ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಹೈದನ ಹೈನುಗಾರಿಕೆ ಪ್ರೀತಿ

Last Updated 21 ನವೆಂಬರ್ 2017, 10:23 IST
ಅಕ್ಷರ ಗಾತ್ರ

ಕಂಪ್ಲಿ: ‘ಕೈಯಲ್ಲಿ ಪದವಿ ಪ್ರಮಾಣ ಪತ್ರ ಇದ್ದರೂ ನೌಕರಿ ಭಾಗ್ಯ ಸಿಗಲಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದರೂ ಕನಸು ಕೈಗೂಡಲಿಲ್ಲ. ಇಷ್ಟಾದರೂ ಜೀವನ ಪ್ರೀತಿ ಅವರ ಕೈ ಬಿಡಲಿಲ್ಲ. ಹಿನ್ನೆಡೆಗಳಿಂದ ಹತಾಶರಾಗದೇ ಸ್ವಾವಲಂಬಿ ಜೀವನ ನಡೆಸಬೇಕೆಂಬ ಸುರೇಶ್‌ ಚೌಡ್ಕಿ ಅವರ ಆಸೆಗೆ ಹೈನೋದ್ಯಮ ನೀರೆರಿದಿದೆ.

ದೇವಸಮುದ್ರ ಗ್ರಾಮದ ಚೌಡ್ಕಿ ಶೇಖರಪ್ಪ ಅವರ ಪುತ್ರನಾದ ಸುರೇಶ್‌ ಚೌಡ್ಕಿ ಅವರು ಬಿ.ಕಾಂ ಪದವೀಧರ. ಬ್ಯಾಂಕಿಂಗ್‌ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆದು ಸಿ.ಎ. ಮಾಡುವ ಅವರ ಪ್ರಯತ್ನ ಫಲಿಸಲಿಲ್ಲ. ಆಗ ಅವರಿಗೆ ಹೊಳೆದದ್ದೇ ಹೈನೋದ್ಯಮ.

ಕಂಪ್ಲಿ–ಬಳ್ಳಾರಿ ರಾಜ್ಯ ಹೆದ್ದಾರಿ–29ರ ಮಾರೆಮ್ಮ ದೇವಸ್ಥಾನ ಸಮೀಪ ತಮ್ಮ 2.75ಎಕರೆ ನೀರಾವರಿ ಜಮೀನಿನಲ್ಲಿ 1.85 ಎಕರೆ ಪ್ರದೇಶದಲ್ಲಿ ಹೈನುಗಾರಿಕೆ ಆರಂಭಿಸಿಯೇ ಬಿಟ್ಟರು.

ಸೋದರಿ ಡೆಂಗಿ ಮೀನಾಕ್ಷಿ ಹೆಸರಲ್ಲಿ ಹೊಸಪೇಟೆ ಪಿ.ಎಲ್‌.ಡಿ ಬ್ಯಾಂಕ್‌ನಲ್ಲಿ ಹೈನುಗಾರಿಕೆಗೆ ₹9ಲಕ್ಷ ಸಾಲ ಪಡೆದರು. ಈ ಹಣ ಸಾಲಲಿದ್ದಾಗ ಪರಿಚಯಸ್ಥರ ಬಳಿ ಮತ್ತಷ್ಟು ಕೈ ಸಾಲ ಮಾಡಿ ಸುಮಾರು ₹16 ಲಕ್ಷ ವೆಚ್ಚದಲ್ಲಿ ಹೈನೋದ್ಯಮ ಆರಂಭಿಸಿದರು.

‘ಮಹಾರಾಷ್ಟ್ರದ ಸಾಂಗ್ಲಿಯಿಂದ ಎಚ್‌ಎಫ್‌ ತಳಿಯ 10 ಆಕಳು ಮತ್ತು ದೇಸಾಯಿ ಕ್ಯಾಂಪ್‌ ಜಾನುವಾರು ಸಂತೆಯಲ್ಲಿ ಮುರ್ರ ತಳಿಯ ಮೂರು ಎಮ್ಮೆ ಮತ್ತು ಜವಾರಿ ಎಮ್ಮೆ ಖರೀದಿಸಿದೆ. ನಿತ್ಯ ಎರಡು ಬಾರಿ ಆಕಳು, ಎಮ್ಮೆಗಳಿಂದ 140 ಲೀಟರ್‌ ಯಂತ್ರದ ಮೂಲಕ ಹಾಲು ಕರೆಯುತ್ತಿದ್ದು, ದೇವಸಮುದ್ರ ಗ್ರಾಮದ ನಂದಿನಿ ಹಾಲು ಒಕ್ಕೂಟದ ಸಹಕಾರ ಸಂಘಕ್ಕೆ ಮಾರಾಟ ಮಾಡುತ್ತಿದ್ದೇನೆ’ ಎಂದು ಸುರೇಶ್‌ ತಮ್ಮ ಸಾಧನೆ ವಿವರಿಸಿದರು.

‘ಹಾಲು ಮಾರಾಟದಿಂದ ದಿನಕ್ಕೆ ₹ 3700 ದೊರೆಯುತ್ತಿದೆ. ಜಾನುವಾರು ಆಹಾರ, ನಾಲ್ಕು ಜನರ ಕೂಲಿ, ನಿರ್ವಹಣೆ ವೆಚ್ಚ ₹ 2ಸಾವಿರ ತೆಗೆದರೆ ₹1700ರಂತೆ ತಿಂಗಳಿಗೆ ಅಂದಾಜು ₹50 ಸಾವಿರ ಉಳಿಯುತ್ತದೆ. ಇದರಲ್ಲಿ ಬ್ಯಾಂಕ್‌ ಕಂತು, ಕೈ ಸಾಲದ ಮೊತ್ತವನ್ನು ಹಂತ ಹಂತವಾಗಿ ತೀರಿಸುತ್ತಿದ್ದೇನೆ’ ಎಂದು ಹಸನ್ಮುಖಿಯಾಗಿ ನುಡಿದರು.

‘ದನದ ಕೊಟ್ಟಿಗೆಯಿಂದ ಮೂತ್ರ(ಗಂಜಲ) ನೇರವಾಗಿ ಹಸಿರು ಮೇವು ಬೆಳೆದಿರುವ ಹೊಲಕ್ಕೆ ಸೇರುವ ತಾಂತ್ರಿಕತೆ ಅಳವಡಿಸಿದ್ದೇನೆ. ಕೊಟ್ಟಿಗೆ ಪಕ್ಕದಲ್ಲಿಯೇ ಗೊಬ್ಬರ(ಗೋಬರ್‌) ಗ್ಯಾಸ್‌ ನಿರ್ಮಿಸಿದ್ದು, ನಮ್ಮ ಅವಿಭಕ್ತ ಕುಟುಂಬದ ಅಡುಗೆಗೆ ಅನುಕೂಲವಾಗಿದೆ. ಇನ್ನು ಉಳಿದ 90 ಸೆಂಟ್‌ ಭೂಮಿಯಲ್ಲಿ ಕೊಟ್ಟಿಗೆ ಗೊಬ್ಬರ ಹಾಕುತ್ತಿದ್ದೇನೆ. ಹಸಿರು ಹುಲ್ಲು ಕತ್ತರಿಸಲು ಚಾಪ್‌ ಕಟರ್‌ ಮತ್ತು ಆಹಾರ ಧಾನ್ಯಕ್ಕಾಗಿ ಗಿರಣಿ ಯಂತ್ರ ಅಳವಡಿಸಿದ್ದೇನೆ. ಹೈನೋದ್ಯಮ ಜತೆಗೆ 7 ಟಗರು ಮತ್ತು 100ಕೋಳಿ ಸಾಕಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ತಂದೆ ಶೇಖರಪ್ಪ, ತಾಯಿ ಲಕ್ಷ್ಮಿ, ಮಾವ ಭೀಮೇಶಪ್ಪ ಡೆಂಗಿ, ಸಹೋದರ ಮೂರ್ತಿ, ಜಡೆಪ್ಪ, ಕುಟುಂಬದ ಸದಸ್ಯರಾದ ಅನ್ನಪೂರ್ಣಮ್ಮ, ಜಡೆಪ್ಪ ಈ ಉದ್ಯಮಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಶೀಘ್ರ ಎಲ್ಲ ಸಾಲ ತೀರಿಸಿ ಋಣ ಮುಕ್ತನಾಗುತ್ತೇನೆ’ ಎಂದು ನಗೆ ಬೀರಿದರು. ಹೈನೋದ್ಯಮದ ಮಾಹಿತಿಗಾಗಿ: 89700 17023 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT