ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಮನೆ ಮುಂದೆ ಮಕ್ಕಳಿಂದ ಅಕ್ಷರ ಸರಪಳಿ

Last Updated 21 ನವೆಂಬರ್ 2017, 5:49 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ನ.24ರಿಂದ 26ರವರೆಗೆ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಲು ಅಕ್ಷರ ಸರಪಳಿ ರಚಿಸಿ ಇಲ್ಲಿನ ಅಂಬಾವಿಲಾಸ ಅರಮನೆ ಮುಂಭಾಗ ಸೋಮವಾರ ಪ್ರೊಮೊ ಚಿತ್ರೀಕರಣ ನಡೆಯಿತು. ನಗರದ ಉತ್ತರ ಮತ್ತು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವ್ಯಾಪ್ತಿಯ 20 ಶಾಲೆಗಳ 2,000 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅರಮನೆ ಮುಂಭಾಗದ ಆವರಣದಲ್ಲಿ ‘83ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರು’, ‘ಶ್ರೀರಾಮಾಯಣ ದರ್ಶನಂ– 50’ ವಾಕ್ಯದ ಅಕ್ಷರಗಳನ್ನು ಬರೆಸಿ ಅದರ ಮಾದರಿಯಲ್ಲೇ ಕುಳಿತ ವಿದ್ಯಾರ್ಥಿಗಳು ಕೆಂಪು, ಹಳದಿ ಬಣ್ಣದ ರಟ್ಟುಗಳನ್ನು ತಲೆ ಮೇಲೆ ಇಟ್ಟುಕೊಂಡಿದ್ದರು. ಈ ದೃಶ್ಯವನ್ನು ಡ್ರೋನ್‌ ಮೂಲಕ ಸೆರೆ ಹಿಡಿಯಲಾಯಿತು.

ಉದ್ಘೋಷಕರು ಸೂಚನೆ ನೀಡುತ್ತಿದ್ದಂತೆ ವಿದ್ಯಾರ್ಥಿಗಳು ಹಿಡಿದುಕೊಂಡಿದ್ದ ರಟ್ಟುಗಳನ್ನು ಎಡಕ್ಕೂ, ಬಲಕ್ಕೂ ಆಡಿಸಿದರು. ಮೇಲಕ್ಕೂ, ಕೆಳಕ್ಕೂ ಎತ್ತಿ ಚಿತ್ರೀಕರಣಕ್ಕೆ ಸಹಕರಿಸಿದರು. ಅಕ್ಷರಗಳ ಮಧ್ಯೆ ಕಲಾವಿದ ಬಾದಲ್‌ ನಂಜುಂಡಸ್ವಾಮಿ ಕನ್ನಡ ಧ್ವಜ ಹಿಡಿದು ನಿಂತಿದ್ದರು.

‘ರಾಷ್ಟ್ರಕವಿ ಕುವೆಂಪು ಅವರ ಶ್ರೀ ರಾಮಾಯಣದರ್ಶನಂ ಕೃತಿಗೆ ಜ್ಞಾನಪೀಠ ಪುರಸ್ಕಾರ ಲಭಿಸಿ 50 ವರ್ಷಗಳಾಗಿದೆ. ಅದರ ಸುವರ್ಣ ಮಹೋತ್ಸವದ ಸಂದರ್ಭವನ್ನೂ ಸಾಹಿತ್ಯ ಸಮ್ಮೇಳನದ ಜತೆಗೆ ಸೇರಿಸಿಕೊಂಡು ಪ್ರೊಮೊ ರಚಿಸಲಾಗುತ್ತಿದೆ. 4 ನಿಮಿಷಗಳ ಈ ಪ್ರೊಮೊವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡಿ ಕನ್ನಡ ಪ್ರೇಮಿಗಳನ್ನು ಸ್ವಾಗತಿಸಲಾಗುವುದು’ ಎಂದು ಪ್ರಚಾರ ಸಮಿತಿ ಕಾರ್ಯಾಧ್ಯಕ್ಷ ಜನಾರ್ದನ್‌ ತಿಳಿಸಿದರು.

ಜಿಲ್ಲಾಧಿಕಾರಿ ಡಿ.ರಂದೀಪ್‌ ಅವರು ಕನ್ನಡ ಧ್ವಜವನ್ನು ಹಾರಿಸಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ಭಾಗವಹಿಸಿದ್ದರು.

1 ಗಂಟೆ 15 ನಿಮಿಷ ವಿಳಂಬ
ಬೆಳಿಗ್ಗೆ 8.45ಕ್ಕೆ ಕಾರ್ಯಕ್ರಮ ಆರಂಭಿಸುವುದಾಗಿ ತಿಳಿಸಲಾಗಿತ್ತು. ಆದರೆ, ಕಾರ್ಯಕ್ರಮ ಆರಂಭವಾದಾಗ 10 ಗಂಟೆ ಆಗಿತ್ತು. ಮಕ್ಕಳು ಬಿಸಿಲಿನಲ್ಲೇ ಕುಳಿತಿದ್ದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಮಕ್ಕಳಿಗೆ ಬನ್‌, ಬಿಸ್ಕತ್‌, ಬಾಳೆ ಹಣ್ಣುಗಳನ್ನು ವಿತರಿಸಲಾಯಿತು.

ನೋಂದಣಿ ಅವಕಾಶ; 23ರ ವರೆಗೆ ವಿಸ್ತರಣೆ
ಮೈಸೂರು: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳುವ ಅವಧಿಯನ್ನು ನ.23ರವರೆಗೂ ವಿಸ್ತರಿಸಲಾಗಿದೆ ಎಂದು ಸಮ್ಮೇಳನದ ನೋಂದಣಿ ಸಮಿತಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ತಿಳಿಸಿದ್ದಾರೆ.

ಪಡುವಾರಹಳ್ಳಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣಾ ಇಲಾಖೆ ಜಿಲ್ಲಾ ಅಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ವರೆಗೂ ನೋಂದಾಯಿಸಿಕೊಳ್ಳಬಹುದು. ನ.21ರಿಂದ 23ರವರೆಗೆ ನೋಂದಾಯಿಸಿಕೊಳ್ಳುವವರಿಗೆ ಸಮ್ಮೇಳನದ ಕಿಟ್ ನೀಡಲಾಗುವುದು. ವಸತಿ ಸೌಲಭ್ಯ ಕಲ್ಪಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಮ್ಮೇಳನದ ದಿನ ಒತ್ತಡ ಕಡಿಮೆ ಮಾಡಲು ಮೈಸೂರಿನ ಪ್ರತಿನಿಧಿಗಳಿಗೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಪ್ರತಿನಿಧಿಗಳಿಗೆ ನ.22 ಮತ್ತು 23ರಂದೇ ಸಮ್ಮೇಳನದ ಕಿಟ್‌ಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಯಲ್ಲಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಕಿಟ್ ಪಡೆಯಲು ರಸೀದಿಯನ್ನು ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT