ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈತುಂಬ ಕೂಲಿ ಕೊಟ್ಟರೆ ಯಾವ ಭಾಗ್ಯವೂ ಬೇಡ

Last Updated 21 ನವೆಂಬರ್ 2017, 6:01 IST
ಅಕ್ಷರ ಗಾತ್ರ

ಮಂಡ್ಯ: ‘ಉದ್ಯೋಗ ಖಾತ್ರಿಯಡಿ ಸಮರ್ಪಕವಾಗಿ ಕೆಲಸ ಹಾಗೂ ಕೈತುಂಬ ಕೂಲಿ ಕೊಟ್ಟರೆ ಸಾಕು, ಸರ್ಕಾರದ ಯಾವ ಭಾಗ್ಯಗಳೂ ಬೇಕಿಲ್ಲ’ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೆರಾ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಸೋಮವಾರ ನಡೆದ ತಾಲ್ಲೂಕು ಕೂಲಿಕಾರರ ಐದನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿ, ಕೆಲಸ ಹಾಗೂ ಕೈ ತುಂಬ ಕೂಲಿ ನೀಡುವ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ, ಆರೋಗ್ಯ ಸೇವೆಗಳು ಬಡವರಿಗೆ, ಜನಸಾಮಾನ್ಯರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಸಿಗುತ್ತಿಲ್ಲ. ಅವು ಉಳ್ಳವರ ಪಾಲಾಗುತ್ತಿದೆ. 1.5 ಕೋಟಿ ಜನರಿಗೆ ವಾಸಿಸಲು ಸ್ವಂತ ಸೂರಿಲ್ಲ. ಇನ್ನೂ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ. ಇವರ ಬವಣೆ ಅರಿಯುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾರ್ವತ್ರಿಕ ರೇಷನ್‌ ಪದ್ಧತಿ ಮಾಡುತ್ತೇವೆ ಎಂದು ಹೇಳಿದ ಸರ್ಕಾರ ಅನ್ನಭಾಗ್ಯ ಹೆಸರಿನಲ್ಲಿ ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಪದಾರ್ಥಗಳನ್ನು ಕಿತ್ತುಕೊಂಡ ಮೇಲೆ ಯಾವ ಭಾಗ್ಯವನ್ನು ಸರ್ಕಾರ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.

ನಿರುದ್ಯೋಗ ಸಮಸ್ಯೆಯಿಂದ ದೇಶ ನಲುಗಿದೆ. 2 ಕೋಟಿ ಜನರಿಗೆ ಉದ್ಯೋಗ ಸಿಕ್ಕಿಲ್ಲ. ಬೆಲೆ ಹೆಚ್ಚಳದಿಂದ ಕೂಲಿಕಾರ್ಮಿಕರು, ಬಡವರು ಆಹಾರ ಪದಾರ್ಥಗಳನ್ನು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಶಕ್ತಿಯೂ ಇಲ್ಲ ಎಂಬಂತೆ ಅವರು ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮೂಲ ಸೌಲಭ್ಯಗಳನ್ನು ದೊರಕಿಸುವ ಕೆಲಸಕ್ಕೆ ಇನ್ನಾದರೂ ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

ಕೋಮುಭಾವನೆ ಕೆರಳಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರದಲ್ಲಿ ಆರ್ಥಿಕ ಅಸಮಾನತೆ ಹುಟ್ಟು ಹಾಕಲಾಗುತ್ತಿದ್ದು, ಇದನ್ನು ತಡೆಯಬೇಕು. ಯಾವುದೇ ಜಾತಿ ಭೇದವಿಲ್ಲದೇ ಸಮಾಜದಲ್ಲಿ ಸಮಾನತೆಯ ಬದುಕು ನಡೆಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ‘ಕೃಷಿ ಕಾರ್ಮಿಕರನ್ನು ಬಂಡವಾಳ ಶಾಹಿಗಳು ಶೋಷಣೆ ಮಾಡುತ್ತಿದ್ದು ಅದು ನಿಲ್ಲಬೇಕು. ಅವರಿಗೆ ಸಾಮಾಜಿಕ ನ್ಯಾಯ ಸಿಗಬೇಕು. ಸರ್ಕಾರಗಳು ಕೂಲಿ ಕಾರ್ಮಿಕರ ವಿರುದ್ಧವಾಗಿವೆ. ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಸೌಲಭ್ಯಗಳು ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಸಂಪೂರ್ಣವಾಗಿ ಸಿಗಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು, ಪ್ರಧಾನ ಕಾರ್ಯದರ್ಶಿ ಕೆ.ಬಸವರಾಜು, ಉಪಾಧ್ಯಕ್ಷರಾದ ಸುರೇಂದ್ರ, ಶಿವಮಲ್ಲು, ಸಹ ಕಾರ್ಯದರ್ಶಿ ಬಿ.ಹನುಮೇಶ್‌, ಅಮಾಸೆ, ವಕೀಲರಾದ ಬಿ.ಟಿ.ವಿಶ್ವನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT