ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಂಪರಿಕ ಸ್ಮಾರಕಗಳ ನೆಲಸಮ: ಬೇಸರ

Last Updated 21 ನವೆಂಬರ್ 2017, 8:41 IST
ಅಕ್ಷರ ಗಾತ್ರ

ಧಾರವಾಡ: ‘ಅಭಿವೃದ್ಧಿಯ ಹೆಸರಿನಲ್ಲಿ ಸ್ಮಾರಕಗಳನ್ನು ನೆಲಸಮ ಮಾಡುವ ಮೂಲಕ ಈ ನೆಲದ ಪರಂಪರೆಯನ್ನು ನಾವೇ ನಾಶಗೊಳಿಸುತ್ತಿರುವುದು ವಿಪರ್ಯಾಸ’ ಎಂದು ಇಂಟ್ಯಾಕ್ ಸಂಸ್ಥೆಯ ದೆಹಲಿ ಕೇಂದ್ರ ಕಚೇರಿಯ ಮುಖ್ಯಸ್ಥ ಮೇಜರ್ ಜನರಲ್‌ ಎಲ್‌.ಕೆ.ಗುಪ್ತಾ ಬೇಸರ ವ್ಯಕ್ತಪಡಿಸಿದರು.

ಭಾರತೀಯ ರಾಷ್ಟ್ರೀಯ ಕಲಾ ಮತ್ತು ಸಾಂಸ್ಕೃತಿಕ ಪರಂಪರೆಯ ವಸ್ತುಸಂಗ್ರಹಾಲಯ (ಇಂಟ್ಯಾಕ್) ಸಂಸ್ಥೆ ವತಿಯಿಂದ ಸೋಮವಾರ ಆಯೋಜನೆಗೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ದೇಶದಲ್ಲಿ ಈವರೆಗೂ ಎಂಟು ಸಾವಿರಕ್ಕೂ ಅಧಿಕ ಸ್ಮಾರಕಗಳನ್ನು ಗುರುತಿಸಲಾಗಿದೆ. ಇದರಲ್ಲಿ ಆರನೇ ಒಂದು ಭಾಗದಷ್ಟು ಸ್ಮಾರಕಗಳು ಕರ್ನಾಟಕದಲ್ಲಿವೆ. ಅಂದರೆ, ಸುಮಾರು 1300ಕ್ಕೂ ಅಧಿಕ ಸಂರಕ್ಷಿತ ಸ್ಮಾರಕಗಳು ಈ ರಾಜ್ಯದಲ್ಲಿವೆ. ಆದರೆ, ಇನ್ನೂ ಗುರುತಿಸದ ಬಹಳಷ್ಟು ಸ್ಮಾರಕಗಳು ಈ ನೆಲದಲ್ಲಿವೆ. ಅವುಗಳ ಪತ್ತೆ ಹಾಗೂ ಸಂಶೋಧನೆ ನಡೆಯಬೇಕಿದೆ’ ಎಂದರು.

‘ಭಾರತದಷ್ಟು ಸಾವಿರಾರು ವರ್ಷಗಳ ಇತಿಹಾಸವಿಲ್ಲದ ಇಂಗ್ಲೆಂಡ್‌ನಲ್ಲಿ ಗುರುತಿಸಿರುವ ಪಾರಂಪರಿಕ ಸ್ಮಾರಕಗಳ ಸಂಖ್ಯೆ ಆರು ಲಕ್ಷ ಎಂಬುದನ್ನು ಗಮನಿಸಿದರೆ ಶ್ರೀಮಂತ ಪರಂಪರೆ ಹೊಂದಿರುವ ಭಾರತ ಎಷ್ಟು ಹಿಂದಿರಬಹುದು ಎಂಬುದನ್ನು ಊಹಿಸಬಹುದು’ ಎಂದರು.

‘ಸಂರಕ್ಷಿತ ಸ್ಮಾರಕಗಳೆಂದು ಗುರುತಿಸಿದ್ದರೂ ಅವುಗಳ ರಕ್ಷಣೆಗೆ ಸರ್ಕಾರ ಮುಂದಾಗುತ್ತಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಸ್ಮಾರಕಗಳನ್ನು ನೆಲಸಮಗೊಳಿಸುತ್ತಿರುವ ಸರ್ಕಾರಕ್ಕೆ ಈ ನೆಲದ ಪರಂಪರೆ ಕುರಿತು ಇಷ್ಟೊಂದು ನಿರ್ಲಕ್ಷ್ಯವೇಕೆ ಎಂಬುದೇ ಅರ್ಥವಾಗುತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ಆಗಿನ ನೀರಿನ ಮೂಲಗಳು, ಗುಂಬಜ್‌ಗಳು ಇಂದು ಮರೆಯಾಗುತ್ತಿವೆ. ಪರಂಪರೆ ಇಲ್ಲದೆ ಯಾವುದೇ ಹಳ್ಳಿ ಅಥವಾ ಊರು ಅಭಿವೃದ್ಧಿ ಹೊಂದಿರಲಾರದು. ಪ್ರತಿಯೊಂದು ಊರಿಗೂ ಅಲ್ಲಿಯದೇ ಆದ ಒಂದು ಪರಂಪರೆ ಇರುತ್ತದೆ. ಅದನ್ನು ಉಳಿಸಬೇಕಾದ್ದು ಇಂದಿನ ತುರ್ತು ಅಗತ್ಯವಾಗಿದೆ. ಆದರೆ, ಅಭಿವೃದ್ಧಿಯ ಪಥದಲ್ಲಿ ಪರಂಪರೆಗೆ ಎಳ್ಳಷ್ಟೂ ಬೆಲೆ ಇಲ್ಲದಂತಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪ್ರತಿಯೊಂದು ಜಿಲ್ಲೆಗೂ ಅದರದ್ದೇ ಆದ ಯೋಜನಾ ನಕ್ಷೆ ಇರುತ್ತದೆ. ಆದರೆ, ಅದರಲ್ಲಿ ಪರಂಪರೆಗೆ ಸ್ಥಾನ ನೀಡಿರುವುದನ್ನೇ ಗಮನಿಸಿದರೆ ನಮ್ಮ ಸ್ಮಾರಕಗಳು ನಶಿಸುತ್ತಿರುವುದು ತಿಳಿಯುತ್ತದೆ. ಧಾರವಾಡದ ಸಂಗೀತ, ಇಲ್ಲಿನ ಇತಿಹಾಸವನ್ನು ಹೇಳಬಲ್ಲ ಪರಂಪರೆಯನ್ನು ಉಳಿಸುವ ಕೆಲಸವನ್ನು ಇಂಟ್ಯಾಕ್ ಧಾರವಾಡ ವೃತ್ತದವರು ಮಾಡಬೇಕು’ ಎಂದು ಗುಪ್ತಾ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಭಾಷಾ ತಜ್ಞ ಡಾ. ಜಿ.ಎನ್.ದೇವಿ ಮಾತನಾಡಿ, ‘ಇಂದಿನಿಂದ ಇಡೀ ಜಗತ್ತು ಪರಂಪರೆಯ ಸಪ್ತಾಹವನ್ನು ಆಚರಿಸುತ್ತಿದೆ. ಆದರೆ, ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಇಷ್ಟಪಡಬಹುದಾದ ಬಹಳಷ್ಟು ಪ್ರಮುಖ ಪಾರಂಪರಿಕ ತಾಣಗಳು ಇಂದು ಕೋಮು ದ್ವೇಷಕ್ಕೊಳಾಗುತ್ತಿರುವುದು ವಿಪರ್ಯಾಸ’ ಎಂದರು.

‘ಒಂದು ಕಾಲದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಅಲೆಮಾರಿ ಜನಾಂಗವೊಂದು ಜಗತ್ತಿನಲ್ಲೇ ಖ್ಯಾತಿ ಪಡೆದ ತಾಜ್‌ಮಹಲ್‌, ಕುತುಬ್‌ ಮಿನಾರ್‌ ಹಾಗೂ ಗೋಲ್‌ ಗುಂಬಜ್‌ ಸ್ಮಾರಕ ನಿರ್ಮಾಣದಲ್ಲಿ ಪಾಲ್ಗೊಂಡಿದ್ದವು ಎಂಬುದು ಮರೆಯಾಗಿದೆ. ಇವುಗಳನ್ನು ದಾಖಲಿಸಬೇಕಾದ ಅಗತ್ಯ ಇಂದು ಇದೆ. ಆ ಕಾರ್ಯ ಪ್ರಗತಿಯ ಹಾದಿಯಲ್ಲಿದೆ’ ಎಂದು ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಡಾ.ಎಸ್‌.ರಾಜಶೇಖರ ಅವರು ಸಂಪಾದಿಸಿದ ‘ಬಾದಾಮಿ ಚಾಲುಕ್ಯರು’  ಗ್ರಂಥ ಹಾಗೂ ಡಾ. ಜಿ.ಎನ್.ದೇವಿ ಅವರ ಅಲೆಮಾರಿ ಆದಿವಾಸಿಗಳ ಕುರಿತು ಇಂಗ್ಲಿಷ್‌ನಲ್ಲಿ ರಚಿಸಿದ 3 ಸಂಪುಟಗಳ ವರದಿಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT