ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಶಂಕರಿ ಅಮ್ಮನ ಜಾತ್ರೋತ್ಸವ ಸಂಭ್ರಮ

Last Updated 21 ನವೆಂಬರ್ 2017, 9:20 IST
ಅಕ್ಷರ ಗಾತ್ರ

ಕುಶಾಲನಗರ: ಉತ್ತರ ಕೊಡಗಿನ ಅರೆಮಲೆನಾಡು ಪ್ರದೇಶವಾದ ಹೆಬ್ಬಾಲೆ ಗ್ರಾಮದಲ್ಲಿ ಗ್ರಾಮ ದೇವತೆ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವ ಅದ್ಧೂರಿಯಾಗಿ ನಡೆಯಿತು.

ಉತ್ಸವದ ಅಂಗವಾಗಿ ಭಾನುವಾರ ರಾತ್ರಿ ಆಯೋಜಿಸಿದ್ದ ವಿವಿಧ ಉತ್ಸವ ಮಂಟಪಗಳ ಶೋಭಾಯಾತ್ರೆ ಜನರ ಗಮನ ಸೆಳೆಯಿತು. ಬನಶಂಕರಿ ಅಮ್ಮನ ವರ ದೇವಸ್ಥಾನ ಸಮಿತಿ, ಬಸವೇಶ್ವರ ಸಮಿತಿ, ರಾಮಲಿಂಗೇಶ್ವರ ದೇವಸ್ಥಾನ ಸಮಿತಿ ಆಶ್ರಯದಲ್ಲಿ ಬನಶಂಕರಿ ದೇವಿ ಪೂಜೋತ್ಸವ ನಡೆಯಿತು.

ಮೆರವಣಿಗೆಯಲ್ಲಿ ಮೈಸೂರಿನ ವಾಜಮಂಗಲ ಕಲಾವಿದ ರವಿಕುಮಾರ್ ನೇತೃತ್ವದಲ್ಲಿ ಪ್ರದರ್ಶನಗೊಂಡ ವೀರಭದ್ರೇಶ್ವರ ವೀರಗಾಸೆ ಕುಣಿತ ಗಮನ ಸೆಳೆಯಿತು. ಮದ್ದುಗುಂಡುಗಳ ಪ್ರದರ್ಶನ ಮನಸೂರೆಗೊಂಡಿತು.

ಅಮ್ಮನವರ ಸನ್ನಿಧಾನದಲ್ಲಿ ಬೆಳಿಗ್ಗೆ ಯಿಂದಲೇ ಗಣಪತಿ ಪೂಜೆ, ನವಗ್ರಹ ಸ್ಥಾಪನೆ, ಮೃತ್ಯುಂಜಯ ಹೋಮ, ಮಹಾಮಂಗಳಾರತಿ ಸೇರಿದಂತೆ ಪೂಜಾ ವಿಧಿವಿಧಾನಗಳು ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನೇತೃತ್ವ ದಲ್ಲಿ ನಡೆದವು.

ಮಧ್ಯಾಹ್ನ 12.30ಕ್ಕೆ ಕ್ಷೀರಾಭಿಷೇಕ ಮಹಾಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ಸಂಜೆ 4ಕ್ಕೆ ಕ್ಷೀರಾಭಿಷೇಕ, ಗಣಪತಿ ಪೂಜೆ ನಂತರ ದೇವಿಯ ವಿಗ್ರಹವನ್ನು ವಿವಿಧ ಪುಷ್ಪಗಳಿಂದ ಹಾಗೂ ಆಭರಣಗಳಿಂದ ಅಲಂಕರಿಸಲಾಯಿತು.

ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಹಾಗೂ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.  ಇಡೀ ಗ್ರಾಮವೇ ನವವಧುವಿನಂತೆ ಶೃಂಗಾರಗೊಂಡಿತ್ತು. ಬಸವೇಶ್ವರ ದೇವಾಲಯದ ಬಳಿ ಯಿಂದ ವಿದ್ಯುತ್ ಅಲಂಕೃತ ಮಂಟಪ ದಲ್ಲಿ ಬನಶಂಕರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ನಂತರ ವಾದ್ಯಗೋಷ್ಠಿಗಳೊಂದಿಗೆ ರಾತ್ರಿ 11ಕ್ಕೆ ದೇವಿಯ ಉತ್ಸವವನ್ನು ಮೆರವಣಿಗೆ ಮೂಲಕ ಪವಿತ್ರ ಬನಕ್ಕೆ ಕೊಂಡೊಯ್ಯಲಾಯಿತು.

ಹರಕೆ ಹೊತ್ತ ಭಕ್ತರು 9 ದಿವಸ ಉಪವಾಸ ವ್ರತ ಆಚರಿಸಿ ಉತ್ಸವಗಳೊಂದಿಗೆ ಮೆರವಣಿಗೆಯಲ್ಲಿ ಬಂದು ದೇವಸ್ಥಾನದ ಮುಂದೆ ಹಾಕಿರುವ ಅಗ್ನಿಕುಂಡವನ್ನು ಹಾಯ್ದು ದೇವಿಯ ದರ್ಶನ ಪಡೆದರು. ಮೈಸೂರು, ಹಾಸನ ಜಿಲ್ಲೆಗಳ ಗಡಿಭಾಗದ ಜನರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರೂ ಮಂದಿ ಪಾಲ್ಗೊಂಡಿದ್ದರು.

ಡಿವೈಎಸ್ಪಿ ಮುರುಳೀಧರ್‌, ಸಿಪಿಐ ಕ್ಯಾತೇಗೌಡ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಈ.ಮಹೇಶ್ ಬಂದೋಬಸ್ತ್ ಕಲ್ಪಿಸಿದ್ದರು. ದೇವಸ್ಥಾನದ ಬಳಿ ದಾನಿಗಳಿಂದ ಅನ್ನದಾನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮೈನವಿರೇಳಿಸಿದ ಎತ್ತಿನಗಾಡಿ ಓಟ

ಜಾತ್ರೋತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆ ಏರ್ಪಡಿಸಿದ್ದ ಎತ್ತಿನ ಗಾಡಿ ಓಟದ ಸ್ಪರ್ಧೆ ನೆರೆದಿದ್ದವರ ಮೈನವಿರೇಳಿಸಿತು. ಹಂಪಾಪುರ, ಸರಗೂರು, ಮಲ್ಲಿನಾಥಪುರ, ಕೊಡಗು, ಮೈಸೂರು ಹಾಗೂ ಹಾಸನ, ಚಿಕ್ಕಮಗಳೂರು ಜಿಲ್ಲೆಗ ಜನತೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಮಾದರಿ ಯುವಕ ಸಂಘದ ಆಶ್ರಯದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಎತ್ತಿನ ಗಾಡಿ ಓಟ ಹಾಗೂ ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆಗೆ 100 ಮೀಟರ್ ದೂರ ನಿಗದಿಪಡಿಸಲಾಗಿತ್ತು.

ಬೆಳಿಗ್ಗೆ 11ಕ್ಕೆ ಸ್ಪರ್ಧೆ ಆರಂಭಗೊಂಡಿತು. ಮೈದಾನದ ಇಕ್ಕೆಲಗಳಲ್ಲಿ ನಿಂತಿದ್ದ ಜನ ಶಿಳ್ಳೆ ಹೊಡೆಯುತ್ತ ಎತ್ತುಗಳಿಗೆ ಹುರಿದುಂಬಿಸುತ್ತಿದ್ದರು. ಕೆಲವು ಎತ್ತಿನ ಗಾಡಿಗಳು ಅಡ್ಡಾದಿಡ್ಡಿ ಓಡುತ್ತ ಜನರತ್ತ ಧಾವಿಸಿ ಬಂದವು.

ಸ್ಪರ್ಧೆಗಳಿಗೆ ಜಿ.ಪಂ. ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಶ್ರೀನಿವಾಸ್, ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್.ಎಸ್.ರಾಜಶೇಖರ್, ಎಚ್.ಎಸ್.ರಘು ಚಾಲನೆ ನೀಡಿದರು.

ಮಾದರಿ ಯುವಕ ಸಂಘದ ಅಧ್ಯಕ್ಷ ಎಚ್.ಎಸ್.ಪ್ರವೀಣ್ ಕುಮಾರ್, ಆರ್.ಆರ್.ಕುಮಾರ್, ಉಪಾಧ್ಯಕ್ಷ ಎಚ್.ಎಸ್.ಮನು, ಎಸ್.ಎಸ್.ಯತೀಶ್, ಸಂತೋಷ್, ಸಹ ಕಾರ್ಯದರ್ಶಿ ಶರತ್, ಮುಖಂಡರಾದ ಸುದರ್ಶ, ಎಸ್.ಎಸ್.ನಾಗೇಂದ್ರ, ನವೀನ್, ಬಾಲಾಜಿ, ಮನು, ಜಗದೀಶ್, ಕೃಷ್ಣಮೂರ್ತಿ, ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಮೂರ್ತಿ, ಕರುಂಬಯ್ಯ, ನೀಲಪ್ಪ, ಬೋಜೇಗೌಡ, ಸಂತೋಷ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಸಲಹೆಗಾರರಾದ ಎಚ್.ಎನ್.ಚೇತನ್, ಎಚ್.ಎನ್.ಮಂಜುನಾಥ್, ಕೆ.ಎಸ್.ಪ್ರಸನ್ನಕುಮಾರ್, ಮಾಜಿ ಸೈನಿಕ ಪುಟ್ಟೇಗೌಡ, ಶಿಕ್ಷಕ ಎಚ್.ಜಿ.ಕುಮಾರ್ ಹಾಜರಿದ್ದರು.

ಜತೆಗೆ ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ರಂಗೋಲಿ, ಓಟ ಸ್ಪರ್ಧೆ, ಸಂಗೀತ ಕುರ್ಚಿ, ಮೂರು ಕಾಲಿನ ಓಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ನ. 21ರಂದು ಮಂಗಳವಾರ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತದೆ.

ಎತ್ತಿನ ಗಾಡಿ ವಿಜೇತರು: ಎತ್ತಿನ ಗಾಡಿ ಚಕ್ರಕಟ್ಟಿ ಓಡಿಸುವ ಸ್ಪರ್ಧೆಯಲ್ಲಿ ಸಾಲಿಗ್ರಾಮದ ರಾಜು (9.16 ನಿಮಿಷ) ಪ್ರಥಮ ಸ್ಥಾನ, ಚಿಕ್ಕನಾಯಕಹೊಸಳ್ಳಿ ಭೂಮಿಕಾ (9.47 ನಿಮಿಷ) ದ್ವಿತೀಯ ಸ್ಥಾನ, ಸಾಲಿಗ್ರಾಮ ಮಧು (9.69 ನಿಮಿಷ) ಸಮಾಧಾನಕರ ಬಹುಮಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT