನ್ನು ಮರೆತು, ಮತ್ತೊಬ್ಬರ ಜತೆಗೆ ಬೆರೆಯುವ ಮನೋಭಾವ. ಇದು ಲೋಕಾತೀ ತವಾದ ಅವ್ಯಕ್ತತೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ.ಹನಿಬಾಲ್ ಆರ್. ಕಬ್ರಾಲ್ ಅಧ್ಯಕ್ಷತೆ ವಹಿಸಿದ್ದರು. ರೂಪಶ್ರೀ ನಾಗರಾಜು, ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಫ್ರೇನಿ ಇಸ್ರಾಯೇಲ್ ನಿರೂಪಿಸಿದರು. ಮಧುಕಿರಣ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT