ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಹರಿಕಾರ, ಹೋರಾಟಗಾರ ಕಣ್ಮರೆ

Last Updated 21 ನವೆಂಬರ್ 2017, 6:14 IST
ಅಕ್ಷರ ಗಾತ್ರ

ಬಾಗಲಕೋಟೆ: ಕರ್ಮಭೂಮಿ ಬಾಗಲಕೋಟೆ ಸೇರಿದಂತೆ ರಾಜ್ಯದಲ್ಲಿ ಏಳು ಹೊಸ ಜಿಲ್ಲೆಗಳ ರಚನೆಗೆ ಕಾರಣರಾಗಿ ಜಿಲ್ಲಾ ಕೇಂದ್ರಗಳು ಜನರಿಗೆ ಹತ್ತಿರವಾಗಲು ನೆರವಾದ ಹಿರಿಯ ಜೀವ ಟಿ.ಎಂ.ಹುಂಡೇಕಾರ ಸೋಮವಾರ ನಿಧನರಾದರು.

ಉಸಿರಾಟದ ತೊಂದರೆ ಹಾಗೂ ವಯೋ ಸಹಜ ಕಾಯಿಲೆಗಳ ಕಾರಣ ನಗರದ ಕೆರೂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹುಂಡೇಕಾರ, ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ ಮೃತಪಟ್ಟಿದ್ದಾರೆ.

1978 ರಲ್ಲಿ ತಾಲ್ಲೂಕು ವೀರಶೈವ ಮಹಾಸಭೆ ಅಧ್ಯಕ್ಷರಾಗಿದ್ದ ಹುಂಡೇಕಾರ, ಬಿ.ವಿ.ವಿ ಸಂಘದ ಸದಸ್ಯರಾಗಿ, ಸಿಟಿ ಸ್ಫೋರ್ಟ್ಸ್‌ ಕ್ಲಬ್ ಅಧ್ಯಕ್ಷರಾಗಿ ಅಖಿಲ ಭಾರತ ಮಟ್ಟದ ಹಾಕಿ ಟೂರ್ನಿಗಳನ್ನು ನಗರದಲ್ಲಿ ಸಂಘಟಿಸಿದ್ದರು. ಮುಂದೆ ವಿಶ್ವ ಹಿಂದೂಪರಿಷತ್‌ ರಾಜ್ಯ ಉಪಾಧ್ಯಕ್ಷರಾಗಿ, ಜನಸಂಘದಿಂದ ರಾಜಕೀಯ ದೀಕ್ಷೆ ಪಡೆದಿದ್ದರು.

ರಾಷ್ಟ್ರೀಯ ನಾಯಕರೊಂದಿಗೆ ನಂಟಿನ ಕಾರಣ ಆಗಿನ ಬಿಜೆಪಿಯಲ್ಲಿ ಹುಂಡೇಕಾರ ಪ್ರಭಾವಿಯಾಗಿ ಹೊರಹೊಮ್ಮಿದ್ದರು. ಜನತಾಪಕ್ಷದ ನಾಯಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಅದೇ ಕಾರಣಕ್ಕೆ ಎರಡೂ ಪಕ್ಷಗಳ ನಡುವೆ ಸಮನ್ವಯಕಾರರಾಗಿ ಸರ್ಕಾರವನ್ನು ಸರಿದೂಗಿಸಿಕೊಂಡು ಹೋಗಲು ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ನೆರವಾಗಿದ್ದರು.

‘ಹಿಡಿದ ಕೆಲಸ ಸಾಧಿಸುವ ಹಠ, ಪ್ರಾಮಾಣಿಕತೆ, ಹೋರಾಟದ ಛಲ, ಆದರ್ಶ ಹಾಗೂ ಒಂದಷ್ಟು ಹಠಮಾರಿತನ ಬೆಸೆದುಕೊಂಡರೆ ಹುಂಡೇಕಾರ ಅವರಂತಹ ವ್ಯಕ್ತಿತ್ವ ರೂಪುಗೊಳ್ಳುತ್ತದೆ’ ಎಂದು ಅವರ ಬಹುದಿನದ ಒಡನಾಡಿಯೂ ಆದ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ.ನಾಡಗೌಡ ಸ್ಮರಿಸುತ್ತಾರೆ.

ಜಿಲ್ಲಾ ಪುನರ್ವಿಂಗಡಣಾ ಸಮಿತಿ ಅಧ್ಯಕ್ಷರಾಗಿದ್ದಾಗ ಆಡಳಿತಾತ್ಮಕ ಅನುಕೂಲಕ್ಕಾಗಿ ಒಂಬತ್ತು ಹೊಸ ಜಿಲ್ಲೆಗಳನ್ನು (ಯಾದಗಿರಿ, ಚಿಕ್ಕೋಡಿ ಸೇರಿ) ಶಿಫಾರಸು ಮಾಡಿದ್ದರು. ಆದರೆ ಅದು 10 ವರ್ಷಗಳ ನಂತರ ಜೆ.ಎಚ್. ಪಟೇಲ್‌ ಮುಖ್ಯಮಂತ್ರಿಯಾಗಿದ್ದ ವೇಳೆ ಅನುಷ್ಠಾನಕ್ಕೆ ಬಂದಿತು.

‘ಹೊಸ ಜಿಲ್ಲೆಗಳ ರಚನೆ ನಂತರ ಅಲ್ಲಿಯವರು ಕರೆದು ತಮ್ಮನ್ನು ಸನ್ಮಾನಿಸಿದರೂ  ತವರಿನಲ್ಲಿ ಮಾತ್ರ ಯಾವುದೇ ಗೌರವ ಸಿಗಲಿಲ್ಲ’ ಎಂಬ ಕೊರಗು ಅವರಿಗೆ ಕೊನೆಯವರೆಗೂ ಕಾಡಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದರು. ಜಿಲ್ಲೆಯಲ್ಲಿ ಮೌಲ್ಯಯುತ ರಾಜಕಾರಣ ಹಾಗೂ ಸಾಮಾಜಿಕ ಹೋರಾಟಗಾರರಾಗಿಯೂ ಕೆಲಸ ಮಾಡಿದ್ದರು.

ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ, ಶಾಸಕ ಅಭಯಚಂದ್ರಜೈನ್, ಜೆ.ಡಿ.ಯು ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ, ಮಾಜಿ ಶಾಸಕ ಪಿ.ಎಚ್.ಪೂಜಾರ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮೃತರ ಅಂತಿಮ ದರ್ಶನ ಪಡೆದರು. ಈ ವೇಳೆ ಬಿ.ಟಿ.ಡಿ.ಎ ಅಧ್ಯಕ್ಷ ಸಭಾಪತಿ ಎ.ಡಿ. ಮೊಕಾಶಿ, ಮಾಜಿ ಅಧ್ಯಕ್ಷ ಜಿ.ಎನ್. ಪಾಟೀಲ, ಲಿಂಗರಾಜ ವಾಲಿ, ಮಲ್ಲಣ್ಣ ಜಿಗಳೂರ, ವಿಜಯ ಅಂಗಡಿ, ಬಸಲಿಂಗಪ್ಪ ನಾವಲಗಿ, ಬಸವರಾಜ ಕಡಪಟ್ಟಿ, ನಾಗರಾಜ ಹೊಂಗಲ್, ಆನಂದ ಜಿಗಜಿನ್ನಿ, ಸಂಜೀವ ವಾಡಕರ, ನಾಗರಾಜ ಹದ್ಲಿ, ಡಾ. ಸಿ.ಎಸ್. ಪಾಟೀಲ ಹಾಜರಿದ್ದರು. ರುದ್ರಭೂಮಿಯಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಶಾಸಕ ಎಚ್.ವೈ. ಮೇಟಿ, ನಾರಾಯಣ ದೇಸಾಯಿ, ಡಾ. ಸಿ.ಎಸ್. ಪಾಟೀಲ, ನಾಗರಾಜ ಹೊಂಗಲ್ ಮಾತನಾಡಿದರು.

* * 

ಪ್ರಾಮಾಣಿಕತೆ, ಹಿಡಿದ ಕೆಲಸವನ್ನು ಬಿಡದೆ ಮಾಡುವ ಅಪರೂಪದ ಗುಣ ಹುಂಡೇಕಾರ ಅವರಲ್ಲಿ ಇತ್ತು. ಮೌಲ್ಯಯುತ ರಾಜಕಾರಣದ ಕೊನೆಯ ಕೊಂಡಿ ಡಾ.ಎಂ.ಪಿ.ನಾಡಗೌಡ
ಸಂಯುಕ್ತ ಜನತಾ ದಳದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT