ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲೆಯಲ್ಲಿ ಸ್ಮಾರಕಗಳ ಅನಾವರಣ

Last Updated 21 ನವೆಂಬರ್ 2017, 6:51 IST
ಅಕ್ಷರ ಗಾತ್ರ

ಬೀದರ್‌: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ)ಯ ಧಾರವಾಡ ವಲಯ ಕಚೇರಿಯ ವತಿಯಿಂದ ವಿಶ್ವ ಪರಂಪರೆ ಸಪ್ತಾಹದ ಅಂಗವಾಗಿ ಕೋಟೆಯೊಳಗೆ ಸೋಮವಾರ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ನ್ಯಾಷನಲ್‌ ಫೈನ್‌ ಆರ್ಟ್‌ ಕಾಲೇಜಿನ ವಿದ್ಯಾರ್ಥಿಗಳು ಸುಡು ಬಿಸಿಲನ್ನು ಲೆಕ್ಕಿಸದೇ ಕಲೆಯಲ್ಲಿ ಮಗ್ನರಾಗಿ ಕಲಾಕುಂಚದಲ್ಲಿ ಸ್ಮಾರಕಗಳನ್ನು ಅನಾವರಣಗೊಳಿಸಿದರು.

ಫೈನ್‌ ಆರ್ಟ್‌ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಹಣಮಂತ ಮಲ್ಕಾಪುರೆ ಗೋಡೆಯ ಒಂದು ಬದಿಯ ನೆರಳಲ್ಲಿ ಕುಳಿತು ಬಹಮನಿ ಸುಲ್ತಾನರ ಕಾಲದ ಟಂಕಶಾಲೆಯನ್ನು ಕಲಾಕುಂಚದಲ್ಲಿ ಯಥಾವತ್ತಾಗಿ ಸೆರೆ ಹಿಡಿದು ಕಲಾಪ್ರೇಮಿಗಳ ಗಮನ ಸೆಳೆದರು. ನೀಲಿ ಬಾನು, ಸ್ಮಾರಕ ಮುಂದಿನ ಹುಲ್ಲುಹಾಸು ಹಾಗೂ ಶಿಥಿಲಾವಸ್ಥೆಯಲ್ಲಿನ ಗೋಡೆಯನ್ನೂ ಅಚ್ಚುಕಟ್ಟಾಗಿ ಗುರುತಿಸಿ ಕಲಾ ಪ್ರತಿಭೆಯನ್ನು ಮೆರೆದರು.

ಸೊಯೇಬ್‌ ಅಹಮ್ಮದ್ ಅವರು ಸುಲ್ತಾನರು ವಾಸ ಮಾಡಿದ್ದ ತಖ್ತ ಮಹಲ್‌ ಹಾಗೂ ಶಿವಾ ಭೀಮಶೆಟ್ಟಿ ತಖ್ತ ಮಹಲ್‌ನ ಭವ್ಯ ಪ್ರವೇಶ ದ್ವಾರವನ್ನು ಚಿತ್ರಿಸಿ ಹಳೆಯ ಕಟ್ಟಡದ ಸ್ವರೂಪ ಪಡೆಯುವಂತೆ ಬಣ್ಣವನ್ನು ಬಹಳ ಸೂಕ್ಷ್ಮವಾಗಿ ಬಳಸಿದರು.

ಕೋಟೆ ಆವರಣದ ಒಳಗಡೆ ಇರುವ ನೌಬತ್‌ ಖಾನಾದಲ್ಲಿ ಹಿಂದೆ ಅನೇಕ ಸಂಗೀತ ಕಾರ್ಯಕ್ರಮ ಗಳು ನಡೆಯುತ್ತಿದ್ದವು. ಎಎಸ್‌ಐ ಈಚೆಗೆ ನೌಬತ್‌ಖಾನಾ ಜೀರ್ಣೋ ದ್ಧಾರಗೊಳಿಸಿದೆ. ಇದರ ಮುಂದೆ ಈಜು ಕೊಳವೂ ಇದೆ. ಇದರ ಮುಂಭಾಗದಲ್ಲಿ ಕುಳಿತ್ತಿದ್ದ ವಿನೋದ ಪಾಂಚಾಳ ಅವರು ಪೆನ್ಸಿಲ್‌ನಿಂದಲೇ ಸ್ಕೆಚ್‌ ಹಾಕಿದರು.

1327ರಲ್ಲಿ ನಿರ್ಮಿಸಿರುವ ಸೋಲಾ ಗುಂಬಜ್ ಕೋಟೆಯಲ್ಲಿರುವ ಮಹತ್ವದ ಸ್ಮಾರಕವಾಗಿದೆ. 16 ಕಂಬಗಳು ಇರುವ ಕಾರಣ ಇದಕ್ಕೆ ಸೋಲಾ ಗುಂಬಜ್‌ ಎನ್ನುವ ಹೆಸರು ಬಂದಿದೆ. ಅಲ್ಲಿ ಮೊದಲು ಸಾಮೂಹಿಕ ಪ್ರಾರ್ಥನೆ ಮಾಡಲಾಗುತ್ತಿತ್ತು. ವಿದ್ಯಾರ್ಥಿನಿ ಆಸ್ಮಾ ಬೇಗಂ ಅವರು ಸೋಲಾ ಗುಂಬಜ್ ಹಾಗೂ ಅದರ ಮುಂದಿನ ಉದ್ಯಾನದ ಚಿತ್ರವನ್ನು ಬಿಡಿಸಿದರು.

ಮಹಮ್ಮದ್‌ ಇಮ್ತಿಯಾಜ್ ಅಹಮ್ಮದ್ ಕೋಟೆ ಪ್ರವೇಶದಲ್ಲಿರುವ ಶಾರಜಾ ದರ್ವಾಜಾ ಹಾಗೂ ನೌಸಿನ್‌ ಫಾತಿಮಾ ಅವರು ಮೆಹಮೂದ್‌ ಗವಾನ್ ಸ್ಮಾರಕದ ಚಿತ್ರವನ್ನು ಅರಳಿಸಿದರು.

‘ನಮ್ಮ ಕಾಲೇಜಿನ ನಾಲ್ಕು ವಿದ್ಯಾರ್ಥಿನಿಯರು ಹಾಗೂ ಐವರು ವಿದ್ಯಾರ್ಥಿಗಳು ಆಸಕ್ತಿಯಿಂದ ಸ್ಪರ್ಧೆ ಯಲ್ಲಿ ಪಾಲ್ಗೊಂಡು ಉತ್ಸಾಹ ತೋರಿ ದ್ದಾರೆ. ಭಾರತೀಯ ಪುರಾತತ್ವ ಸರ್ವೇ ಕ್ಷಣಾ ಇಲಾಖೆಯು ಐತಿಹಾಸಿಕ ಸ್ಮಾರಕಗಳ ರಕ್ಷಣೆ ಹಾಗೂ ಜಾಗೃತಿಗೆ ಸ್ಪರ್ಧೆ ಆಯೋಜಿಸಿರುವುದು ಒಳ್ಳೆಯ ಸಂಗತಿಯಾಗಿದೆ’ ಎಂದು ನ್ಯಾಷನಲ್‌ ಫೈನ್‌ ಆರ್ಟ್‌ ಕಾಲೇಜಿನ ಉಪನ್ಯಾಸಕ ಮಹಮ್ಮದ್ ಮಖೀಬ್ ಹೇಳುತ್ತಾರೆ.

* * 

ವಿಶ್ವ ಪರಂಪರೆ ಸಪ್ತಾಹದ ಅಂಗವಾಗಿ ಒಂದು ವಾರದ ಕಾಲ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ನಗರದ ಎಲ್ಲ ಶಾಲೆಗಳಿಗೂ ಆಹ್ವಾನ ನೀಡಲಾಗಿದೆ
ವಿನಾಯಕ ಶಿರಹಟ್ಟಿ
ಎಎಸ್‌ಐನ ಸಹಾಯಕ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT